

ಮುಂಬೈ: ಜೀವವಿಮೆ ಕ್ಷೇತ್ರದ ದಿಗ್ಗಜ ಕಂಪನಿಯಾದ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಸದ್ಯದಲ್ಲೇ ಆರೋಗ್ಯ ವಿಮಾ ಕ್ಷೇತ್ರವನ್ನೂ ಪ್ರವೇಶಿಸುವುದು ನಿಚ್ಚಳವಾಗಿದೆ. ‘ಮುಂದಿನ ಎರಡು ವಾರಗಳಲ್ಲಿ, ಖಾಸಗಿ ಕಂಪನಿಯೊಂದರಲ್ಲಿ ಪಾಲು ಖರೀದಿಸುವುದು ಖಚಿತ. ಈ ಕುರಿತು ಮಾತುಕತೆ ನಡೆದಿದೆ. ಮಾ. 31ರೊಳಗೆ ಈ ಬಗ್ಗೆ ಅಧಿಕೃತ ಘೊಷಣೆ ಹೊರಬೀಳಲಿದೆ’ ಎಂದು ಎಲ್ಐಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಮೊಹಂತಿ ಮಂಗಳವಾರ ಹೇಳಿದ್ದಾರೆ.
ಯಾವ ಕಂಪನಿಯಲ್ಲಿ ಪಾಲು ಖರೀದಿಸಲಾಗುತ್ತದೆ ಎಂಬುದನ್ನು ಮೊಹಂತಿ ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ, ಮಣಿಪಾಲ್ ಸಿಗ್ನಾ ಕಂಪನಿಯಲ್ಲಿ ಎಲ್ಐಸಿ 4 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಪಾಲು ಖರೀದಿಸಲಿದೆ ಎಂದು ಮೂಲಗಳು ತಿಳಿಸಿವೆ. ‘ಖಾಸಗಿ ಕಂಪನಿಯಲ್ಲಿ ಶೇ. 51ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪಾಲನ್ನು ಖರೀದಿಸಿ ಸಂಪೂರ್ಣ ನಿಯಂತ್ರಣಕ್ಕೆ ಪಡೆಯುವ ಇರಾದೆ ಎಲ್ಐಸಿಗೆ ಸದ್ಯಕ್ಕಿಲ್ಲ. ಆದರೆ ಎಷ್ಟು ಪಾಲು ಹೊಂದಬೇಕೆಂಬ ತೀರ್ಮಾನವನ್ನು ಎಲ್ಐಸಿಯ ಆಡಳಿತ ಮಂಡಳಿ ತೆಗೆದುಕೊಳ್ಳಲಿದೆ’ ಎಂದರು. ಈಗಿರುವ ನಿಯಮಗಳ ಪ್ರಕಾರ, ಜೀವವಿಮಾ ಕಂಪನಿಗಳು ವಿಮೆ ಪಡೆದ ವ್ಯಕ್ತಿಗೆ ಆರೋಗ್ಯಸೇವೆ, ಚಿಕಿತ್ಸೆ ವೆಚ್ಚ ಒಳಗೊಂಡ ವಿಮೆಯನ್ನು ಒದಗಿಸುವುದಕ್ಕೆ ಅವಕಾಶವಿಲ್ಲ.
ನೂರು ವರ್ಷದ್ದೂ ಸೇರಿದಂತೆ ದೀರ್ಘಾವಧಿಯ ಸರ್ಕಾರಿ ಬಾಂಡ್ಗಳನ್ನು ಪರಿಚಯಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐಗೆ) ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮನವಿ ಮಾಡಿದೆ. ಇದುವರೆಗೆ 20-30 ವರ್ಷಗಳ ಬಾಂಡ್ಗಳಿಗೆ ಮಾತ್ರ ಅನುಮತಿ ನೀಡಿದ್ದ ಆರ್ಬಿಐ ಈಗ 40 ವರ್ಷದ ಬಾಂಡ್ಗೂ ಅವಕಾಶ ಕಲ್ಪಿಸಿದೆ. ಅದರ ಜತೆಗೆ 50 ವರ್ಷದ, ಅಷ್ಟೇ ಏಕೆ, 100 ವರ್ಷದ ಬಾಂಡ್ಗಳಿಗೂ ಅನುಮತಿ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದೇವೆ. ಈ ಕುರಿತು ಎಲ್ಐಸಿ ಅಧಿಕಾರಿಗಳು ಆರ್ಬಿಐ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ಆರ್ಬಿಐ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆಯೂ ಇದೆ ಎಂದು ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಮೊಹಂತಿ ಸುದ್ದಿಗಾರರಿಗೆ ಹೇಳಿದ್ದಾರೆ.