

ಶೃಂಗೇರಿ: ಪ್ರಸ್ತುತ ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವ ಅವಶ್ಯವಿದೆ. ಈ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಇಲಾಖೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ತಿಳಿಸಿದರು.
ಗ್ರಾಪಂ ಸಭಾಂಗಣದಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಇಂದ್ರಧನುಷ್-5.0 ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಭವಿಷ್ಯದ ಸಂಪತ್ತು. ಅವರ ಆರೋಗ್ಯ ರಕ್ಷಣೆಗಾಗಿ ನೀಡಲಾಗುವ ಲಸಿಕೆಗಳನ್ನು ಕಾಲಕಾಲಕ್ಕೆ ತೆಗೆದುಕೊಂಡರೆ ಸದೃಢರಾಗಲು ಸಾಧ್ಯ. ಆರೋಗ್ಯ ಇಲಾಖೆ ಜತೆ ಸಾರ್ವಜನಿಕರು ಸಹಕಾರ ನೀಡಿದಾಗ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ದಯಾನಂದ್ ಮಾತನಾಡಿ, ತಾಲೂಕಿನಲ್ಲಿ 11 ಲಸಿಕೆ ಶಿಬಿರಗಳಲ್ಲಿ ಐವರು ಗರ್ಭಿಣಿಯರು ಮತ್ತು 42 ಮಕ್ಕಳನ್ನು ಗುರುತಿಸಲಾಗಿದೆ. ಎಲ್ಲ ಇಲಾಖೆ ಹಾಗೂ ಜನಪ್ರತಿನಿಧಿಗಳ ಮೂಲಕ ಕಾರ್ಯಕ್ರಮದ ಯಶಸ್ವಿಗೆ ನಿರಂತರ ಪ್ರಯತ್ನಿಸಿ ಲಸಿಕೆಗಳನ್ನು ನೀಡಲಾಗುವುದು ಎಂದು ಹೇಳಿದರು.
ವೈದ್ಯೆ ಡಾ. ರಂಜಿತಾ ಶೆಟ್ಟಿ ಮಾತನಾಡಿ, ರೋಗ ನಿರೋಧಕಕ್ಕೆ ಪೂರಕವಾದ ಲಸಿಕೆಗಳನ್ನು ಮಕ್ಕಳಿಗೆ ನೀಡಿದಾಗ ಮಾತ್ರ ದಡಾರ, ರೂಬೆಲ್ಲಾ ಮತ್ತಿತರ ರೋಗಗಳನ್ನು ತಡೆಗಟ್ಟಬಹುದು. ಮಕ್ಕಳು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ಈಗಾಗಲೇ ಫಲಾನುಭವಿಗಳನ್ನು ಆಶಾ ಕಾರ್ಯಕರ್ತೆಯರು ಗುರುತಿಸಿದ್ದು ಲಸಿಕೆ ನೀಡಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷೆ ಭಾಗ್ಯಾ, ಸದಸ್ಯರಾದ ತ್ರಿಮೂರ್ತಿ, ಮಂಜುನಾಥ್, ಯೋಗೀಶ್, ಪಿಡಿಒ ನಾಗಭೂಷಣ್, ಆರೋಗ್ಯ ಇಲಾಖೆಯ ಋಷ್ಯಶೃಂಗೇಶ್ವರ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಇತರರಿದ್ದರು.