

ಬೆಂಗಳೂರು: ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಕೆಲವು ದಿನಗಳ ಹಿಂದೆ ವೋಟಿಂಗ್ ಒಂದನ್ನು ಕ್ರಿಯೇಟ್ ಮಾಡಿ, 'ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಇಳಿಯಬೇಕೇ?' ಎಂದು ಕೇಳಿದ್ದರು. ಅದಕ್ಕೆ ಶೇ. 57 ಮತ ಆತ ಆ ಸ್ಥಾನದಿಂದ ಇಳಿಯಬೇಕು ಎಂತಲೇ ಬಂದಿತ್ತು.
ಇದಾಗ ಬಳಿಕ ಎಲಾನ್ ಮಸ್ಕ್ ಜನಾಭಿಪ್ರಾಯವನ್ನು ಪಾಲಿಸುವ ಬದಲು ವರಸೆ ಬದಲಿಸಿದ್ದರು. 'ಆ ಸ್ಥಾನಕ್ಕೆ ತಕ್ಕನಾದಷ್ಟು ಮೂರ್ಖ ಸಿಕ್ಕ ತಕ್ಷಣವೇ ನಾನು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆ ಬಳಿಕ ನಾನು ಬರೀ ಸಾಫ್ಟ್ವೇರ್ ಮತ್ತು ಸರ್ವರ್ ಟೀಮ್ ನಿರ್ವಹಿಸುತ್ತೇನೆ' ಎಂಬುದಾಗಿ ಹೇಳಿದ್ದರು.
ಸಿಇಒ ಸ್ಥಾನಕ್ಕೆ ಮೂರ್ಖನ ಹುಡುಕಾಟದಲ್ಲಿದ್ದೇನೆ ಎಂದು ಹೇಳುವ ಮೂಲಕ ಆ ಸ್ಥಾನಕ್ಕೆ ಯಾರೂ ಅಪ್ಲೈ ಮಾಡಲಾರರು ಎಂಬುದು ಮಸ್ಕ್ ಯೋಚನೆ ಆಗಿತ್ತೇನೋ? ಆದರೆ ಇದೀಗ 'ನಾನು ಮೂರ್ಖನಾಗಲೂ ಸಿದ್ಧ' ಎಂದು ಪರೋಕ್ಷವಾಗಿ ಹೇಳುವ ಮೂಲಕ ವ್ಯಕ್ತಿಯೊಬ್ಬರು ಮಸ್ಕ್ ಟಾಸ್ಕ್ಗೆ ಟಾಂಗ್ ನೀಡಿದ್ದಾರೆ.
ಮಸ್ಕ್ಗೆ ಹೀಗೊಂದು ಟಾಂಗ್ ನೀಡಿರುವುದು ತನ್ನನ್ನು ಇಮೇಲ್ ಕಂಡುಹಿಡಿದಾತ ಎಂದೇ ಘೋಷಣೆ ಮಾಡಿರಕೊಂಡಿರುವ ಡಾ.ಶಿವ ಅಯ್ಯದುರೈ ಎಂಬ ವ್ಯಕ್ತಿ.
ಡಿಯರ್ ಮಸ್ಕ್, ನಾನು ಟ್ವಿಟರ್ ಸಿಇಒ ಆಗಲು ಆಸಕ್ತನಿದ್ದೇನೆ. ನಾನು ಎಂಐಟಿಯಿಂದ ನಾಲ್ಕು ಡಿಗ್ರಿ ಪಡೆದಿದ್ದೇನೆ ಮತ್ತು 7 ಯಶಸ್ವಿ ಹೈಟೆಕ್ ಸಾಫ್ಟ್ವೇರ್ ಕಂಪನಿಗಳನ್ನು ಹುಟ್ಟುಹಾಕಿದ್ದೇನೆ. ಹೇಗೆ ಅಪ್ಲೈ ಮಾಡುವುದು ಎಂಬುದನ್ನು ದಯವಿಟ್ಟು ತಿಳಿಸಿ ಎಂಬುದಾಗಿ ಟ್ಟಿಟರ್ ಸಿಇಒ ಎಲಾನ್ ಮಸ್ಕ್ ಹ್ಯಾಂಡಲ್ ಮೆನ್ಷನ್ ಮಾಡಿ ಕೇಳಿದ್ದಾರೆ.
ರೇ ಟೊಮ್ಲಿನ್ಸನ್ ಎಂಬಾತ 1971ರಲ್ಲಿ ಇ-ಮೇಲ್ ಕಂಡುಹಿಡಿದ್ದಿದ್ದು ಎಂಬ ಒಂದು ಸಂಗತಿ ಇಂಟರ್ನೆಟ್ನಲ್ಲಿ ಕಾಣಸಿಗುತ್ತದೆ. ಮತ್ತೊಂದೆಡೆ ವಿ.ಎ.ಶಿವ ಅಯ್ಯದುರೈ 1970ರಲ್ಲೇ ನಾನು ಇಮೇಲ್ ಕಂಡುಹಿಡಿದಿದ್ದು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಇಮೇಲ್ ವಿಷಯ ಏನೇ ಇರಲಿ, ಈಗ ಟ್ವಿಟರ್ ಸಿಇಒ ಸ್ಥಾನಕ್ಕೆ ಅವರು ಅಪ್ಲೈ ಮಾಡಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಮಸ್ಕ್ ಅವರನ್ನು ಮೂರ್ಖ ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಕೂಡ ಮೂಡಿದೆ. ಇದಕ್ಕೆ ಮಸ್ಕ್ ಇನ್ನೂ ಪ್ರತಿಕ್ರಿಯಿಸಿದಂತಿಲ್ಲ.