

ಮಹಿಳೆಯರನ್ನು ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಕಾಡುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಲಿದ್ದು, ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಕಂಠದ ಕ್ಯಾನ್ಸರ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರಾಜ್ಯ ಮತ್ತು ಆರೋಗ್ಯ ಇಲಾಖೆಗಳಿಂದ ಮಾಹಿತಿ ಪಡೆದಿದೆ. ಇದೀಗ ಈ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತವಾಗಿ ಲಸಿಕೆ ನೀಡಲು ಕ್ರಮವಹಿಸುವುದಾಗಿ ಬಜೆಟ್ನಲ್ಲಿ ವಿತ್ತಸಚಿವರು ಘೋಷಿಸಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 80 ಸಾವಿರ ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಿದ್ದು, 35 ಸಾವಿರ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಸೀರಮ್ ಇನ್ಸ್ಟಿ್ಟ್ಯೂಟ್ ತಯಾರಿಸಿದ ಇಉ್ಖ್ಖಇ ಲಸಿಕೆ ಖಾಸಗಿಯಾಗಿ ಮಾರುಕಟ್ಟೆಯಲ್ಲಿ 2 ಸಾವಿರ ರೂ. ಗೆ ಲಭ್ಯವಿದೆ. ಇದೀಗ ಸರ್ಕಾರದಿಂದಲೇ ಈ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಸಕ್ಷಮ್ ಅಂಗನವಾಡಿ: ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಲಿದ್ದು, ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಅಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣ, ಸುಧಾರಿತ ಪೌಷ್ಟಿಕಾಂಶ ವಿತರಣೆ, ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಗಾಗಿ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ.
ವಿಕಸಿತ ಭಾರತ ಸಾಕಾರಕ್ಕೆ ನಾಂದಿ: ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿಗೆ ಸೇರುವ ತವಕದಲ್ಲಿರುವ ಭಾರತವು, ತನ್ನ ಆರ್ಥಿಕತೆ ಬಲವನ್ನು ಹೆಚ್ಚಿಸಿಕೊಳ್ಳುವ ಜತೆಗೆ 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿ ‘ವಿಕಸಿತ ಭಾರತ’ ಗುರಿ ತಲುಪಲು ಮಧ್ಯಂತರ ಬಜೆಟ್ ನಾಂದಿಯಾಡಿದೆ. ನಿರ್ಮಲಾ ಮಂಡಿಸಿರುವ ಈ ಮಧ್ಯಂತರ ಬಜೆಟ್ ದೇಶದ ಅರ್ಥಿಕತೆಯ ಇತಿ-ಮಿತಿಗಳನ್ನು ಆಧರಿಸಿರುವಂತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡನೆಯಾಗಲಿದೆ ಎಂಬ ಆಶಯ ಜನರಲ್ಲಿತ್ತು. ಆದರೆ, ದೇಶದ ಹಿತದೃಷ್ಟಿಯಿಂದ ಫ್ರೀಬೀಸ್ ಆಧಾರಿತ ಜನಪ್ರಿಯ ಆಯವ್ಯಯ ಮಂಡಿಸುವ ಗೋಜಿಗೆ ಹೋಗಿಲ್ಲ. ಇದು ಪ್ರಗತಿಗೆ ಪೂರಕ ಅಲ್ಲ ಎಂಬ ಕಾರಣಕ್ಕೆ ವಾಸ್ತವ ಮುಂಗಡಪತ್ರವನ್ನು ಮುಂದಿಡುವ ವಿತ್ತ ಮಂತ್ರಿಯವರ ಪ್ರಯತ್ನಕ್ಕೆ ಹಣಕಾಸು ಕ್ಷೇತ್ರದ ತಜ್ಞರು, ಪರಿಣತರು ತಲೆದೂಗಿದ್ದಾರೆ. ಮುಂದಿನ ಜುಲೈ ತಿಂಗಳ ವೇಳೆಗೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದು 2024-25ನೇ ಸಾಲಿನ ಪೂರ್ಣ ಬಜೆಟ್ ಅನ್ನು ಮಂಡಿಸಲಿದೆ. ಆ ಸರ್ಕಾರವು ನಮ್ಮದೇ ಪಕ್ಷ/ಕೂಟವೇ ಆಗಿರಲಿದೆ ಎಂಬ ಆತ್ಮವಿಶ್ವಾಸ ಆಯವ್ಯಯ ಭಾಷಣದಲ್ಲಿ ಇಣುಕಿದಂತಿದೆ.
ಅಭಿವೃದ್ಧಿಶೀಲ ರಾಷ್ಟ್ರ ಸಾಕಾರ: ಮಧ್ಯಂತರ ಬಜೆಟ್ ವಿಕಸಿತ ಭಾರತದ ನಾಲ್ಕು ಪ್ರಮುಖ ಅಂಶಗಳಾದ ಯುವಜನತೆ, ಮಹಿಳೆಯರು, ರೈತರು ಹಾಗೂ ಬಡವರನ್ನು ಮೇಲೆತ್ತುವ ಸಂಕಲ್ಪ ತೊಟ್ಟಿದೆ. ಇದರಿಂದಾಗಿ 2047ರೊಳಗೆ ಭಾರತವು ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಖಾತರಿ ನೀಡುವ ಜತೆಗೆ ಗುರಿ ಸಾಧಿಸಲು ಸ್ಪಷ್ಟ ಅಡಿಪಾಯವನ್ನೂ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಆಯವ್ಯಯವನ್ನು ಶ್ಲಾಘಿಸಿರುವ ಪ್ರಧಾನಿ, ಭಾರತದ ಭವಿಷ್ಯದ ಅಡಿಪಾಯವನ್ನು ಬಲಪಡಿಸುವ ಗ್ಯಾರಂಟಿ ಬಜೆಟ್ ಇದಾಗಿದೆ. ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಲಿದೆ. ರೈಲ್ವೆ ಬೋಗಿಗಳನ್ನು ‘ವಂದೇ ಭಾರತ್’ ಗುಣಮಟ್ಟಕ್ಕೆ ನವೀಕರಿಸುವ ನಿರ್ಧಾರ ಸೂಕ್ತವಾಗಿದೆ ಎಂದಿದ್ದಾರೆ. ಇದು ಮಧ್ಯಂತರ ಬಜೆಟ್ ಆಗಿದ್ದರೂ ಎಲ್ಲವನ್ನೂ ಒಳಗೊಳ್ಳುವ ಹಾಗೂ ನವೀನ ಆಯವ್ಯಯ ಅಗಿದೆ. ಮುಖ್ಯವಾಗಿ ಬಜೆಟ್ ಭಾರತದ ಎಲ್ಲ ಆಧಾರ ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಹಾಗೂ ರೈತರನ್ನು ಇನ್ನಷ್ಟು ಸಬಲೀಕರಿಸಲಿದೆ ಎಂದು ಶ್ಲಾಘಿಸಿದ್ದಾರೆ. ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿರಿಸಿಕೊಂಡಿರುವ ಈ ಬಜೆಟ್ನಲ್ಲಿ ಒಟ್ಟು ವೆಚ್ಚವು 11,11,111 ಕೋಟಿ ರೂ.ಗೆ ಏರಿಕೆಯಾಗಿದೆ. ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ಇದು ಒಂದು ರೀತಿಯ ಸಿಹಿ ತಾಣವಾಗಿದೆ. ಇದರಿಂದಾಗಿ ದೇಶದಲ್ಲಿ 21ನೇ ಶತಮಾನದ ಆಧುನಿಕ ಮೂಲಸೌಕರ್ಯ ಸೃಷ್ಟಿಗೆ ಯುವಜನರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ. ಬಡ ಮತ್ತು ಮಧ್ಯಮ ವರ್ಗದವರ ಕಲ್ಯಾಣಕ್ಕಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣ ಮತ್ತು ಹೆಚ್ಚುವರಿಯಾಗಿ 2 ಕೋಟಿ ಮನೆ ನಿರ್ವಿುಸುವ ಗುರಿಯನ್ನು ಹೊಂದಲಾಗಿದೆ. ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ‘ಲಕ್ಷಾಧಿಪತಿ ದೀದಿ’ ಮತ್ತು ಆಯುಷ್ಮಾನ್ ಭಾರತ್ ಯೋಜನೆಯನ್ನು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೂ ವಿಸ್ತರಿಸಲಾಗಿದೆ ಎಂದಿದ್ದಾರೆ.
ಆಯವ್ಯಯ ತಯಾರಿ ಪ್ರಮುಖ ಅಧಿಕಾರಿಗಳಿಗೆ ಜವಾಬ್ದಾರಿ: ಮಧ್ಯಂತರ ಸೇರಿ ಸತತ ಆರನೇ ಬಾರಿಗೆ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಬಜೆಟ್ ತಯಾರಿಯಲ್ಲಿ ಅವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದ ತಂಡದ ಸದಸ್ಯರ ಪರಿಚಯ ಹೀಗಿದೆ.
ಟಿ.ವಿ. ಸೋಮನಾಥನ್: ಕೇಂದ್ರ ಸರ್ಕಾರದ ಹಣಕಾಸು ಕಾರ್ಯದರ್ಶಿಯಾಗಿ ಹಾಗೂ ವೆಚ್ಚ ಇಲಾಖೆಯ ಕಾರ್ಯದರ್ಶಿಯಾಗಿರುವ ಟಿ.ವಿ.ಸೋಮನಾಥನ್ ಹಣಕಾಸು ಹಂಚಿಕೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಸಲಹೆ ನೀಡುತ್ತಾರೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ‘ಆತ್ಮನಿರ್ಭರ ಭಾರತ’ ಜಾರಿಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.
ವಿ.ಅನಂತ ನಾಗೇಶ್ವರನ್: ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ರಾಗಿರುವ ವಿ.ಅನಂತ ನಾಗೇಶ್ವರನ್, ಈ ವರ್ಷದ ಕಿರು ಆರ್ಥಿಕ ಸಮೀಕ್ಷೆ ಸಿದ್ಧಪಡಿಸಿದ್ದಾರೆ.
ಅಜಯ್ ಸೇರ್: ಕರ್ನಾಟಕ ಕೆಡರ್ನ 1987ನೇ ತಂಡದ ಐಎಎಸ್ ಅಧಿಕಾರಿಯಾಗಿರುವ ಅಜಯ್ ಸೇರ್ , ಪ್ರಸ್ತುತ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಜಯ್ ಮಲ್ಹೋತ್ರಾ: ಆದಾಯ ತೆರಿಗೆ ಇಲಾಖೆಯ ಕಾರ್ಯದರ್ರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಆದಾಯ ತೆರಿಗೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿರ್ಮಲಾ ಅವರ ಬಜೆಟ್ ಭಾಷಣದ ಎರಡನೇ ಭಾಗವನ್ನು (ಭಾಗ ಬಿ) ಇವರು ಸಿದ್ಧಪಡಿಸಿದ್ದಾರೆ.
ತುಹಿನ್ ಕಾಂತ್ ಪಾಂಡೆ: ಏರ್ ಇಂಡಿಯಾ ಸಂಸ್ಥೆಯನ್ನು ಮಾರಾಟ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ತುಹಿನ್ ಕಾಂತ್ ಪಾಂಡೆ, ಪ್ರಸ್ತುತ ಸರ್ಕಾರದ ಹೂಡಿಕೆ ತಂತ್ರಗಳು ಮತ್ತು ನಿರ್ಧಾರದ ಉಸ್ತುವಾರಿ ವಹಿಸಿದ್ದಾರೆ.
ವಿವೇಕ್ ಜೋಶಿ: ರಾಜ್ಯ ಹಣಕಾಸು ಸಂಸ್ಥೆಗಳಿಗೆ ಸರ್ಕಾರದ ಸುಧಾರಣಾ ಕಾರ್ಯಸೂಚಿ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿಗಳು, ಯೋಜನೆಗಳಿಗೆ ವಿವೇಕ್ ಜೋಶಿ ಮಾರ್ಗದರ್ಶನ ನೀಡುತ್ತಿದ್ದಾರೆ.
3000 ಐಟಿಐ ಆರಂಭ: ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಾದ 7 ಐಐಟಿ, 16 ಐಐಐಟಿ, 7 ಐಐಎಂ, 15 ಏಮ್್ಸ ಮತ್ತು 390 ವಿಶ್ವವಿದ್ಯಾಲಯಗಳನ್ನು 2014ರಿಂದೀಚೆಗೆ ಸ್ಥಾಪಿಸಲಾಗಿದೆ. ಈ ಬಾರಿ 3,000 ಸಾವಿರ ಹೊಸ ಐಟಿಐಗಳನ್ನು ಆರಂಭಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ದೇಶದ ಏಳಿಗೆಯು ಸಮರ್ಪಕವಾಗಿ ಯುವಕರನ್ನು ಸಜ್ಜುಗೊಳಿಸುವುದು ಮತ್ತು ಸಬಲೀಕರಣಗೊಳಿಸುವುದರ ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ಪರಿವರ್ತನಾ ಸುಧಾರಣೆಗಳನ್ನು ತರಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ, ಕೌಶಲಪೂರ್ಣ ಮತ್ತು ಚಟುವಟಿಕೆ ಆಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಔದ್ಯೋಗಿಕ ಮತ್ತು ಪ್ರಸ್ತುತತೆಯನ್ನು ಎನ್ಇಪಿ ಹೊಂದಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಎರಡರಲ್ಲಿಯೂ ದೇಶೀತನ ನೀಡಲಾಗಿದೆ. ಈ ಮೂಲಕ ಶಾಲೆಗಳಲಿ ವಿದ್ಯೆ ಕಲಿಕೆಗೆ ಸೀಮಿತವಾಗದೆ ಸಂಸ್ಕೃತಿ, ಆಚಾರ-ವಿಚಾರಗಳು, ಪ್ರಾದೇಶಿಕತೆ ಮತ್ತು ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಮಾತೃಭಾಷಾ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದನ್ನು ಮನದಟ್ಟು ಮಾಡಲಾಗಿದೆ ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ದೇಶಾದ್ಯಂತ 6448 ಪಿಎಂಶ್ರೀ ಶಾಲೆಗಳನ್ನು ಸ್ಥಾಪಿಸಿ ಗುಣಮಟ್ಟದ ಬೋಧನೆಯನ್ನು ನೀಡಲಾಗುತ್ತಿದೆ. ಸಮಗ್ರ ಪೋಷಣೆ ಮತ್ತು ಸುಸಜ್ಜಿತ ವ್ಯಕ್ತಿಗಳನ್ನು ಪೋಷಿಸುತ್ತಿದೆ ಎಂದಿದ್ದಾರೆ.
ಲಕ್ಷಾಧಿಪತಿ ದೀದಿ ಅನುದಾನ -₹3 ಕೋಟಿಗೆ ಹೆಚ್ಚಳ: ‘ಲಕ್ಷಾಧಿಪತಿ ದೀದಿ’ ಯೋಜನೆಯ ಅನುದಾನವನ್ನು ಎರಡು ಕೋಟಿ ರೂ.ನಿಂದ ಮೂರು ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೊಷಿಸಿದ್ದಾರೆ. ಈ ಯೋಜನೆಯು ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳಲ್ಲಿ (ಎಸ್ಎಚ್ಜಿ) ತರಬೇತಿ ನೀಡುವ ಗುರಿ ಹೊಂದಿದ್ದು, ಇದರಿಂದ ವರ್ಷಕ್ಕೆ ಕನಿಷ್ಠ 1 ಲಕ್ಷ ರೂಪಾಯಿಗಳ ಸುಸ್ಥಿರ ಆದಾಯ ಗಳಿಸಬಹುದಾಗಿದೆ. ಒಂಬತ್ತು ಕೋಟಿ ಮಹಿಳೆಯರಿಂದ 83 ಲಕ್ಷ ಸ್ವ-ಸಹಾಯ ಗುಂಪುಗಳು ಸಬಲೀಕರಣ ಮತ್ತು ಸ್ವಾವಲಂಬನೆಯೊಂದಿಗೆ ಗ್ರಾಮೀಣ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಸಹಕಾರಿಯಾಗಲಿದೆ ಎನ್ನವುದು ಸರ್ಕಾರದ ಆಶಯ. ಈ ಯೋಜನೆಯು ಈಗಾಗಲೆ ಒಂದು ಕೋಟಿ ಮಹಿಳೆಯರಿಗೆ ‘ಲಕ್ಷಾಧಿಪತಿ ದೀದಿ’ ಯಾಗಲು ನೆರವಾಗಿದ್ದು, ಅವರು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಅಂತಹವರನ್ನು ಗೌರವಿಸುವ ಮೂಲಕ ಅವರ ಸಾಧನೆ ಗುರುತಿಸಲಾಗುತ್ತದೆ. ಈ ಯೋಜನೆಯ ಯಶಸ್ಸಿನಿಂದ ಉತ್ತೇಜನಗೊಂಡು ‘ಲಕ್ಷಾಧಿಪತಿ ದೀದಿ’ಯ ಅನುದಾನದ ಗುರಿ ಎರಡು ಕೋಟಿ ರೂ.ನಿಂದ ಮೂರು ಕೋಟಿ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
ಯು-ವಿನ್ ಪ್ಲಾಟ್ಫಾಮ್ರ್: ಹೊಸದಾಗಿ ವಿನ್ಯಾಸಗೊಳಿಸಲಾದ ಯು-ವಿನ್ ಪೋರ್ಟಲ್ (ಯೂನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ) ಮೂಲಕ ಇನ್ಮುಂದೆ ಲಸಿಕೆ ವಿತರಣೆ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಪ್ರಸ್ತುತ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎರಡು ಜಿಲ್ಲೆಗಳಲ್ಲಿ ಈ ಪೋರ್ಟಲ್ ಅನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಯು-ವಿನ್ ಪೋರ್ಟಲ್, ಕೋ-ವಿನ್ ಪೋರ್ಟಲ್ನೊಂದಿಗೆ ಸಂಪರ್ಕ ಹೊಂದಿದ್ದು, ಇದು ಲಸಿಕೆ ವಿತರಣೆಯ ಸಂಪೂರ್ಣ ಮಾಹಿತಿಯ ರಿಜಿಸ್ಟ್ರಿಯನ್ನು ನಿರ್ವಹಿಸಲಿದೆ. ಇದರಿಂದ ದೇಶಾದ್ಯಂತ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನವನ್ನು ತ್ವರಿತವಾಗಿ ನಡೆಸಲು ಸಹಕಾರಿಯಾಗಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ವಿಸ್ತರಣೆ: ಆಯುಷ್ಮಾನ್ ಭಾರತ್ ಯೋಜನೆ ಅಡಿ ಎಲ್ಲ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರೋಗ್ಯ ರಕ್ಷಣೆಯನ್ನು ವಿಸ್ತರಿಸಲಾಗುವುದು. ಈ ಸಂಬಂಧ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಗಾಗಿ (ಪಿಎಂಜೆಎವೈ) 6,800 ಕೋಟಿ ಯಿಂದ 7,500 ಕೋಟಿ ರೂ.ಗೆ ಅನುದಾನ ಹೆಚ್ಚಿಸಲಾಗಿದೆ. ಇದರೊಂದಿಗೆ 12 ಕೋಟಿ ಕುಟುಂಬಗಳಿಗೆ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿರುವುದಾಗಿ ಕೇಂದ್ರ ಸಚಿವೆ ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳಿಗೆ ಸಮಿತಿ: ಸಾಕಷ್ಟು ಯುವಕರು ವೈದ್ಯರಾಗಿ ಅರ್ಹತೆ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದು, ಅವರು ಸುಧಾರಿತ ಆರೋಗ್ಯ ಸೇವೆಗಳ ಮೂಲಕ ಜನರಿಗೆ ಸೇವೆ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೆ ವಿವಿಧ ಇಲಾಖೆಗಳಡಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲಸೌಕರ್ಯ ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಈ ವಿಷಯ ಕುರಿತು ಪರಿಶೀಲನೆ ನಡೆಸಿ ಶಿಫಾರಸು ಮಾಡಲು ಸಮಿತಿ ರಚಿಸುವುದಾಗಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ.
1.4 ಕೋಟಿ ಯುವಕರಿಗೆ ತರಬೇತಿ: ಜಾಗತಿಕವಾಗಿ ಪದವಿಗಿಂತ ಕೌಶಲ ಬಹಳ ಮುಖ್ಯವಾಗಿದೆ. ಆದ್ದರಿಂದ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗುವಂತೆ ಕೌಶಲ ಭಾರತ್ ಮಿಷನ್ ಅಡಿ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ. ಇದು ಸ್ವ ಉದ್ಯಮ ಸೃಷ್ಟಿಸಲು ಮತ್ತು ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ. 54 ಲಕ್ಷ ಯುವಕರಿಗೆ ಕೌಶಲ ಮತ್ತು ಪುನರ್ ಕೌಶಲವನ್ನು ನೀಡಲಾಗುತ್ತಿದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ₹3,442 ಕೋಟಿ: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಪೂರ್ವಭಾವಿಯಾಗಿ ಮಧ್ಯಂತರ ಬಜೆಟ್ನಲ್ಲಿ ಕ್ರೀಡಾ ಸಚಿವಾಲಯಕ್ಕೆ ದಾಖಲೆಯ 3,442.32 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ 45.36 ಕೋಟಿ ರೂ. ಅಧಿಕವಾಗಿದೆ. 2023-24ರ ಸಾಲಿನಲ್ಲಿ 3,396.96 ಕೋಟಿ ರೂ. ಪರಿಷ್ಕೃತ ಅನುದಾನ ನೀಡಲಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದ್ದು, 2024-25ರ ಸಾಲಿನಲ್ಲಿ ಅದರ ಮೇಲೆಯೇ ಪ್ರಮುಖ ಗಮನ ನೀಡಲಾಗಿದೆ. ಕ್ರೀಡಾ ಸಚಿವಾಲಯದ ಪ್ರಮುಖ ಯೋಜನೆಯಾಗಿರುವ ಖೇಲೋ ಇಂಡಿಯಾಗೆ 900 ಕೋಟಿ ರೂ. ನೀಡಲಾಗಿದೆ. ಇದು ಕಳೆದ ಬಜೆಟ್ಗಿಂತ 20 ಕೋಟಿ ರೂ. ಅಧಿಕವಾಗಿದೆ.
ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಕಳೆದ ಸಾಲಿಗಿಂತ 26.83 ಕೋಟಿ ರೂ. ಅಧಿಕ ನೀಡಲಾಗಿದೆ. ಕಳೆದ ಸಾಲಿನಲ್ಲಿ 795.77 ಕೋಟಿ ರೂ. ನೀಡಲಾಗಿತ್ತು. 2023-24ರ ಪರಿಷ್ಕೃತ ಬಜೆಟ್ನಲ್ಲಿ 325 ಕೋಟಿ ರೂ. ಪಡೆದಿದ್ದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್ಎಸ್ಎಫ್) ಈ ಬಾರಿ ಅದಕ್ಕಿಂತ 15 ಕೋಟಿ ರೂ. ಅಧಿಕ ನೀಡಲಾಗಿದೆ.
ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕಕ್ಕೆ (ನಾಡಾ) 22.30 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಕಳೆದ ಬಾರಿ 21.73 ಕೋಟಿ ರೂ. ನೀಡಲಾಗಿತ್ತು. ಉದ್ದೀಪನ ಸ್ಯಾಂಪಲ್ಗಳನ್ನು ಪರೀಕ್ಷಿಸುವ ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಪ್ರಯೋಗಾಲಯಕ್ಕೆ (ಎನ್ಡಿಟಿಎಲ್) 22 ಕೋಟಿ ರೂ. ಅನುದಾನ ನೀಡಲಾಗಿದೆ. ಕ್ರೀಡಾ ವಿಜ್ಞಾನ ಮತ್ತು ಸಂಶೋಧನಾ ರಾಷ್ಟ್ರೀಯ ಕೇಂದ್ರಕ್ಕೆ 8 ಕೋಟಿ ರೂ., ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ 91.90 ಕೋಟಿ ರೂ. ನೀಡಲಾಗಿದೆ. ಕ್ರೀಡಾಪಟುಗಳಿಗೆ ನೀಡಲಾಗುವ ವಿಶೇಷಭತ್ಯೆಯನ್ನು 84ರಿಂದ 39 ಕೋಟಿ ರೂ.ಗಳಿಗೆ ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಯನ್ನು 46ರಿಂದ 18 ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಕ್ರೀಡಾಪಟುಗಳಿಗಾಗಿ ಇರುವ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ಯೋಜನೆಗೆ 2 ಕೋಟಿ ರೂ. ನೀಡಲಾಗಿದೆ.
ಲಕ್ಷದ್ವೀಪ ಅಭಿವೃದ್ಧಿಯತ್ತ ಲಕ್ಷ್ಯ: ದೇಶೀಯ ಪ್ರವಾಸೋದ್ಯಮಕ್ಕೆ ಉದಯೋನ್ಮುಖ ಉತ್ಸಾಹ ತುಂಬಲು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲಕ್ಷದ್ವೀಪ ಸೇರಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ದೇಶೀಯ ಪ್ರವಾಸೋದ್ಯಮಕ್ಕೆ ಹುರುಪು ತುಂಬುವ ನಿಟ್ಟಿನಲ್ಲಿ ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲಸೌಕರ್ಯಗಳಿಗೆ ಸಂಬಂಧಿಸಿದ 25 ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಲಕ್ಷದ್ವೀಪದ ಕಡೆ ಒಲವು: ಪ್ರಧಾನಿ ನರೇಂದ್ರ ಮೋದಿ ಜನವರಿ 4 ರಂದು ಲಕ್ಷ ದ್ವೀಪಕ್ಕೆ ಭೇಟಿ ನೀಡಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಲಕ್ಷದ್ವೀಪದ ಉಲ್ಲೇಖವು ಮಹತ್ವದ್ದಾಗಿದೆ. ಲಕ್ಷದ್ವೀಪವು ನಮ್ಮಲ್ಲಿರುವ ಸಮುದ್ರ ಸಾಹಸಿಗಳು ಭೇಟಿ ನೀಡುವ ಆದ್ಯತಾ ಪಟ್ಟಿಯಲ್ಲಿ ಇರಬೇಕು ಎಂದರು.
ಆಧ್ಯಾತ್ಮಿಕ ಟೂರಿಸಂ: ದೇಶದ ಮಧ್ಯಮ ವರ್ಗವು ಪ್ರಯಾಣ ಮತ್ತು ಅನ್ವೇಷಣೆ, ಆಧ್ಯಾತ್ಮಿಕ ಪ್ರವಾಸೋದ್ಯಮದ ಕಡೆಗೆ ಆಸಕ್ತಿದಾಯಕವಾಗಿದೆ. ಹಾಗಾಗಿ ದೇಶೀ ಪ್ರವಾಸೋದ್ಯಮ ಜತೆಗೆ ಆಧ್ಯಾತ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ. ಇದರಿಂದ ಸ್ಥಳೀಯ ಉದ್ಯಮಶೀಲತೆಗೆ ಅಪಾರ ಅವಕಾಶ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಮಾರುಕಟ್ಟೆಗಳ ಉತ್ತೇಜನ: ಸಾಂಪ್ರದಾಯಿಕ ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ರಾಜ್ಯಗಳನ್ನು ಉತ್ತೇಜಿಸಲಾಗುವುದು. ಅವುಗಳನ್ನು ಜಾಗತಿಕ ಮಟ್ಟದಲ್ಲಿ ಬ್ರಾ್ಯಂಡಿಂಗ್ ಮತ್ತು ಮಾರುಕಟ್ಟೆಗೆ ತರಲಾಗುತ್ತದೆ. ಸೌಲಭ್ಯ ಮತ್ತು ಸೇವೆಗಳ ಗುಣಮಟ್ಟದ ಆಧಾರದ ಮೇಲೆ ಕೇಂದ್ರಗಳ ರೇಟಿಂಗ್ಗೆ ಚೌಕಟ್ಟನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಮಹಿಳಾ ಉದ್ಯಮಿಗಳಿಗೆ ಸಾಲ: ಕಳೆದೊಂದು ದಶಕದಲ್ಲಿ ಉದ್ಯಮಶೀಲತೆ ಮತ್ತು ಸುಲಭವಾದ ಜೀವನಶೈಲಿ ಮೂಲಕ ಮಹಿಳೆಯರ ಸಬಲೀಕರಣ ವೇಗ ಪಡೆದುಕೊಂಡಿದ್ದು, ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ 30 ಕೋಟಿ ರೂ. ಸಾಲ ನೀಡಲಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ. ಹತ್ತು ವರ್ಷಗಳ ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಶೇ.28 ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕೋರ್ಸ್ಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಶೇ.43 ದಾಖಲಾತಿ ಹೊಂದಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಪ್ರಸ್ತಾಪಿಸಿದ್ದಾರೆ. ಉದ್ಯಮಶೀಲತೆ, ಸುಲಭ ಜೀವನ ಮತ್ತು ಘನತೆಯ ಮೂಲಕ ಮಹಿಳೆಯರ ಸಬಲೀಕರಣ ಈ ಹತ್ತು ವರ್ಷಗಳಲ್ಲಿ ವೇಗ ಪಡೆದುಕೊಂಡಿದ್ದು, ಈ ಎಲ್ಲ ಕ್ರಮಗಳು ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರತಿಫಲಿಸುತ್ತದೆ ಎಂದಿದ್ದಾರೆ.
ಏಷ್ಯಾಡ್ ಸಾಧನೆಯ ಉಲ್ಲೇಖ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಭಾರತದ ಕ್ರೀಡಾಪಟುಗಳು ಕಳೆದ ವರ್ಷ ಹಾಂಗ್ರೆkೌ ಏಷ್ಯನ್ ಗೇಮ್್ಸ ಮತ್ತು ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ತೋರಿದ ಅಮೋಘ ಸಾಧನೆಯ ಬಗ್ಗೆ ಉಲ್ಲೇಖಿಸಿದರು. ಯುವಪ್ರತಿಭೆ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ನಲ್ಲಿ ಮ್ಯಾಗ್ನಸ್ ಕಾರ್ಲ್ಸೆನ್ಗೆ ದಿಟ್ಟ ಸವಾಲು ಒಡ್ಡಿದ್ದನ್ನೂ ಉಲ್ಲೇಖಿಸಿದ ವಿತ್ತ ಸಚಿವೆ, ಚದುರಂಗದಾಟದಲ್ಲಿ 2010ರಲ್ಲಿ ಕೇವಲ 20ರಲ್ಲಿದ್ದ ದೇಶದ ಗ್ರಾಂಡ್ವಾಸ್ಟರ್ಗಳ ಸಂಖ್ಯೆ ಈಗ 80ಕ್ಕೆ ಏರಿರುವುದನ್ನೂ ಪ್ರಸ್ತಾಪಿಸಿದರು.
ನವಭಾರತ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ ಪ್ರಗತಿ ನಿಷ್ಠ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೇ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಬಜೆಟ್ ಇದಾಗಿದ್ದು, ದೇಶದ ಪ್ರಗತಿಗೆ ಪೂರಕವಾಗಿದೆ.
| ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಇದೊಂದು ಕಳಪೆ ಬಜೆಟ್. ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಬಾರಿಯ ಬಜೆಟ್ನಲ್ಲಿ ರಾಜ್ಯದ ಯೋಜನೆಗಳಿಗೆ ಆದ್ಯತೆ ನೀಡಬೇಕು. ಕರ್ನಾಟಕ ರಾಜ್ಯದಿಂದ ನೀವು ಆಯ್ಕೆಯಾಗಿದ್ದು, ರಾಜ್ಯದ ಯೋಜನೆಗಳು ಹಾಗೂ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದೆ. ಆದರೆ ಈ ಬಾರಿಯ ಬಜೆಟ್ನಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ.
| ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಮತ್ತು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ಅಡಿ ಈ ಬಾರಿಯ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡುವ ಜತೆಜತೆಗೆ ನಾರಿಶಕ್ತಿಯ ಸ್ವಾಭಿಮಾನದ ಸ್ವಾವಲಂಬನೆಗೆ ‘ಲಕ್ಷಾಧಿಪತಿ ದೀದಿ’ ಯೋಜನೆ ಘೊಷಣೆಯಾಗಿದೆ. ಹೊಸ ಉದ್ಯೋಗಗಳ ಸೃಜನೆಗೆ ಆದ್ಯತೆ ನೀಡಲಾಗಿದೆ.
| ಎನ್. ರವಿಕುಮಾರ್ ವಿಧಾನ ಪರಿಷತ್ ಸದಸ್ಯ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2024-25ನೇ ಸಾಲಿನ ಬಜೆಟ್ ನಿಜವಾಗಿಯೂ ಆಶಾದಾಯಕವಾಗಿದೆ. ಆಯುಷ್ಮಾನ್ ಭಾರತದಡಿ ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಆರೋಗ್ಯ ವಿಮೆ ವಿಸ್ತರಿಸಿರುವುದು ಬಹುಮೌಲಿಕವೆನಿಸಿದೆ. ಅದರೊಂದಿಗೆ ಎಲೆಕ್ಟ್ರಿಕಲ್ ವಾಹನಗಳಿಗೆ ಉತ್ತೇಜನ ನೀಡಲಾಗಿದೆ, ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ.
| ಡಾ. ಪ್ರಭಾಕರ ಕೋರೆ ರಾಜ್ಯಸಭೆ ಮಾಜಿ ಸದಸ್ಯ
ಬಡವರು, ಮಹಿಳೆಯರು, ಯುವಕರು ಹಾಗೂ ರೈತರಿಗೆ ಆದ್ಯತೆಯನ್ನು ಘೊಷಿಸಿದ್ದು, ಆದಾಯ ತೆರಿಗೆ ಬದಲಾವಣೆ ಮಾಡದೆ ಜನಪ್ರಿಯ ಘೊಷಣೆ ಇಲ್ಲದೆ, ಆತ್ಮನಿರ್ಭರ ಭಾರತ್ ಗ್ಯಾರಂಟಿ ಜಾರಿಗೆ ತರಲಾಗಿದೆ. ಕರ್ನಾಟಕದ ಪಾಲಿಗೆ ನೀರಾವರಿ, ರೈಲ್ವೆ ಹಾಗೂ ಯಾವುದೇ ಯೋಜನೆಗಳನ್ನು ಪೋ›ತ್ಸಾಹಿಸದಿರುವುದು ನಿರಾಸೆ ಮೂಡಿಸಿದೆ.
| ಡಾ.ಎಂ.ಎಸ್. ಮಂಜುನಾಥ್, ಅರ್ಥಶಾಸ್ತ್ರಜ್ಞ