ಪಾಕ್​​ನಲ್ಲಿ ಧಾರಾಕಾರ ಮಳೆ; ಬಲಿಯಾದವರ ಸಂಖ್ಯೆ 657ಕ್ಕೆ ಏರಿಕೆ; 1,000 ಜನರಿಗೆ ಗಾಯ | Heavy rains

WhatsApp Image 2025-08-18 at 6.36.42 PM
Published on

ಇಸ್ಲಾಮಾಬಾದ್: ಜೂನ್ ಅಂತ್ಯದಿಂದ ಪಾಕಿಸ್ತಾನದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 657 ಜನರು ಮೃತಪಟ್ಟಿದ್ದು ಮತ್ತು ಸುಮಾರು 1,000 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಇಂದು (ಆ.18) ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಪುನರಾರಂಭಿಸಿದ್ದು, ಇಂದೂ ಕೂಡ ಭಾರೀ ಮಳೆಯಿಂದಾಗಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಭಾರೀ ಮಳೆಯಿಂದಾಗಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸ್ವಾತ್ ಮತ್ತು ಬಿಜೌರ್​ನ ಮಹಾಮಳೆ ಸಂತ್ರಸ್ತ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಕೂಡ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಸೇನಾ ತಂಡಗಳು, ಜಲಾವೃತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುತ್ತಿವೆ. ರಕ್ಷಣೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಎಲ್ಲ ಲಭ್ಯ ಸಂಪನ್ಮೂಲಗಳನ್ನು ಬಳಸುವಂತೆ ಖೈಬರ್ ಪಖ್ತೂನ್​ಖ್ವಾ ಮುಖ್ಯಮಂತ್ರಿ ಅಮೀನ್ ಅಲಿ ಗಂಡಾಪುರ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಪ್ರವಾಹದಿಂದ ಹಲವು ಮನೆಗಳು, ಅನೇಕ ವಾಹನಗಳು, ಶಾಲಾ ಕಟ್ಟಡಗಳು ಮತ್ತು ಆರೋಗ್ಯ ಘಟಕಗಳು ಹಾನಿಗೊಂಡಿವೆ. ಈಶಾನ್ಯದ ನೀಲಂ ಕಣಿವೆಯಲ್ಲಿ ಕೂಡ ಜನಜೀವನ ಅಸ್ತವ್ಯಸ್ತಗೊಂಡಿದ್ದು ಪ್ರವಾಸಿಗರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪರ್ವತ ಜಿಲ್ಲೆಯಾದ ಬುನೇರ್‌ನಲ್ಲಿ ಮೇಘಸ್ಫೋಟದಿಂದ ಭೀಕರ ಪ್ರವಾಹ ಉಂಟಾಗಿದ್ದು, ಗಂಟೆಗಳ ಕಾಲ ನಡೆಸಿದ ಪ್ರಯತ್ನದ ನಂತರ 54 ಶವಗಳು ಪತ್ತೆಯಾಗಿವೆ. ಅನೇಕ ಮಂದಿ ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ತುರ್ತು ಸೇವೆಯ ವಕ್ತಾರ ಮೊಹಮ್ಮದ್ ಸುಹೈಲ್ ಹೇಳಿದ್ದಾರೆ. ಈಗಿನಿಂದ ಮಂಗಳವಾರದ ನಡುವೆ ಹೆಚ್ಚಿನ ಪ್ರವಾಹ ಮತ್ತು ಭೂಕುಸಿತಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸ್ಥಳೀಯ ಆಡಳಿತ ಜಾಗರೂಕರಾಗಿರುವಂತೆ ಒತ್ತಾಯಿಸಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net