

ವಿಭಿನ್ನ ಆಚರಣೆಗಳನ್ನು ಒಳಗೊಂಡ ಕದ್ರಾದ ಮಹಾಮಾಯಾ ದೇವರ ಸುಗ್ಗಿ ಮೇಳವು ಕಾರವಾರ ತಲುಪಿದೆ. ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಮನೆಯ ಎದುರು ಶನಿವಾರ ಮಧ್ಯಾಹ್ನ ಪ್ರದರ್ಶನ ನೀಡಿ, ತೆರಳಿದೆ.
ಕದ್ರಾ ಮಹಾಮಾಯಾ ದೇವಸ್ಥಾನದ ಅರ್ಚಕ ಗೋವಿಂದ ಮಿರಾಶಿ ಅವರ ನೇತೃತ್ವದಲ್ಲಿ 30 ಕೇಸರಿ ಲುಂಗಿ ಉಟ್ಟ 30 ರಷ್ಟು ಯುವಕರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಆನಂದ ಅಸ್ನೋಟಿಕರ್ ಅವರ ಪತ್ನಿ ಗೌರಿ ಮೇಳಕ್ಕೆ ಗೌರವ ಸಮರ್ಪಣೆ ಮಾಡಿದರು.
ಸಾಮಾನ್ಯವಾಗಿ ಸುಗ್ಗಿ ಮೇಳದಲ್ಲಿ ಬಣ್ಣದ ಪುಗಡಿ ಕಟ್ಟುವುದು, ಕೋಲಾಟ ಆಡುವ ಸಂಪ್ರದಾಯವಿದೆ. ಆದರೆ, ಹೀರಾ ಮೇಳ ಎಂದು ಕರೆಸಿಕೊಳ್ಳುವ ಕದ್ರಾದ ಸುಗ್ಗಿ ಮೇಳ ಭಿನ್ನವಾಗಿದೆ. ನವಮಿಯ ದಿನ ಮಹಾಮಾಯಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಈ ಮೇಳ ಸಂಚಾರ ಆರಂಭಿಸುತ್ತದೆ. ಕಾಳಿ ನದಿಯ ಎಡ ಹಾಗೂ ಬಲ ದಂಡೆಗಳ ಊರುಗಳ ಆಯ್ದ ಮನೆಗಳ ಎದುರು ಮಾತ್ರ ಪ್ರದರ್ಶನ ನೀಡಿ ಹೋಳಿ ಹುಣ್ಣಿಮೆಯ ದಿನ ವಾಪಸ್ ಕದ್ರಾ ತಲುಪಲಿದೆ.
ದೇವರ ಪೂಜೆಗೆ ಬಳಸುವ ಬೆಳ್ಳಿಯ ಬೆತ್ತ, ಛತ್ರ, ಚಾಮರ, ಖಡ್ಗ ಮುಂತಾದ ವಸ್ತುಗಳನ್ನು ಮೇಳದಲ್ಲಿ ಹಿಡಿದು ತರಲಾಗುತ್ತದೆ. ಅದನ್ನೇ ದೇವರು ಎಂದು ಪರಿಗಣಿಸಿ ಪೂಜೆ ಸಲ್ಲಿಸಲಾಗುತ್ತದೆ. ಡೋಲಿನ ಸದ್ದಿಗೆ ಮೇಳದಲ್ಲಿ ಭಾಗವಹಿಸಿದ ಯುವಕರು ಬೆಳ್ಳಿಯ ಖಡ್ಗ ಝಳಪಿಸುತ್ತಾರೆ. ಅತಿ ಹರಿತಾದ ಖಡ್ಗವನ್ನು ಕಣ್ಣು ಮುಚ್ಚಿಕೊಂಡು ಝಳಪಿಸಿದರೂ ದೇವರ ಪವಾಡದಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ ಎಂಬುದು ಜನರ ನಂಬಿಕೆ.
`ತಲೆ, ತಲಾಂತರಗಳಿಂದ ಈ ಆಚರಣೆ ಮಾಡಿಕೊಂಡು ಬಂದಿದ್ದು, ಮೇಳ ಸಂಚಾರ ಮಾಡುವುದರಿಂದ ಗ್ರಾಮದಲ್ಲಿ ದುಷ್ಟ ಶಕ್ತಿಗಳು ದೂರವಾಗುತ್ತವೆ ಎಂಬುದು ನಮ್ಮ ನಂಬಿಕೆ' ಎನ್ನುತ್ತಾರೆ. ಕದ್ರಾ ಮಹಾಮಾಯಾ ದೇವರ ಪ್ರಧಾನ ಅರ್ಚಕ ಗೋವಿಂದ ಮಿರಾಶಿ