

ಬೆಂಗಳೂರು: ರಾಜ್ಯದ ಕೆಲವೆಡೆ ಮಾತ್ರ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಬಿರುಸುಗೊಳ್ಳಲಿದೆ. ಶುಕ್ರವಾರ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಳೂರು, ಕಮಠಾಣಾ ಹಾಗೂ ಬೀದರ್ ಉತ್ತರ ಭಾಗಗಳಲ್ಲಿದಲ್ಲಿ ಭರ್ಜರಿ ವರ್ಷಧಾರೆಯಾಗಲಿದೆ.
ಬೀದರ್ ಮತ್ತು ಕಲಬುರಗಿಯಲ್ಲಿ ಏ.29ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಏ.30ರಂದು ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಮೈಸೂರಿನಲ್ಲಿ ಏ.30ರಿಂದ ಮುಂದಿನ ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ಮತ್ತು ಬೆಂ.ಗ್ರಾಮಾಂತರದಲ್ಲಿ ಮೇ.2ರಂದು ಯೆಲ್ಲೋ ಅಲರ್ಟ್ ಇರಲಿದೆ. ಉಳಿದ ಜಿಲ್ಲೆಗಳ ಕೆಲವಡೆ ಗುಡುಗು ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 24 ಗಂಟೆ ಸಾಧಾರಣ ಮಳೆ ಸುರಿದರೆ, ನಂತರ, ಒಣಹವೆ ಮುಂದುವರಿಯಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ತುಸು ಇಳಿಕೆಯಾಗಿದೆ. ಬಳ್ಳಾರಿಯಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.