

ಬೆಂಗಳೂರು: ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ಸುರಿದ ಮಳೆಯಿಂದ ಅಪಾರ ಹಾನಿಯಾಗಿದ್ದು, ಒಟ್ಟಾರೆ 21 ಜನ ಬಲಿಯಾಗಿದ್ದಾರೆ. ಎಡಬಿಡದೆ ಸುರಿಯುತ್ತಿರುವ ಮಳೆ ನಡುವೆಯೇ ಸರ್ಕಾರಕ್ಕೆ ನಷ್ಟದ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. 137 ಮನೆಗಳು ಪೂರ್ಣ ಪ್ರಮಾಣದಲ್ಲಿ ಬಿದ್ದು ಹೋಗಿದ್ದರೆ, 2059 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 60 ಜಾನುವಾರುಗಳು ಸಾವಿಗೀಡಾಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ 788.43 ಹೆಕ್ಟೇರ್ ಕೃಷಿ ಬೆಳೆ ಹಾಗೂ 512.16 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ 482.4 ಹೆಕ್ಟೇರ್ ಕೃಷಿ ಹಾಗೂ 21 ಹೆಕ್ಟೇರ್ ತೋಟಗಾರಿಕೆ ಬೆಳೆ ಮಳೆಗೆ ಕೊಚ್ಚಿ ಹೋಗಿವೆ. ಚಿತ್ರದುರ್ಗದಲ್ಲಿ 109.18 ಹೆಕ್ಟೇರ್ ಹಾಗೂ 46.47 ಹೆಕ್ಟೇರ್ ತೋಟಗಾರಿಕೆ ಬೆಳೆ ಕೊಚ್ಚಿ ಹೋಗಿದ್ದು, ರೈತರ ಬದುಕನ್ನು ದುರ್ಬರಗೊಳಿಸಿದೆ.
ಮೂಲಸೌಕರ್ಯ ಹಾನಿಯೂ ಅಪಾರ ಪ್ರಮಾಣದಲ್ಲಿ ಆಗಿದೆ. ರಾಜ್ಯದಲ್ಲಿ ಒಟ್ಟಾರೆ ಕಳೆದ ಹನ್ನೆರಡು ದಿನಗಳಲ್ಲಿ 428.33 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ. 83 ಸೇತುವೆಗಳು, 39 ಶಾಲಾ ಕಟ್ಟಡಗಳು, 3 ಆರೋಗ್ಯ ಕೇಂದ್ರದ ಕಟ್ಟಡಗಳು ಬಿದ್ದು ಹೋಗಿವೆ. 2713 ವಿದ್ಯುತ್ ಕಂಬಗಳು ಹಾಗೂ 215 ಟ್ರಾನ್ಸ್ಫಾರ್ಮರ್ ಪೆಟ್ಟಿಗೆಗಳು ಮಳೆಯಿಂದ ಹಾನಿಗೀಡಾಗಿವೆ. ಮಳೆ ಮುಂದುವರಿದಿದ್ದು, ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಮಳೆ ಸಂಪೂರ್ಣ ನಿಂತ ಮೇಲಷ್ಟೇ ಹಾನಿಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಸಂಪೂರ್ಣ ವಿವರ ಬಂದ ನಂತರ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಲು ಅಧ್ಯಯನ ಮಾಡಲು ತಜ್ಞರ ಸಮಿತಿ ಕಳುಹಿಸುವಂತೆ ಮನವಿ ಸಲ್ಲಿಸಲಾಗುತ್ತದೆ. ಇತ್ತೀಚೆಗೆ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಹೋಗಿದೆ. ಆದರೆ ಕೇಂದ್ರದಿಂದ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ.