ಹೈದರಾಬಾದ್​ನಲ್ಲಿ ಮತ್ತೆ ವರುಣಾಘಾತ

rain
Published on

ಹೈದರಾಬಾದ್: ಕಳೆದ ವಾರ ತೆಲಂಗಾಣ ರಾಜ್ಯವನ್ನು ಜಲಾವೃತಗೊಳಿಸಿ, 50 ಜನರ ಪ್ರಾಣ ತೆಗೆದುಕೊಂಡಿದ್ದ ಮಳೆ ಹೈದರಾಬಾದ್​ನಲ್ಲಿ ಶನಿವಾರ ಮತ್ತೊಮ್ಮೆ ಆರ್ಭಟ ತೋರಿದೆ.

ನಗರದ ಹಲವೆಡೆ 150 ಮಿಮೀ ಮಳೆ ವರದಿಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದ್ದು, ಅಲ್ಲಲ್ಲಿ ಕಾರುಗಳು ನೀರಿನಲ್ಲಿ ತೇಲಿ ಹೋಗುವ ದೃಶ್ಯ ಕಂಡುಬಂತು. ಮನೆಯೊಳಗೆ ನೀರು ನುಗ್ಗಿದ ಕಾರಣ ಮನೆ ಮೇಲೆ ಹತ್ತಿ ನಿಂತು ಸಹಾಯಕ್ಕಾಗಿ ಜನ ಕೂಗಿದ್ದಾರೆ.

ಪ್ರವಾಹವನ್ನು ತೆರವುಗೊಳಿಸಲು ಮತ್ತು ಜನರನ್ನು ರಕ್ಷಿಸಲು ಹೈದರಾಬಾದ್ ಮುನ್ಸಿಪಾಲ್ ಕಾರ್ಪೆರೇಶನ್​ನ (ಜಿಎಚ್​ಎಂಸಿ) ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. 2500ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹತ್ತಾರು ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆ ಗೋಡೆ ಕುಸಿದು 5 ವರ್ಷದ ಬಾಲಕಿ ಅಸು ನೀಗಿದ್ದಾಳೆ. ಬುಧವಾರದವರೆಗೂ ನಗರದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಆಂಧ್ರದಲ್ಲಿ 4 ದಿನ ಭಾರಿ ಮಳೆ ಸಾಧ್ಯತೆ: ಆಂಧ್ರಪ್ರದೇಶದ ಕರಾವಳಿ ಭಾಗ ಸೇರಿ ಹಲವೆಡೆ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಬಂಗಾಳ ಕೊಲ್ಲಿಯಲ್ಲಿ ಹೊಸದಾಗಿ ಕಡಿಮೆ ವಾಯುಭಾರ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಆಂಧ್ರದ ಕರಾವಳಿ ಭಾಗಗಳಲ್ಲಿ ಸೋಮವಾರ ಮತ್ತು ಮಂಗಳವಾರ ಗುಡುಗು, ಸಿಡಿಲು ಸಮೇತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net