ಬಿಸಿ ಗಾಳಿ ಹೆಚ್ಚಳ: ಈ ರಾಜ್ಯಗಳಿಗೆ ಮೇ. 30ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ!

WhatsApp Image 2024-05-26 at 6.03.15 PM
Published on

ನವದೆಹಲಿ: ದಕ್ಷಿಣ ಭಾರತದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ವರ್ಷದ ಮೊದಲ ಮಳೆ ಸುರಿದಿದ್ದು, ಉತ್ತರ ಭಾರತದಲ್ಲಿ ಮಾತ್ರ ಬಿಸಿಲ ತಾಪಮಾನ ಮುಂದುವರೆದಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ (IMD) ರಾಜಸ್ಥಾನ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ವಿದರ್ಭ, ಬಿಹಾರ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಬಿಸಿಗಾಳಿಯ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಿದೆ.

ಪಂಜಾಬ್, ರಾಜಸ್ಥಾನ, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಮೇ.30ರವರೆಗೆ ಬಿಸಿಗಾಳಿಯಿಂದ ತೀವ್ರ ಶಾಖದ ಅಲೆಗಳು ಇರಲಿವೆ ಎಂದು ಮುನ್ಸೂಚನೆ ನೀಡಿದೆ. ಈ ರಾಜ್ಯಗಳ ಹೊರತಾಗಿ ವಿದರ್ಭ, ಮಧ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ಗುಜರಾತ್, ಛತ್ತೀಸ್‌ಗಢನಲ್ಲಿಯೂ ಮೇ.30ರವರೆಗೆ ತೀವ್ರತರವಾದ ಶಾಖದ ಪರಿಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಉಲ್ಲೇಖಿಸಿದೆ.

ಇನ್ನು ಈ ಬೇಸಿಗೆಯಲ್ಲಿ ರಾಜಸ್ಥಾನದಲ್ಲಿ ಮೊದಲ ಬಾರಿಗೆ ಗರಿಷ್ಠ 50 ಡಿಗ್ರಿ ತಾಪಮಾನ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಫಲೋಡಿಯಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಬಗ್ಗೆ ಜೈಪುರ ಹವಾಮಾನ ಕೇಂದ್ರದ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ಮಾಹಿತಿ ನೀಡಿದ್ದಾರೆ. ಮೇ 28-29ರವರೆಗೆ ತಾಪಮಾನವು ಸುಮಾರು 2-3 ಡಿಗ್ರಿಗಳಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net