VIDEO| ಎಟಿಎಂ ಕೇಂದ್ರದಲ್ಲಿ ನಡೆದಿತ್ತು ಹೈಟೆಕ್​ ಸಂಚು! ದೇವರಂತೆ ಬಂದ ಗ್ರಾಹಕ ಸಾವಿರಾರು ಜನರ ಹಣ ಉಳಿಸಿದ್ದೇ ಪವಾಡ

atm
Published on

ಹೊಸದುರ್ಗ: ನೀವು ಎಟಿಎಂ ಕಾರ್ಡ್​ ಯೂಸ್​ ಮಾಡ್ತೀರಾ? ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ. ರಾಷ್ಟ್ರೀಕೃತ ಬ್ಯಾಂಕ್​ ಎಟಿಎಂ ಕೇಂದ್ರದಲ್ಲಿ ಸ್ಕಿಮ್ಮರ್​ ಹಾಗೂ ಹಿಡನ್​ ಕ್ಯಾಮರಾ ಅಳವಡಿಸಿ ಖಾತೆದಾರರ ಎಟಿಎಂ ಕಾರ್ಡ್​ನ ದತ್ತಾಂಶ, ಸಿಕ್ರೇಟ್​ ಪಿನ್​ ಕಳವು ಮಾಡುತ್ತಿದ್ದ ಕೃತ್ಯ ಬಯಲಾಗಿದ್ದು, ಇದನ್ನು ಗ್ರಾಹಕರೊಬ್ಬು ಪತ್ತೆ ಹಚ್ಚಿದ್ದಾರೆ. ದುಷ್ಕರ್ಮಿಗಳ ಕೃತ್ಯವನ್ನು ಆ ಗ್ರಾಹಕ ವಿಡಿಯೋ ಸಮೇತ ತೋರಿಸಿದ್ದು, ಇದನ್ನು ನೋಡಿದ್ರೆ ಬೆಚ್ಚಿಬೀಳ್ತೀರಿ!

ಪಟ್ಟಣದ ಮುಖ್ಯರಸ್ತೆಯ ಎಸ್​ಬಿಐ ಬ್ಯಾಂಕ್​ ಸಮೀಪದ ಕೆನರಾ ಬ್ಯಾಂಕ್​ ಎಟಿಎಂ ಕೇಂದ್ರದಲ್ಲಿ ಈ ಕೃತ್ಯ ನಡೆದಿದೆ. ಅ.4ರ ಬೆಳಗ್ಗೆ ಮಾರುಕಟ್ಟೆಗೆ ಹೊರಟಿದ್ದ ಬೆಸ್ಕಾಂ ನೌಕರ ಶ್ರೀಹರಿ ಎಂಬುವವರು ಹಣ ತೆಗೆಯಲು ಕೆನರಾ ಬ್ಯಾಂಕ್​ನ ಎಟಿಎಂಗೆ ಹೋಗಿದ್ದರು. ಎಟಿಎಂ ಯಂತ್ರದ ಕೀಪ್ಯಾಡ್​ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಕಾಣಿಸಿದ್ದು, ಅನುಮಾನಗೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಅವರು ಅಂತರ್ಜಾಲದಲ್ಲಿ ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಆಗಲೇ ಗೊತ್ತಾಗಿದ್ದು ಈ ಎಟಿಎಂ ಯಂತ್ರಕ್ಕೆ ಯಾರೋ ದುಷ್ಕರ್ಮಿಗಳು ಪಿನ್​ ಹೋಲ್​ ಹಿಡನ್​ ಕ್ಯಾಮರಾ ಹಾಗೂ ಸ್ಕಿಮರ್​ ಯಂತ್ರ ಅಳವಡಿಸಿ ಗ್ರಾಹಕರ ಡೆಬಿಟ್​, ಕ್ರೆಡಿಟ್​ ಕಾರ್ಡ್​ಗಳ ರಹಸ್ಯ ದತ್ತಾಂಶ ಕಳ್ಳತನ ಮಾಡುತ್ತಿದ್ದಾರೆಂದು!

'ಎಟಿಎಂ ಕೇಂದ್ರದಲ್ಲಿ ಕಳ್ಳರ ಕೈಚಳಕ ಇರುವ ಅರಿವಾಗುತ್ತಿದ್ದಂತೆ ನಾನು ಕೂಡಲೇ ಬ್ಯಾಂಕ್​ ಸಿಬ್ಬಂದಿ ಹಾಗೂ ಎಟಿಎಂ ನಿರ್ವಾಹಕರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಸೂಕ್ತ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಹಿಡನ್​ ಕ್ಯಾಮರಾ ಹಾಗೂ ಸ್ಕಿಮ್ಮರ್​ ಯಂತ್ರಗಳನ್ನು ವಶಕ್ಕೆ ತೆಗೆದುಕೊಂಡು ಹೋದರು' ಎಂದು ಶ್ರೀಹರಿ ವಿವರಿಸಿದ್ದಾರೆ.

ಗ್ರಾಹಕರೊಬ್ಬರ ಮುನ್ನೆಚ್ಚರಿಕೆ ಫಲವಾಗಿ ಬಹುತೇಕ ಬ್ಯಾಂಕ್​ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಹೆಚ್ಚಿನ ಅಪಾಯ ತಪ್ಪಿಸಿದ ಬೆಸ್ಕಾಂ ನೌಕರನ ಕುರಿತು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net