

Heer Express Review : ನಾಯಕಿ ಹೀರ್ ವಾಲಿಯಳನ್ನು ಪರಿಚಯಿಸುವುದರೊಂದಿಗೆ ಹೀರ್ ಎಕ್ಸ್‌ಪ್ರೆಸ್ ಸಿನಿಮಾ ಆರಂಭವಾಗುತ್ತದೆ. ಪಂಜಾಬ್‌ನಲ್ಲಿ ತನ್ನ ಚಿಕ್ಕಪ್ಪಂದಿರೊಂದಿಗೆ (ಸಂಜಯ್ ಮಿಶ್ರಾ ಮತ್ತು ಗುಲ್ಶನ್ ಗ್ರೋವರ್) ವಾಸಿಸುತ್ತಿರುವ ಹೀರ್, ಪಕ್ಕದ ಮನೆಯ ಸಾಮಾನ್ಯ ಹುಡುಗಿಯಷ್ಟೇ ಅಲ್ಲ. ಆಕೆ ಧಾಬಾ ನಡೆಸುತ್ತಾಳೆ, ವೃತ್ತಿಪರರಂತೆ ಅಡುಗೆ ಮಾಡುತ್ತಾಳೆ, ಕಾರುಗಳನ್ನು ರಿಪೇರಿ ಮಾಡುತ್ತಾಳೆ ಮತ್ತು ಕುದುರೆಗಳನ್ನು ಸಹ ಸುಲಭವಾಗಿ ಸವಾರಿ ಮಾಡುತ್ತಾಳೆ. ಹೀಗಿರುವಾಗ ಲಂಡನ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುವ ಅವಕಾಶ ಸಿಕ್ಕಾಗ ಆಕೆಯ ಜೀವನಕ್ಕೆ ಮಹತ್ವದ ತಿರುವು ನೀಡುತ್ತದೆ. ರೋನಿ (ಪ್ರಿತ್ ಕಮಾನಿ) ಎಂಬ ಯುವಕನ ಭೇಟಿ, ಆತನ ಪ್ರೀತಿ, ಕುಟುಂಬದ ಗೊಂದಲಗಳು, ಎದುರಾಗುವ ಸ್ಪರ್ಧೆಗಳು ಮತ್ತು ತಂದೆಯ ಕೆಲ ರಹಸ್ಯಗಳು ಆಕೆಯ ಕನಸಿಗೆ ಸವಾಲಾಗುತ್ತವೆ. ಅದೆಲ್ಲವನ್ನು ದಾಟಿ ಆಕೆ ತನ್ನ ಕನಸ್ಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾಳೆ ಅನ್ನೋದನ್ನು ತಿಳಿಯಲು ನೀವು ಹೀರ್ ಎಕ್ಸ್‌ಪ್ರೆಸ್ ಸಿನಿಮಾ ನೋಡಲೇಬೇಕು.
ಹೀರ್ ಎಕ್ಸ್‌ಪ್ರೆಸ್ ಒಂದು ಸಾಂಪ್ರದಾಯಿಕ ಬಾಲಿವುಡ್ ಫ್ಯಾಮಿಲಿ ಎಂಟರ್‌ಟೈನರ್. ಫೀಲ್ ಗುಡ್ ಸಿನಿಮಾ ಇಷ್ಟಪಡುವವರಿಗೆ ಒಂದು ಉತ್ತಮ ಸಿನಿಮಾ ಎನ್ನಬಹುದು. ಈ ಚಿತ್ರವು ಹಾಸ್ಯ ಮತ್ತು ಪ್ರೀತಿಯ ಸನ್ನಿವೇಶಗಳೊಂದಿಗೆ ಶುರುವಾಗುತ್ತದೆ. ಲಂಡನ್‌ನಲ್ಲಿ ಹೀರ್, ರೋಹನ್ ಅಹುಜಾ ಅಲಿಯಾಸ್ ರೋನಿ (ಪ್ರೀತ್ ಕಮಾನಿ) ಎಂಬ ಯುವಕನನ್ನು ಭೇಟಿಯಾಗುತ್ತಾಳೆ. ಹೀರ್ಳನ್ನು ನೋಡುವ ರೋನಿ ತಕ್ಷಣವೇ ಆಕೆಯ ಮೋಡಿಗೆ ಮಾರುಹೋಗುತ್ತಾನೆ. ಇಬ್ಬರ ನಡುವಿನ ಮುದ್ದಾದ ಮತ್ತು ತಂಗಾಳಿಯ ಕ್ಷಣಗಳಿಂದ ತುಂಬಿರುವ ಪ್ರೇಮಕತೆಯು ಮೊದಲಾರ್ಧವನ್ನು ಹೆಚ್ಚು ಇಂಟೆರೆಸ್ಟಿಂಗ್ ಆಗಿಸಿದೆ. ಆದಾಗ್ಯೂ, ರೆಸ್ಟೋರೆಂಟ್ ಮಾಲೀಕನ ಪಾತ್ರಧಾರಿ ಅಶುತೋಷ್ ರಾಣಾ ಬಗ್ಗೆ ಆಘಾತಕಾರಿ ಸತ್ಯವನ್ನು ಹೀರ್ ತಿಳಿದುಕೊಂಡಾಗ ಇಡೀ ಸಿನಿಮಾ ಒಂದು ನಾಟಕೀಯ ತಿರುವು ಪಡೆದುಕೊಳ್ಳುತ್ತದೆ. ಇದರ ಜೊತೆಗೆ ವೃತ್ತಿಪರ ಹೋರಾಟ ಮತ್ತು ಸಾಂಸ್ಕೃತಿಕ ಹೊಂದಾಣಿಕೆಗಳು ಸೇರಿ ನಾಯಕಿ ಹೀರ್ ಇದ್ದಕ್ಕಿದ್ದಂತೆ ಸಂಘರ್ಷಗಳ ಸುಳಿಯಲ್ಲಿ ಸಿಲುಕುತ್ತಾಳೆ.
ಇನ್ನು ಸಿನಿಮಾದ ದ್ವಿತೀಯಾರ್ಧದಲ್ಲಿ ವೀಕ್ಷಕರನ್ನು ಹೆಚ್ಚು ಗಂಭೀರವಾಗಿಸುತ್ತದೆ. ಕೌಟುಂಬಿಕ ಮೌಲ್ಯಗಳು, ನಾಯಕಿ ಹೀರ್ಗೆ ಎದುರಾಗುವ ಭಾವನಾತ್ಮಕ ಸಂದಿಗ್ಧತೆಗಳು ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಇಡೀ ಕಥಾಹಂದರವು ಹೃದಯಸ್ಪರ್ಶಿ ಮತ್ತು ಭಾವನೆಗಳಿಂದ ತುಂಬಿದ್ದರೂ, ಕೆಲವು ಹಂತಗಳಲ್ಲಿ ಊಹಿಸಬಹುದಾದಂತಿದೆ. ಆದರೂ, ಕುಟುಂಬ ಸಂಬಂಧಗಳು ಮತ್ತು ಮಹಿಳಾ ಸಬಲೀಕರಣದ ಒಳ್ಳೆಯ ಸಂದೇಶವಿದೆ. ಕುಟುಂಬದೊಂದಿಗೆ ಒಳ್ಳೆಯ ವೀಕೆಂಡ್ ಕಳೆಯುವುದಾದರೆ ಹೀರ್ ಎಕ್ಸ್‌ಪ್ರೆಸ್ ಒಂದು ಉತ್ತಮ ಸಿನಿಮಾ ಎನ್ನಬಹುದು.
ಹೀರ್ ಪಾತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಸಿಕೊಂಡಿರುವ ದಿವಿತಾ ಜುನೇಜಾ ತನ್ನ ಚೊಚ್ಚಲ ಚಿತ್ರದಲ್ಲೇ ನಟನೆಯಲ್ಲಿ ಮಿಂಚು ಹರಿಸಿದ್ದಾರೆ. ನಟನೆ ಮಾತ್ರವಲ್ಲದೇ ಸೌಂದರ್ಯದಲ್ಲೂ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ. ತಮಗೆ ಸಿಕ್ಕ ಪಾತ್ರವನ್ನು ಎಲ್ಲಿಯೂ ದುರ್ಬಲವಾಗಲು ಬಿಡದಂತೆ ಸಹಜವಾಗಿ ಅಭಿನಯಿಸಿದ್ದಾರೆ. ಅನುಭವಿ ನಟರೊಂದಿಗೆ ಪರದೆ ಹಂಚಿಕೊಂಡರೂ, ದಿವಿತಾ ಮಾತ್ರ ಎಲ್ಲಿಯೂ ಪ್ರೇಕ್ಷಕರ ಗಮನದಿಂದ ಹೊರಗುಳಿಯುವುದಿಲ್ಲ. ಅವರ ಅಭಿನಯವು ಬಾಲಿವುಡ್‌ನಲ್ಲಿ ಉಜ್ವಲ ಭವಿಷ್ಯ ಇದೆ ಎಂಬುದನ್ನು ಸೂಚಿಸುತ್ತದೆ. ಇನ್ನು ರೋಹನ್ ಪಾತ್ರದಲ್ಲಿ ಪ್ರಿತ್ ಕಮಾನಿ ಗಮನ ಸೆಳೆಯುತ್ತಾರೆ. ದಿವಿತಾ ಜತೆ ಅವರ ಕೆಮಿಸ್ಟ್ರಿ ಚೆನ್ನಾಗಿದೆ. ಪ್ರೀತಿ, ಸಂತೋಷ ಅಥವಾ ತೀವ್ರವಾದ ಭಾವನೆಗಳ ಸನ್ನಿವೇಶಗಳಲ್ಲಿ ಇಬ್ಬರ ನಟನೆ ಶ್ಲಾಘನೀಯ. ಇನ್ನು ಅವರಿಬ್ಬರ ನೃತ್ಯ ಕೌಶಲ್ಯವು ಸಿನಿಮಾಗೆ ಇನ್ನಷ್ಟು ಬೂಸ್ಟ್ ನೀಡುತ್ತದೆ.
ಸಂಜಯ್ ಮಿಶ್ರಾ ಮತ್ತು ಗುಲ್ಶನ್ ಗ್ರೋವರ್ ಆಗಾಗ ತಮ್ಮ ಹಾಸ್ಯದಿಂದ ಪ್ರೇಕ್ಷಕರನ್ನು ನಗಿಸುತ್ತಾರೆ. ಈ ಸಿನಿಮಾದಲ್ಲಿ ಪೋಷಕ ಪಾತ್ರವರ್ಗವು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಈ ಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಇನ್ನು ಹಿನ್ನೆಲೆ ಸಂಗೀತವು ಚಿತ್ರಕ್ಕೆ ಪೂರಕವಾಗಿದ್ದು, ಪ್ರೇಕ್ಷರನ್ನು ಸಿನಿಮಾದ ಉದ್ದಕ್ಕೂ ಹಿಡಿದಿಟ್ಟುಕೊಳ್ಳುತ್ತದೆ. ವಿಶೇಷವಾಗಿ, ಪಂಜಾಬಿ ಬೀಟ್‌ಗಳು ಹೀರ್ ಅವರ ಪ್ರಯಾಣದ ಸಾಂಸ್ಕೃತಿಕ ಸಾರಕ್ಕೆ ಹೊಂದಿಕೊಳ್ಳುತ್ತದೆ. ಹೀಗಾಗಿ ಇದು ಭಾವನಾತ್ಮಕ ಸನ್ನಿವೇಶಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ.
ಒಟ್ಟಾರೆ ಹೀರ್ ಎಕ್ಸ್‌ಪ್ರೆಸ್ ಸಿನಿಮಾ ಒಂದು ಫೀಲ್ ಗುಡ್ ಸಿನಿಮಾ. ಕುಟುಂಬದ ಮಂದಿಯೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿದೆ. ಊಹಿಸಬಹುದಾದ ಕತೆ ಇದ್ದರು ಕೂಡ ಪ್ರೇಕ್ಷಕರ ಮನಮುಟ್ಟುವಂತಿದೆ. ವೀಕೆಂಡ್ನಲ್ಲಿ ಒಂದೊಳ್ಳೆ ಸಿನಿಮಾ ನೋಡುವ ಬಯಕೆ ಇದ್ದರೆ ಹೀರ್ ಎಕ್ಸ್‌ಪ್ರೆಸ್ ಸಿನಿಮಾ ಒಂದು ಉತ್ತಮ ಆಯ್ಕೆ ಎನ್ನಬಹುದಾಗಿದೆ.
ಅಂದಹಾಗೆ, ಹೀರ್ ಎಕ್ಸ್‌ಪ್ರೆಸ್ (Heer Express) ಅನ್ನು ಉಮೇಶ್ ಶುಕ್ಲಾ ಅವರು ನಿರ್ದೇಶಿಸಿದ್ದಾರೆ. ಟುಲಿಪ್ ಎಂಟರ್‌ಟೈನ್‌ಮೆಂಟ್, ದಿವಿಸಾ ಎಂಟರ್‌ಟೈನ್‌ಮೆಂಟ್, ಮೆರ್ರಿ ಗೋ ರೌಂಡ್ ಸ್ಟುಡಿಯೋಸ್ ಮತ್ತು ಕ್ರಿಯೇಟಿವ್ ಸ್ಟ್ರೋಕ್ಸ್ ಗ್ರೂಪ್ ಸೇರಿದಂತೆ ಹಲವಾರು ನಿರ್ಮಾಣ ಸಂಸ್ಥೆಗಳು ನಿರ್ಮಿಸಿವೆ. ಈ ಚಿತ್ರದಲ್ಲಿ ದಿವಿತಾ ಜುನೇಜಾ (ಹೀರ್ ಪಾತ್ರದಲ್ಲಿ), ಪ್ರಿತ್ ಕಮಾನಿ, ಅಶುತೋಷ್ ರಾಣಾ, ಗುಲ್ಶನ್ ಗ್ರೋವರ್, ಸಂಜಯ್ ಮಿಶ್ರಾ ಮತ್ತು ಮೇಘನಾ ಮಾಲಿಕ್ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 12ರಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ದಿವಿತಾ ಜುನೇಜಾ ಅವರ ಮೊದಲ ಸಿನಿಮಾ. (ಏಜೆನ್ಸೀಸ್)