

ಲಂಡನ್: ಅಚ್ಚರಿಯಾದರೂ ಸತ್ಯ. ಈ ಒಂದು ಪೈನಾಪಲ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ. ಅರ್ರೇ, ಒಂದು ಅನಾನಸ್ಗೆ ಇಷ್ಟೊಂದು ಬೆಲೆಯಾ? ಯಾಕಿರಬಹುದು? ಏನಿದರ ವಿಶೇಷತೆ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಮಾಹಿತಿ.
ಹೌದು, ಇಂಗ್ಲೆಂಡ್‌ನಲ್ಲಿ ಬೆಳೆಯಲಾಗುವ ಈ ಪೈನಾಪಲ್ ಹೆಸರು ಹೆಲಿಗಾನ್ ಅನಾನಸ್. ಈ ವಿಶೇಷವಾದ ತಳಿಯನ್ನು ಬ್ರಿಟನ್‌ನ ಕಾರ್ನ್ವಾಲ್ನಲ್ಲಿರುವ ಹೆಲಿಗ್ನ ಉದ್ಯಾನವನದ ಪ್ರದೇಶದಲ್ಲಿ ಬೆಳೆಯುವ ಕಾರಣ ಹೆಲಿಗನ್ ಅನಾನಸ್ ಎಂದು ಖ್ಯಾತಿಯನ್ನು ಪಡೆದುಕೊಂಡಿದೆ.
ಸಾಗಾಟ, ಬಂಡವಾಳ, ಲಾಭ, ಕಾರ್ಮಿಕರ ವೆಚ್ಚ ಸೇರಿ ಹಣ್ಣು, ತರಕಾರಿಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ. ಅಂತೆಯೇ ಹೆಲಿಗಾನ್ ಪೈನಾಪಲ್ನ ಬೆಲೆಯೂ ನಿರ್ಧರವಾಗಿದೆ. ಮುಖ್ಯವಾಗಿ ಈ ಪೈನಾಪಲ್ಗೆ ಇಷ್ಟೊಂದು ಬೆಲೆ ಯಾಕೆಂದು ಪ್ರಶ್ನಿಸಿದರೆ ಉತ್ತರ, ಹೆಲಿಗಾನ್ ಅನಾನಸ್ ಫಸಲು ಬರಲು ಬರೋಬ್ಬರಿ ಎರಡರಿಂದ ಮೂರು ವರ್ಷ ಬೇಕಾಗುತ್ತದೆ.
ವರದಿಯ ಪ್ರಕಾರ, ಈ ವಿಶೇಷವಾದ ಹೆಲಿಗಾನ್ ಅನಾನಸ್ ತಳಿಯನ್ನು 1819ರಲ್ಲಿ ಇಂಗ್ಲೆಂಡ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವೇಳೆ ಬ್ರಿಟನ್‌ನ ಹವಾಮಾನವು ಕೃಷಿಗೆ ಸೂಕ್ತವಲ್ಲ ಎಂದು ಅರಿತುಕೊಂಡ ಅಂದಿನ ತೋಟಗಾರಿಕಾ ತಜ್ಞರು ಇದನ್ನು ಬೆಳೆಯಲು ವಿಶೇಷವಾದ ವಿಧಾನವನ್ನು ರೂಪಿಸಿದ್ದರು. ಇದಕ್ಕಾಗಿ ವಿಶೇಷ ಮರದ ಪಿಟ್-ಆಕಾರದ ಮಡಕೆಗಳನ್ನು ವಿನ್ಯಾಸಗೊಳಿಸಿ, ಕೊಳೆಯುವ ಗೊಬ್ಬರದ ಜತೆಗೆ ಬ್ಯಾಕಪ್ ಹೀಟರ್ ಬಳಸಿ ಈ ತಳಿಯನ್ನು ಆವಿಷ್ಕರಿಸಿದರು.
ಹೆಲಿಗಾನ್ ಅನಾನಸ್ ತಳಿಯನ್ನು ಬೆಳೆಯಲು ಇಂದಿಗೂ ಹಸಿರುಮನೆ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ. ಹೆಲಿಗಾನ್ ಅನಾನಸ್ ಫಸಲು ಬರಲು 2-3 ವರ್ಷಗಳೆ ಬೇಕಾಗುತ್ತದೆ. ಈ ವೇಳೆ ಇದನ್ನು ಫಲವತ್ತಾಗಿ ಸಂರಕ್ಷಿಸುವುದೇ ಸವಾಲಾಗಿರುತ್ತದೆ. ಹೀಗಾಗಿ ಒಂದು ಹಣ್ಣಿಗೆ ಒಂದು ಲಕ್ಷದಷ್ಟು ರೂಪಾಯಿಯಷ್ಟು ವೆಚ್ಚ ತಗಲುತ್ತದೆ ಎಂದು ಈ ಹಣ್ಣನ್ನು ಬೆಳೆಯುವ ರೈತರು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)