

ಉತ್ತರಪ್ರದೇಶ: ಮುಂದಿನ ಲೋಕಸಭೆ ಚುನಾವಣೆಯಲ್ಲಿ(Loksabha Elections) ಸ್ಪರ್ಧಿಸಬೇಕಾದರೆ ಮಥುರಾದಿಂದ(Mathura) ಮಾತ್ರ ಸ್ಪರ್ಧಿಸುತ್ತೇನೆ ಹೊರತು ಬೇರೆ ಯಾವುದೇ ಕ್ಷೇತ್ರದಿಂದಲ್ಲ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
ನಟಿ-ರಾಜಕಾರಣಿಯಾದ ಹೇಮಾ ಮಾಲಿನಿ(Hema Malini) ಅವರು, 2014 ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಮಥುರಾ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಾಗಿ ಸುದ್ದಿಗಾರರಿಗೆ ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮಥುರಾದಿಂದ ಮಾತ್ರ ಸ್ಪರ್ಧಿಸಲು ಬಯಸುವೆ. ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಸ್ತಾಪವಿದ್ದರೆ ಅದನ್ನು ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(NDA) ಸರ್ಕಾರ 9 ವರ್ಷಗಳನ್ನು ಪೂರೈಸಿದರ ಬಗ್ಗೆ ಹೇಮಾ ಮಾಲಿನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂರನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಗಳ ಬಗ್ಗೆ ಪ್ರಶ್ನಿಸಿದಾಗ, "ಪಕ್ಷವು ಬಯಸಿದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಯಾವುದೇ ಸಮಸ್ಯೆ ಇಲ್ಲ. ಮಥುರಾದಿಂದ ಮಾತ್ರ ಸ್ಪರ್ಧಿಸುತ್ತೇನೆ. ಕಾರಣ, ಭಗವಾನ್ ಕೃಷ್ಣ ಮತ್ತು ಆತನ ಭಕ್ತರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದೇನೆ. ಅವರ ಸೇವೆಯನ್ನು ಮುಂದುವರಿಸಲು ಬಯಸುತ್ತೇನೆ. ಕಳೆದ 9 ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಕೆಲಸದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರುತ್ತಾರೆ" ಎಂದು ನಟಿ ಹೇಮಾ ಮಾಲಿನಿ ತಮ್ಮ ಪಕ್ಷದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು,(ಏಜೆನ್ಸೀಸ್).