

ಬೆಂಗಳೂರು: ಬಿಟ್ಕಾಯಿನ್ ಗೋಜಲು ಬಿಡಿಸಿ, ರಾಜ್ಯ ಸರ್ಕಾರ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುವತ್ತ ಬಿಜೆಪಿ ವರಿಷ್ಠರು ಚಿತ್ತ ಹರಿಸಿದ್ದು, ಇದರ ಭಾಗವಾಗಿ ಒಬ್ಬೊಬ್ಬರನ್ನೇ ದೆಹಲಿಗೆ ಕರೆಯಿಸಿ ಅಭಿಪ್ರಾಯ ಸಂಗ್ರಹಿಸಲು ಚಿಂತನೆ ನಡೆಸಿದ್ದಾರೆ. ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಹಿರಿಯ ಸದಸ್ಯರು, ಅದರಲ್ಲೂ ಪಕ್ಷ ಮೂಲದ ಸಚಿವರನ್ನು ಕ್ರಿಯಾಶೀಲಗೊಳಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
100 ದಿನಗಳ ಉತ್ತಮ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಹಿಂದಿಕ್ಕಿ, ಪ್ರಕರಣ ಮುನ್ನೆಲೆಗೆ ಬಂದಿರುವುದು ದೆಹಲಿ ನಾಯಕರನ್ನು ಚಿಂತೆಗೀಡು ಮಾಡಿದೆ. ಸಿಎಂ ಬೊಮ್ಮಾಯಿ ಯಶೋಗಾಥೆ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ತಮಗೆ ಆಪತ್ತು ಕಾದಿಟ್ಟ ಬುತ್ತಿ ಎಂಬ ಕಾರಣಕ್ಕೆ ಪ್ರತಿಪಕ್ಷಗಳು ಜನರ ಗಮನ ಬೇರೆಡೆ ಸೆಳೆಯುವ ತಂತ್ರ ರೂಪಿಸಿದ್ದಾರೆ. ಈ ಕಾರಣಕ್ಕೆ ಬಿಟ್ ಕಾಯಿನ್ ಪ್ರಕರಣದಲ್ಲಿ ನೇರವಾಗಿ ಬೊಮ್ಮಾಯಿಗೆ ಗುರಿಯಿಟ್ಟು ವಾಗ್ದಾಳಿ ನಡೆಸಿದ್ದಾರೆ ಎಂದು ರ್ತಸಲಾಗುತ್ತಿದೆ. ಜತೆಗೆ ಸಚಿವರು ಹಾಗೂ ಪಕ್ಷದ ಹಲವು ಪ್ರಮುಖರು ಮೃದು ನಿಲುವು ತಳೆದಿದ್ದಾರೆ ಎಂಬ ಭಾವನೆ ಮೂಡಿದೆ. ಪ್ರಕರಣದ ಪೂರ್ವಾಪರ ಮಾಹಿತಿ ಈಗಾಗಲೆ ವರಿಷ್ಠರಿಗೆ ದೊರೆತಿದೆ. ‘ಹಾನಿ ನಿಯಂತ್ರಣ’ ಮತ್ತು ಆಡಳಿತದ ಮೇಲೆ ಹಿಡಿತ, ಅಭಿವೃದ್ಧಿ ಕೆಲಸಗಳು ಏರುಪೇರಾಗದಂತೆ ನೋಡಿಕೊಳ್ಳುವುದು ತಕ್ಷಣದ ಆದ್ಯತೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾರ್ಯತಂತ್ರ: ಸರ್ಕಾರದ ವರ್ಚಸ್ಸು ಹಾಗೂ ಪಕ್ಷದ ಸಂಘಟನೆ ಬಲವರ್ಧನೆಗೆ ಬೇಕಾದ ಕಾರ್ಯತಂತ್ರ ಜತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ಗೊಂದಲ ಬಗೆಹರಿಸುವುದಕ್ಕೆ ವರಿಷ್ಠರು ಉತ್ಸುಕರಾಗಿದ್ದು, ತಮ್ಮದೇ ಆದ ಮೂಲದಿಂದ ಸದ್ಯದ ವಿದ್ಯಮಾನಗಳ ಮಾಹಿತಿ ಕಲೆಹಾಕಿದ್ದಾರೆ. ಪಕ್ಷ ಮೂಲದ ಹಿರಿಯ ಸಚಿವರೊಂದಿಗೆ ಮುಂದಿನ ಕಾರ್ಯಯೋಜನೆ ಮತ್ತು ತಂತ್ರಗಾರಿಕೆ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಬಿಟ್ಕಾಯಿನ್ ಪ್ರಕರಣದಲ್ಲಿ ದಾಖಲಾದ ಎಫ್ಐಆರ್, ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿ ಬಳಸಿಕೊಂಡು ಕಾಂಗ್ರೆಸ್ನವರು ಆರೋಪಿಸಿದ್ದು, ಇದೇ ಕೆಲಸ ನೀವೇ ಮುಂಚಿತವಾಗಿ ಮಾಡಬಹುದಿತ್ತಲ್ಲ? ಎಂದೂ ಕೇಳಿದ್ದಾರೆ. ಸರ್ಕಾರದ ಅಸ್ಥಿರತೆಗೆ ಕಾರಣವಾಗುವ ಯಾವುದೇ ಬೆಳವಣಿಗೆಗೆ ಅವಕಾಶ ನೀಡಬಾರದು ಎಂಬ ದೆಹಲಿ ನಾಯಕರ ಸಂದೇಶ ಸರಿಯಾಗಿ ಬಿಸಿ ಮುಟ್ಟಿಸಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು. ಹೀಗಾಗಿ ಪ್ರತಿಪಕ್ಷ ಕಾಂಗ್ರೆಸ್ ಮೇಲೆ ಸರಣಿ ರೂಪದಲ್ಲಿ ಸಚಿವರು, ರಾಜ್ಯದ ಪ್ರಮುಖ ನಾಯಕರು, ಸಂಸದರು, ಶಾಸಕರು, ಪ್ರಮುಖರು ಪ್ರತಿದಾಳಿ ನಡೆಸಿದ್ದಾರೆ.
ಬಿಎಸ್ವೈ ಶೆಟ್ಟರ್ ಮಾತುಕತೆ: ನವದೆಹಲಿಯಿಂದ ಮರಳಿದ ಮಾಜಿ ಸಿಎಂ ಜಗದೀಶ ಶೆಟ್ಟರ್ ‘ಕಾವೇರಿ’ ನಿವಾಸದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ವಿದ್ಯಮಾನಗಳ ಜತೆಗೆ ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯ ಪ್ರಸ್ತಾಪವಾಗಿವೆ ಎನ್ನಲಾಗುತ್ತಿದ್ದು, ಇದೊಂದು ಸೌಜನ್ಯದ ಭೇಟಿಯಾಗಿತ್ತಷ್ಟೇ ಎಂದು ಬಿಎಸ್ವೈ ಆಪ್ತ ಮೂಲಗಳು ಹೇಳಿವೆ.
ಜಾತಿ ಗಣತಿ ಬಿಟ್ರು, ಬಿಟ್ಕಾಯಿನ್ ಹಿಡಿದ್ರು: ಜಾತಿ ಗಣತಿ ವರದಿ ಬಿಟ್ರು, ಬಿಟ್ಕಾಯಿನ್ ಹಿಡಿದ್ರು. ಕಾಂಗ್ರೆಸ್ನವರಿಗೆ ಮಾಡಲು ಬೇರೆ ಕೆಲಸವಿಲ್ಲ. ಪ್ರತಿಯೊಂದರಲ್ಲಿ ಚುನಾವಣಾ ರಾಜಕೀಯ ಲಾಭದ ಕುರಿತು ಯೋಚಿಸುತ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಚಾಯಿಸಿದರು. ಹಗರಣ ನಡೆದಿದೆ ಎನ್ನಲು ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಆಧಾರರಹಿತ ಆರೋಪ ಮಾಡಲು ಯಾರಪ್ಪನ ಗಂಟು ಹೋಗುತ್ತದೆ? ಇದೇ ದಾರಿಯನ್ನು ಕಾಂಗ್ರೆಸ್ ಹಿಡಿದಿದೆ ಎಂದು ಕಿಡಿಕಾರಿದರು. ಅವ್ಯವಹಾರ ನಡೆಯದಿರುವಾಗ ಸಮರ್ಥನೆ ಅಥವಾ ಸಮಜಾಯಿಷಿ ನೀಡುವ ಪ್ರಶ್ನೆಯೇ ಉದ್ಭವಿಸದು. ಇಡೀ ಸಚಿವ ಸಂಪುಟ, ಸಂಸದ-ಶಾಸಕರು ಮಾತ್ರವಲ್ಲ ಇಡೀ ಪಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನಿಗೆ ನಿಂತಿದೆ. ದಕ್ಷ ಹಾಗೂ ಪರಿಣಾಮಕಾರಿ ಆಡಳಿತ ನೀಡುತ್ತಿದ್ದು, ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಪ್ರಿಯತೆ ಗಳಿಸಿದ್ದಾರೆ. ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುತ್ತಿದ್ದಾರೆ ಎಂದು ಈಶ್ವರಪ್ಪ ಶ್ಲಾಘಿಸಿದರು.
ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿಯ ಹಿರಿಯರು ಸಿಎಂ ಬೆನ್ನಿಗೆ ನಿಂತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಈ ನಡುವೆ ಮೂವರು ಹಿರಿಯ ಸಚಿವರು ಕೊನೆಗೂ ಬೊಮ್ಮಾಯಿ ಬೆನ್ನಿಗೆ ನಿಂತಿದ್ದಾರೆ. ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ದಾಖಲೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಸುಳ್ಳಿನ ಸರದಾರರಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಬಿಟ್ ಕಾಯಿನ್ ಹಗರಣವನ್ನು ಅಸ್ತ್ರವಾಗಿ ಬಳಸಲು ಇದೊಂದು ನಾಟಕ. ಫೇಕ್ ನ್ಯೂಸ್ ಕ್ರಿಯೇಟ್ ಮಾಡುವುದು ಕಾಂಗ್ರೆಸ್ಗೆ ಅಂಟಿದ ಚಾಳಿ. ಹಗಲು ಕನಸಿನಲ್ಲೂ ಏನು ಸುಳ್ಳು ಹೇಳಲಿ ಎಂದು ಯೋಚಿಸುತ್ತಾರೆ ಎಂದರು.
ಬುಟ್ಟಿಯಲ್ಲಿ ಹಾವೇ ಇಲ್ಲ: ಕಾಂಗ್ರೆಸ್ನ ಇಬ್ಬರು ಪ್ರಭಾವಿಗಳು ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುತ್ತಾರೆ. ಯಾರು ಆ ನಾಯಕರು ಎಂಬುದನ್ನು ಹೇಳಲಿ. ಹಾವೇ ಇಲ್ಲದ ಬುಟ್ಟಿ ಇಟ್ಟುಕೊಂಡಿದ್ದಾರೆ ಸಿದ್ದರಾಮಯ್ಯ ಪ್ರತಿ ದಿನ ಹಾವು ಬಿಡುತ್ತೇನೆಂದು ಹೇಳಿ ನಗೆಪಾಟಲಿಗೆ ಈಡಾಗುವುದು ಬೇಡ ಎಂದು ಆರ್.ಅಶೋಕ್ ಹೇಳಿದರು.
ಸುಳ್ಳಿನ ಕಂತೆಗೆ ಮಹತ್ವ ಬೇಡ: ಡ್ರಗ್ ಕೇಸ್ನಿಂದ ಹಿಡಿದು ಎಲ್ಲವನ್ನೂ ಹೊರಗೆ ತಂದದ್ದು ನಮ್ಮ ಸರ್ಕಾರ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬೊಮ್ಮಾಯಿ ಗೃಹ ಸಚಿವರಾಗಿದ್ದರು. ರಾಜ್ಯದ ಅಭಿವೃದ್ಧಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ತಿಳಿಸಿ. ಅದನ್ನು ಬಿಟ್ಟು ಸುಳ್ಳಿನ ಕಂತೆಗೆ ಹೆಚ್ಚು ಮಹತ್ವ ನೀಡುವುದು ಸಲ್ಲದು ಎಂದು ವಿ.ಸೋಮಣ್ಣ ಹೇಳಿದರು.
ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮೌನವಾಗಿರುವುದನ್ನು ನೋಡಿ ಆಶ್ಚರ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ. ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಬಿಟ್ ಕಾಯಿನ್ ವಿಚಾರದಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ಅವರು ತಮ್ಮ ಮೌನ ಮುರಿಯಬೇಕು. ಇಲ್ಲವಾದಲ್ಲಿ ಅವರ ‘ನಿಗೂಢ ಮೌನ’ದ ಬಗ್ಗೆ ಜನರು ತಪ್ಪು ತಿಳಿಯಬಹುದು ಎಂದು ತಿವಿದಿದ್ದಾರೆ. ಬಿಟ್ ಕಾಯಿನ್ ಗಂಭೀರ ವಿಷಯವಲ್ಲ ಎಂದು ಸಿಎಂ ಹೇಳುತ್ತಾರೆ, ಹಾಗಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ? ಪೊಲೀಸರ ಪತ್ರಿಕಾ ಪ್ರಕಟಣೆ ಏಕೆ? ರಾತ್ರಿ 9ಕ್ಕೆ ಮಂತ್ರಿಗಳ ಪತ್ರಿಕಾಗೋಷ್ಠಿ ಏಕೆ? ಬಿಜೆಪಿಗರ ಸಿಡಿಮಿಡಿ ಏಕೆ? ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲವೇಕೆ ಎಂದು ಪ್ರಶ್ನೆಗಳನ್ನು ಹಾಕಿದ್ದಾರೆ.
ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ ‘ಬಿಳಿಕಾಲರ್ ಅಪರಾಧ’. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ವರ್ಡ್ ಸೇರಿ ಬಹಳಷ್ಟು ಮಾಹಿತಿಗಳು ಹಗರಣದ ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲವೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಪ್ರಾಣಕ್ಕೆ ಅಪಾಯದ ಸಾಧ್ಯತೆಉಇದ್ದು, ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಶಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಹಗರಣ ಸ್ಪೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವುದು ಪೊಲೀಸರ ನಡವಳಿಕೆಗಳ ಬಗ್ಗೆ ಸಂಶಯಗಳಿಗೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. 2018ರಲ್ಲಿ ನಾನು ಸಿಎಂ ಇದ್ದೆ, ಆಗ ಯಾರು ದೂರು ಕೊಟ್ಟಿಲ್ಲ, ಕೇಸ್ ಸಹ ಇಲ್ಲ. ಅದು ಹೇಗೆ ನಮಗೆ ಗೊತ್ತಾಗುತ್ತೆ ಎಂದು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದರು. ಒಂದು ವೇಳೆ ಬಿಜೆಪಿಯವರಿಗೆ ಗೊತ್ತಿದ್ದಿದ್ದರೆ ಏಕೆ ಸುಮ್ಮನಿದ್ದರು? ವಿರೋಧ ಪಕ್ಷದಲ್ಲಿ ಇದ್ದವರು ಅದನ್ನು ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದು ಏಕೆ ಎಂದು ಪ್ರಶ್ನಿಸಿದರು. ನಾವು ಬಿಜೆಪಿಯವರ ಪ್ರಶ್ನೆಗೆ ಉತ್ತರ ನೀಡುವ ಮೊದಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಬೊಮ್ಮಯಿ ಗೃಹ ಸಚಿವರಾಗಿದ್ದಾಗ ಬಿಟ್ಕಾಯಿನ್ ಹಗರಣ ನಡೆದಿದೆ. ಆ ಕೇಸ್ನಲ್ಲಿ ಯಾರಿದ್ದಾರೆ ಅನ್ನೋದನ್ನ ಬೊಮ್ಮಾಯಿ ಹೇಳಲಿ ಎಂದು ಸವಾಲೆಸೆದರು. ಇನ್ನು ಸಂಸದ ಪ್ರತಾಪ್ ಸಿಂಹ ಪಾಪ, ಅವನ ಹೇಳಿಕೆಗಳ ಬಗ್ಗೆ ನಾನು ಮಾತಾಡಲ್ಲ. ಅವನು ಇಮ್ಮೆಚೂರ್ (ಅಪ್ರಬುದ್ಧ) ರಾಜಕಾರಣಿ. ಮೆಚ್ಯುರಿಟಿ ಬರಬೇಕಲ್ಲ ಎಂದು ಏಕವಚನದಲ್ಲಿ ವ್ಯಂಗ್ಯವಾಡಿದರು.
ಗದಗ: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಜನಪರ ಆಡಳಿತ ನೀಡುತ್ತಾ ಈಗಾಗಲೆ ಯಶಸ್ವಿಯಾಗಿ ಶತದಿನಗಳನ್ನು ಪೂರೈಸಿರುವ ಖ್ಯಾತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು. ಸಿಎಂ ಆಡಳಿತದ ಕಾರ್ಯಸಾಧನೆ ಕಂಡು ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಟ್ಕಾಯಿನ್ ಹೆಸರಿನಲ್ಲಿ ಸರ್ಕಾರದ ಮೇಲೆ ಗೂಬೆ ಕೂರಿಸಲು ಹವಣಿಸುತ್ತಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಟ್ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ ಅದರಿಂದ ರಾಜಕೀಯ ದುರ್ಲಾಭ ಪಡೆದುಕೊಳ್ಳಬಹುದೆಂದು ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಆದರೆ, ಇದೇ ಬಿಟ್ಕಾಯಿನ್ ತಿರುಗುಬಾಣವಾಗಿ ಅವರಿಗೇ ಮುಳುವಾಗಲಿದೆ ಎಂದು ಕುಟುಕಿದ್ದಾರೆ. ಬಿಟ್ಕಾಯಿನ್ ಹಗರಣ ಈಗಾಗಲೇ ಕೆಲವು ಕಾಂಗ್ರೆಸ್ ಮುಖಂಡರ ಕಾಲಿಗೆ ಸುತ್ತಿಕೊಂಡಿರುವುದು ಬಹಿರಂಗವಾಗಿದ್ದರೂ, ತಾವೇ ಸ್ವತಃ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ದುಸ್ಸಾಹಸಕ್ಕೆ ಇಳಿಯುತ್ತಿರುವ ವರ್ತನೆ ವಿಚಿತ್ರವಾಗಿದೆ ಎಂದಿದ್ದಾರೆ.