

ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗೆ ಮುನ್ನವೇ ಬಿಸಿಲು ತೀವ್ರಗೊಂಡಿದ್ದು, ಕೆಲ ಜಿಲ್ಲೆಗಳಲ್ಲಿ ಶಾಖ ತರಂಗ ಆತಂಕ ಎದುರಾಗಿದೆ. ತಾಪಮಾನದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ತರಂಗ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಶಾಖ ತರಂಗ ಸ್ಥಿತಿ ಎದುರಾದರೆ ಬಿಸಿಲಿನ ಝುಳದ ಜತೆಗೆ ಸೆಖೆಯೂ ಹೆಚ್ಚುತ್ತದೆ. ಜನರಿಗೆ ಕೈ ಕಾಲು ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ, ಬೆವರು ಸೇರಿ ಇತರ ಆರೋಗ್ಯ ಸಮಸ್ಯೆಗಳು ಕಾಡಲಿವೆ. ತೀವ್ರವಾದ ಜ್ವರ(104 ಡಿಗ್ರಿ) ಬಂದರೆ ಪ್ರಜ್ಞೆ ತಪು್ಪವ ಅಪಾಯದ ಜತೆಗೆ ಕೋಮಾಕ್ಕೂ ಹೋಗಬಹುದು.
ಬೇಸಿಗೆಯಲ್ಲಿ ಕಲಬುರಗಿ, ಬೀದರ್, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಅಸುಪಾಸಿನಲ್ಲಿರುತ್ತದೆ. ಆದರೆ, ಈ ಬಾರಿ ಅದು 45-46 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಸರಾಸರಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಗೆಯಾಗುವ ಸಾಧ್ಯತೆಯೂ ಇದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸದ್ಯ ಕನಿಷ್ಠ ತಾಪಮಾನದಲ್ಲಿ ಸರಾಸರಿ 2ರಿಂದ 6 ಉಷ್ಣಾಂಶ ಕುಸಿತವಾಗಿದೆ. ನಿಧಾನವಾಗಿ ಬಿಸಿಲು ಬೇಗೆ ಹೆಚ್ಚಾಗುತ್ತಿದೆ. ಈ ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ದಿಂದ ರಾಜ್ಯದ ಜಲಾಶಯಗಳು, ನದಿಗಳು, ಕೆರೆ ಕುಂಟೆಗಳಲ್ಲಿ ಯಥೇಚ್ಛವಾಗಿ ನೀರು ಸಂಗ್ರಹವಾಗಿದೆ. ಆದರೆ, ದೀರ್ಘಾವಧಿವರೆಗೆ ಬಿಸಿಲು ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಾಡಾಯಿಸಲಿದೆ. ಅಂತರ್ಜಲ ಮಟ್ಟ ಕುಸಿದು ಬೋರ್ವೆಲ್ಗಳು ಬತ್ತಿ ಹೋಗುವ ಆತಂಕ ಎದುರಾಗಿದೆ. ಕೆಲವಡೆ ಈಗಾಗಲೆ ಕೊಳವೆಬಾವಿಗಳು ಬತ್ತಿ ಹೋಗಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕಿದೆ.
ಎಚ್ಚರಿಕೆ ಅಗತ್ಯ: ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು, ಆಟೋ ಚಾಲಕರು, ಸಂಚಾರ ಪೊಲೀಸರು, ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ವಿುಕರು ಬಿಸಿಲಿನ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಿಸಿಲಿನ ಪ್ರಖರತೆ ಹೆಚ್ಚಿರುತ್ತದೆ.
ಇಂಥ ಸಂದರ್ಭದಲ್ಲಿ ಸಾಧ್ಯವಾದಷ್ಟು ಕೆಲಸದಿಂದ ಬಿಡುವು ಪಡೆಯುವುದು ಒಳಿತು. ಬಿಸಿಲು ಲೆಕ್ಕಿಸದೆ ದಿನವಿಡೀ ಕೆಲಸ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜತೆಗೆ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಪ್ರತಿ ವರ್ಷ ಜನವರಿಯಿಂದ ಮೇವರೆಗೆ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ. ಬೇಸಿಗೆಯಲ್ಲಿ ಆಕಸ್ಮಿಕ ಬೆಂಕಿ, ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಉಷ್ಣಾಂಶ ಏರಿಕೆಯಾದರೆ ಕಾಡಿಗೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಳವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಯಲ್ಲಿ ಬಹಿರಂಗವಾಗಿದೆ.