

ಬೆಂಗಳೂರು: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದು ಪ್ರಾಣಪಾಯಕ್ಕೆ ಸಿಲುಕಿದ್ದ ಆರೋಪಿಯೊಬ್ಬನನ್ನು ಯಲಹಂಕ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶಿವಕುಮಾರ್ ರಕ್ಷಿಸಿದ್ದಾರೆ.
ಗೋವಿಂದಪುರದ ಇಮ್ರಾನ್ ಬಂಧಿತ. ತಮಿಳುನಾಡಿನ ಧರ್ಮಪುರಿ ಸಮೀಪ ತೂಪುರು ಗ್ರಾಮದಲ್ಲಿ ಅವಿತುಕೊಂಡಿದ್ದಾಗ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಓಡಿ ಹೋಗುವಾಗ ಬಾವಿಗೆ ಬಿದ್ದು ಇಮ್ರಾನ್ ಅಪಾಯಕ್ಕೆ ಸಿಲುಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅ.3ರಂದು ಮಾರುತಿನಗರದ ಶೇಖರ್ ಎಂಬಾತನನ್ನು ಅಡ್ಡಗಟ್ಟಿ ಚಿನ್ನದ ಸರ, ಮೊಬೈಲ್ ಫೋನ್ ಮತ್ತು 3 ಸಾವಿರ ರೂಪಾಯಿ ದೋಚಿ ಇಮ್ರಾನ್ ಮತ್ತು ಆತನ ಸಹಚರರು ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೋವಿಂದಪುರ ಮೂಲದ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಸುಳಿವು ಲಭಿಸಿತು.
ಇದರ ಅನ್ವಯ ಸುಲಿಗೆಕೋರ ಬೆನ್ನಹತ್ತಿದ ಪೊಲೀಸರಿಗೆ, ತಮಿಳುನಾಡಿನ ಧರ್ಮಪುರಿ ಸಮೀಪದ ತೂಪುರ ಗ್ರಾಮದಲ್ಲಿ ಆರೋಪಿಗಳು ಅಡಗಿರುವುದು ಖಚಿತವಾಯಿತು. ಸಬ್ ಇನ್ಸ್ಪೆಕ್ಟರ್ಗಳಾದ ಸುನೀಲ್ ಕುಮಾರ್ ಹಾಗೂ ಹರೀಶ್ ನೇತೃತ್ವದ ತಂಡ ತೆರಳಿತ್ತು.
ಅಲ್ಲಿನ ಪೂಜಾ ಮಂದಿರ ಸಮೀಪ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಒಬ್ಬಾತ ಬಾವಿಗೆ ಬಿದ್ದು ಜೀವಕ್ಕೆ ಕುತ್ತು ತಂದುಕೊಂಡಿದ್ದ. ಜೋರು ಸುರಿಯುತ್ತಿದ್ದ ಮಳೆಯ ನಡುವೆಯೂ ತನಿಖಾ ತಂಡದಲ್ಲಿದ್ದ ಕಾನ್ಸ್ಟೇಬಲ್ ಶಿವಕುಮಾರ್, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ಬಾವಿಯಲ್ಲಿ ಒದ್ದಾಡುತ್ತಿದ್ದ ಆರೋಪಿಯನ್ನು ಮೇಲಕ್ಕೆತ್ತಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧರ್ಮಪುರಿ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸಿ ವಶಕ್ಕೆ ಪಡೆದು ನಗರಕ್ಕೆ ಕರೆ ತರಲಾಗಿದೆ. ಇನ್ನೊಬ್ಬ ಆರೋಪಿಯನ್ನು ದೇವನಹಳ್ಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಈ ನಾಲ್ವರು ಆರೋಪಿಗಳಿಂದ 66.55 ಸಾವಿರ ರೂ. ಮೌಲ್ಯದ 10 ಗ್ರಾಂ ಚಿನ್ನದ ಚೈನ್, ಎರಡು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.