ಇಳೆಗೆ ತಂಪೆರೆದು ವಿರಾಮಕ್ಕೆ ಜಾರಿದ ವರುಣ: ದೇಶದಲ್ಲಿ ಹೆಚ್ಚಾಗಲಿದೆ ತಾಪಮಾನ, ಬಿಸಿಗಾಳಿ ಎದುರಿಸಲು ಸಜ್ಜಾಗಿ! Heatwave

Heatwave
Published on

Heatwave : ದೇಶಾದ್ಯಂತ ಸ್ವಲ್ಪ ಸಮಯದವರೆಗೆ ಇಳೆಯನ್ನು ತಂಪು ಮಾಡಿದ ವರುಣ ಇದೀಗ ವಿರಾಮ ಪಡೆದುಕೊಂಡಿದ್ದು, ಭಾರತದ ಅನೇಕ ಭಾಗಗಳಲ್ಲಿ ಮತ್ತೆ ಬಿಸಿಗಾಳಿಯ ಹೊಡೆತ ಶುರುವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಆರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಬಿಸಿಲಿನ ತಾಪಮಾನ 4 ಡಿಗ್ರಿ ಸೆಲ್ಸಿಯಸ್​ನಿಂದ 6 ಡಿಗ್ರಿಗೆ ಏರಿಕೆಯಾಗಲಿದೆ. ಇನ್ನು ಮಧ್ಯ ಭಾರತದಲ್ಲಿ ಮುಂದಿನ 24 ಗಂಟೆಯವರಗೆ ಪ್ರಸ್ತುತ ತಾಪಮಾನವೇ ಮುಂದುವರಿಯಲಿದ್ದು, ಇನ್ನು ಐದು ದಿನಗಳಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್​ ವರೆಗೆ ತಾಪಮಾನ ಏರಿಕೆಯಾಗಲಿದೆ. ಮುಂದಿನ ಎರಡು ದಿನಗಳಲ್ಲಿ ತಾಪಮಾನವು 2 ರಿಂದ 3 ಡಿಗ್ರಿಗಳಷ್ಟು ಕಡಿಮೆಯಾಗುವುದರೊಂದಿಗೆ ಮಹಾರಾಷ್ಟ್ರವು ತಾತ್ಕಾಲಿಕ ಪರಿಹಾರವನ್ನು ನಿರೀಕ್ಷಿಸಬಹುದಾಗಿದೆ. ಆದಾಗ್ಯೂ, ನಂತರದ ತಾಪಮಾನವು 2 ರಿಂದ 4 ಡಿಗ್ರಿಗಳಷ್ಟು ಹೆಚ್ಚಾಗಲಿದೆ. ಮುಂದಿನ 6 ದಿನಗಳಲ್ಲಿ ಗುಜರಾತ್‌ನಲ್ಲಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.

ಹಲವಾರು ಪ್ರದೇಶಗಳಿಗೆ ಹವಾಮಾನ ಇಲಾಖೆ ಬಿಸಿಗಾಳಿಯ ಎಚ್ಚರಿಕೆಗಳನ್ನು ನೀಡಿದೆ. ಏಪ್ರಿಲ್ 14 ಮತ್ತು 15ರಂದು ಪಶ್ಚಿಮ ರಾಜಸ್ಥಾನವು ಬಿಸಿಗಾಳಿಯ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ. ಏಪ್ರಿಲ್ 16 ರಿಂದ 18ರ ಅವಧಿಯಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಎದುರಾಗಲಿದೆ.

ಏಪ್ರಿಲ್ 13ರಂದು ಕರಾವಳಿ ಆಂಧ್ರಪ್ರದೇಶ ಸೇರಿದಂತೆ ಪ್ರತ್ಯೇಕ ಸ್ಥಳಗಳಲ್ಲಿ, ಏಪ್ರಿಲ್ 15 ರಿಂದ 17ರವರೆಗೆ ಗುಜರಾತ್, ಏಪ್ರಿಲ್ 16 ರಿಂದ 18ರವರೆಗೆ ಪಂಜಾಬ್, ಹರಿಯಾಣ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಗಾಳಿಯ ಪರಿಸ್ಥಿತಿಗಳು ಹೆಚ್ಚಾಗಿ ಕಂಡುಬರುತ್ತದೆ. ಏಪ್ರಿಲ್ 18 ರಂದು ಪೂರ್ವ ರಾಜಸ್ಥಾನದ ಪ್ರತ್ಯೇಕ ಪ್ರದೇಶಗಳಲ್ಲಿ ತೀವ್ರ ಬಿಸಿಗಾಳಿಯ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ದೇಶದ ವಿವಿಧ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿರುವುದರಿಂದ ಭಾರತದ ಯಾವುದೇ ಭಾಗದಲ್ಲಿ ಪ್ರಸ್ತುತ ಬಿಸಿಗಾಳಿಯ ಪರಿಸ್ಥಿತಿ ಇಲ್ಲ. ಆದರೂ, ಮುಖ್ಯವಾಗಿ ಗುಜರಾತ್ ಮತ್ತು ಪಶ್ಚಿಮ ರಾಜಸ್ಥಾನದಲ್ಲಿ ಮುಂದಿನ ಮೂರು ರಿಂದ ನಾಲ್ಕು ದಿನಗಳಲ್ಲಿ ಬಿಸಿಗಾಳಿಯ ವಾತಾವರಣ ಎದುರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

ಇತ್ತೀಚೆಗೆ ಜೈಸಲ್ಮೇರ್ ಮತ್ತು ಬಾರ್ಮರ್‌ನಂತಹ ಸ್ಥಳಗಳಲ್ಲಿ ತಾಪಮಾನವು ಸುಮಾರು 45.6°C ತಲುಪಿದೆ. ಈ ತಾಪಮಾನವು ಸಾಮಾನ್ಯವಾಗಿ ಪೂರ್ವ ಮಾನ್ಸೂನ್ ಋತುವಿನಲ್ಲಿ ಕಂಡುಬರುವುದಿಲ್ಲ. ಸಾಮಾನ್ಯವಾಗಿ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳ ಆರಂಭದಲ್ಲಿ ಮಾತ್ರ ಬಿಸಿಗಾಲಿ ವಾತಾವರಣ ಆರಂಭವಾಗುತ್ತದೆ. ಆದರೆ, ಈ ಸೀಸನ್​ನಲ್ಲಿ ಏಪ್ರಿಲ್ ಆರಂಭದಲ್ಲೇ ಶುರುವಾಗಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net