ಅರ್ಧರಾಜ್ಯಕ್ಕೆ ನೆರೆ ಭೀತಿ: ಭಾರಿ ಮಳೆಗೆ ಮಲೆನಾಡು, ಕರಾವಳಿ, ಉ.ಕರ್ನಾಟಕ ಅಸ್ತವ್ಯಸ್ತ

Front
ಯಾದಗಿರಿಯ ಕಂಗಳೇಶ್ವರ ದೇಗುಲ ಭೀಮಾ ನದಿ ಪ್ರವಾಹದಲ್ಲಿ ಮುಳುಗಿರುವ ದೃಶ್ಯ.
Published on

ಬೆಂಗಳೂರು: ಕಳೆದೊಂದು ತಿಂಗಳಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಮುಂಗಾರು ರಾಜ್ಯದಲ್ಲಿ ಉಗ್ರಸ್ವರೂಪ ಪಡೆದಿದೆ. ಭಾನುವಾರ ರಾತ್ರಿಯಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ತತ್ತರಿಸಿವೆ. ಕರಾವಳಿ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಿಂದಾಗಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದ್ದು, ಮಹಾರಾಷ್ಟ್ರದಿಂದ ಹೆಚ್ಚು ನೀರು ಹರಿದು ಬರುತ್ತಿರುವ ಪರಿಣಾಮ ಹಾಗೂ ಮಳೆ ಮುಂದುವರಿಕೆಯಿಂದಾಗಿ ಉತ್ತರ ಕರ್ನಾಟಕದ ಕೆಲವೆಡೆ ಭಾರಿ ಹಾನಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಉಡುಪಿ, ಬಳ್ಳಾರಿ, ಉತ್ತರ ಕನ್ನಡ ಹಾಗೂ ದಾವಣಗೆರೆಯಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ.

ನೀರು ಪಾಲು: ಕಲಬುರಗಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಕೆಲ ಗ್ರಾಮಗಳಿಗೆ ಮಳೆ ನೀರು ನುಗ್ಗಿದ್ದರೆ, ಪೋತಂಗಲ್​ನಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ನಡೆದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪಡುಬಿದ್ರಿಯಲ್ಲಿ 7 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕನನ್ನು ರಕ್ಷಿಸಲಾಗಿದೆ.

ಶೇ.53 ಹೆಚ್ಚುವರಿ ಮಳೆ: ಜು.12ರಿಂದ ಜು.18ರವರೆಗೆ ರಾಜ್ಯಾದ್ಯಂತ ಒಟ್ಟಾರೆ 64 ಮಿಮೀ ಮಳೆ ಬದಲಾಗಿ 99 ಮಿಮೀ ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ 20 ಮಿಮೀ ಮಳೆಯಾಗಬೇಕಿತ್ತು. ಆದರೆ, 55 ಮಿಮೀ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ 27 ಮಿಮೀ ಬದಲಾಗಿ 43 ಮಿಮೀ ಮಳೆ ಬಿದ್ದಿದೆ. ಮಲೆನಾಡು ಜಿಲ್ಲೆಗಳಲ್ಲಿ 137 ಮಿಮೀ ಮಳೆಯಾಗ ಬೇಕಿತ್ತು. 177 ಮಿಮೀ ಮಳೆಯಾಗಿದೆ. ಕರಾವಳಿಯಲ್ಲಿ 270 ಮಿಮೀ ಮಳೆಯಾಗಬೇಕಿತ್ತು. 384 ಮಿಮೀ ಮಳೆಯಾಗಿದೆ.

ನಿರಂತರ ಮಳೆ, ಉಕ್ಕಿ ಹರಿದ ಹೊಳೆ

ಭಟ್ಕಳದಲ್ಲಿ ಭಾರಿ ಮಳೆಯಿಂದ ಚೌಥನಿ ನದಿ ಉಕ್ಕಿ ಹರಿಯಿತು.

ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಪ್ರಮಾಣ ಹೆಚ್ಚಳವಾದರೆ, ನದಿಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಅಣೆಕಟ್ಟೆಗೆ 22,950 ಕ್ಯೂಸೆಕ್, ಭದ್ರಾ ಜಲಾಶಯಕ್ಕೆ 10,072 ಕ್ಯೂಸೆಕ್, ತುಂಗಾ ಡ್ಯಾಂಗೆ 20,324 ಕ್ಯೂಸೆಕ್ ನೀರು ಬರುತ್ತಿದೆ. ದಂಡಾವತಿ, ವರದಾ ನದಿಗಳಲ್ಳೂ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಉತ್ತರ ಕನ್ನಡದಲ್ಲಿ ಭಾರಿ ಮಳೆ ಸುರಿದಿದ್ದು, ಭಟ್ಕಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಚೌಥನಿ ನದಿ ಉಕ್ಕಿ ಹರಿದಿದ್ದು, ಚೌಥನಿ, ಮೂಡ ಭಟ್ಕಳದ ಗ್ರಾಮಗಳು ಜಲಾವೃತವಾಗಿವೆ. ಚಿಕ್ಕಮಗಳೂರಿನ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಭಾರಿ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದ ಭೀಮಾ ಹಾಗೂ ಕೃಷ್ಣಾ ಕಣಿವೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಪ್ರತಿನಿತ್ಯ ಅಪಾರ ಪ್ರಮಾಣದ ನೀರು ಹರಿಬಿಡುತ್ತಿರುವುದರಿಂದ ಕೃಷ್ಣಾ ಮತ್ತು ಭೀಮಾ ಪಾತ್ರದ ಹಳ್ಳಿಗರಲ್ಲಿ ಪ್ರವಾಹ ಆತಂಕ ಎದುರಾಗಿದೆ. ಭಾನುವಾರ ಬಸವಸಾಗರದಿಂದ 60 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ. ಸನ್ನತಿ ಬ್ಯಾರೇಜ್​ನಿಂದ ಭೀಮಾ ಒಡಲಿಗೆ 15 ಸಾವಿರ ಕ್ಯೂಸೆಕ್ ಹೊರಬಿಟ್ಟಿದ್ದರಿಂದ ಉಭಯ ನದಿಗಳು ಮೈದುಂಬಿ ಹರಿಯುತ್ತಿವೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಡೀ ದಿನ ಮಳೆಯಾಗಿದೆ. ಘಟ್ಟದ ತಪ್ಪಲಿನ ಭಾಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಸ್ನಾನಘಟ್ಟ ಮತ್ತೆ ಮುಳುಗಡೆಯಾಗಿದೆ. ಹಾಸನದಲ್ಲಿ ಎರಡು ದಿನಗಳಿಂದ ಬಿಡುವು ನೀಡಿದ್ದ ಮುಂಗಾರು ಶನಿವಾರ ರಾತ್ರಿಯಿಡೀ ಅಬ್ಬರಿಸಿತು. ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕು ಹೊರತುಪಡಿಸಿ ಉಳಿದೆಡೆ ಎಡೆಬಿಡದೆ ಸುರಿದಿದೆ. ಸಕಲೇಶಪುರ ತಾಲೂಕಿನಲ್ಲಿ ಸುರಿದ ಬಿರುಸಿನ ಮಳೆಗೆ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕಾಗಿ ಹಾಕಿದ್ದ ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗಿ ಅಕ್ಕಪಕ್ಕದ ಕಾಫಿ ತೋಟ, ಭತ್ತದ ಗದ್ದೆಗಳ ಮೇಲೆ ಬಿದ್ದಿದೆ. ಹೇಮಾವತಿ, ಯಗಚಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 98 ಅಡಿ ತಲುಪಿದ್ದು, ಶತಕದತ್ತ ದಾಪುಗಾಲಿಟ್ಟಿದೆ. 18 ಸಾವಿರ ಕ್ಯೂಸೆಕ್ ಒಳಹರಿವು, 2539 ಕ್ಯೂಸೆಕ್ ಹೊರಹರಿವು ಇತ್ತು. ಅಣೆಕಟ್ಟೆಯ ಗರಿಷ್ಟಮಟ್ಟ 124.80 ಅಡಿಯಾಗಿದ್ದು, ಕಳೆದ ವರ್ಷ ಇದೇ ದಿನ 105.31 ಅಡಿ ನೀರಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹಾರಂಗಿ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ.

ವಯನಾಡ್ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಮೈಸೂರಿನ ಕಬಿನಿ ಜಲಾಶಯಕ್ಕೆ 11,958 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 15,000 ಕ್ಯೂಸೆಕ್, ನಾಲೆಗೆ 800 ಕ್ಯೂಸೆಕ್ ಹರಿಬಿಡಲಾಗಿದೆ. 2284.00 ಅಡಿಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 2280.18 ಅಡಿ ನೀರು ಸಂಗ್ರಹವಾಗಿದೆ. ಕೊಡಗಿನ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. 2,859 ಅಡಿ ಸಾಮರ್ಥ್ಯವಿರುವ ಹಾರಂಗಿ ಜಲಾಶಯದಲ್ಲಿ ಭಾನುವಾರಕ್ಕೆ 2855.65 ಅಡಿ ನೀರು ಸಂಗ್ರಹವಾಗಿದೆ. ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ಮೂಲೆಹೊಳೆ ತುಂಬಿ ಹರಿಯುತ್ತಿದೆ.

ಎಲ್ಲಿ ಎಷ್ಟು ಮಳೆ?: ಶಿವಮೊಗ್ಗದ ಹೊಸನಗರದಲ್ಲಿ 126 ಮಿ.ಮೀ.ಮಳೆ ಸುರಿದಿದೆ. ಕಲಬುರಗಿಯ ಚಿತ್ತಾಪುರದಲ್ಲಿ 109 ಮಿ.ಮೀ. ಸಾಗರದಲ್ಲಿ 97 ಮಿ.ಮೀ. ಉಡುಪಿಯ ಕುಂದಾಪುರದಲ್ಲಿ 95 ಮಿ.ಮೀ. ಕಾರ್ಕಳದಲ್ಲಿ 94 ಮಿ.ಮೀ. ಕೊಪ್ಪಳದಲ್ಲಿ 89 ಮಿ.ಮೀ. ಬಳ್ಳಾರಿಯಲ್ಲಿ 83 ಮಿ.ಮೀ. ಉತ್ತರ ಕನ್ನಡದಲ್ಲಿ 76 ಮಿ.ಮೀ ಹಾಗೂ ದಾವಣಗೆರೆಯಲ್ಲಿ 71 ಮಿ.ಮೀ. ಮಳೆಯಾಗಿದೆ.

ಕೊಚ್ಚಿಹೋದ ಮೇಕೆಗಳು: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ವಿವಿಧೆಡೆ ಸುರಿದ ಮಳೆಗೆ 9 ಮೇಕೆಗಳು ಹಳ್ಳದಲ್ಲಿ ಕೊಚ್ಚಿಹೋಗಿವೆ. ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಉಚ್ಚಂಗಿದುರ್ಗ, ಚಟ್ನಿಹಳ್ಳಿ ಕೆರೆ ತುಂಬಿ ಕೋಡಿ ಹರಿದಿದೆ. ಚೆಕ್ ಡ್ಯಾಂಗಳು ಭರ್ತಿಯಾಗಿದೆ. ಕೊಪ್ಪಳ ತಾಲೂಕಿನ ಡೊಂಬರಳ್ಳಿಯಲ್ಲಿ ಹಿರೇಹಳ್ಳಕ್ಕೆ ನಿರ್ವಿುಸಿರುವ ಬ್ಯಾರೇಜ್ ಕೊಚ್ಚಿ ಹೋಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುರಿದು ಭಾರಿ ಮಳೆಯಿಂದ ನಾನಾ ಅವಾಂತರ ಸೃಷ್ಟಿಯಾಗಿದೆ. ಹಲವು ಕೆರೆಗಳು ಕೋಡಿ ಬಿದ್ದಿವೆ. ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಭತ್ತದ ಸಸಿ ಮಡಿಗಳು ಕೊಚ್ಚಿಹೋಗಿವೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಅಡಕೆ ಬೆಳೆಗಳು ಹಾನಿ ಆಗಿವೆ. ಗ್ರಾಮಾಂತರ ಭಾಗದಲ್ಲಿ 35ಕ್ಕೂ ಹೆಚ್ಚು ಪಂಪ್​ಸೆಟ್​ಗಳು, ಒಂದು ಟ್ರ್ಯಾಕ್ಟರ್ ನೀರಿನಲ್ಲಿ ಮುಳುಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net