ಗಾಂಧಿ ಆಯ್ತು, ಈಗ ಕೊಲಂಬಸ್​ ಪ್ರತಿಮೆಯ ಶಿರಚ್ಛೇದನ ಮಾಡಿದ ಕಿಡಿಗೇಡಿಗಳು

columbus
Published on

ವಾಷಿಂಗ್ಟನ್‌: ಅಮೆರಿಕದಲ್ಲಿ ಜನಾಂಗೀಯ ಹಲ್ಲೆ ಮತ್ತು ವರ್ಣಬೇಧ ನೀತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ಇಳಿದಿರುವ ನಡುವೆಯೇ ಮೆಸಾಚ್ಯುಸೆಟ್ಸ್‌ನ ಬೋಸ್ಟನ್‌ ನಗರದ ಹೃದಯ ಭಾಗದಲ್ಲಿರುವ ಕ್ರಿಸ್ಟೊಫರ್‌ ಕೊಲಂಬಸ್‌ನ ಪ್ರತಿಮೆಯ ತಲೆಯನ್ನು ಕೆಲವು ಕಿಡಿಗೇಡಿಗಳು ಕತ್ತರಿಸಿದ್ದಾರೆ. ಮಿಯಾಮಿಯಲ್ಲೂ ಕೊಲಂಬಸ್‌ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.

ಆರು ಅಡಿ ಎತ್ತರದ ಈ ಪ್ರತಿಮೆಯನ್ನು 1979ರಲ್ಲಿ ಅನಾವರಣಗೊಳಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಪ್ರತಿಭಟನಾಕಾರರು ಅಮೆರಿಕ ರಾಜಧಾನಿಯಾಗಿರುವ ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸಿದ್ದರು.

ಜಾರ್ಜ್‌ ಫ್ಲಾಯ್ಡ ಹತ್ಯೆ ಹಾಗೂ ವರ್ಣಭೇದ ನೀತಿ ವಿರೋಧಿಸಿ ಅಮೆರಿಕದಲ್ಲಿ ಕೆಲ ದಿನಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಕೊಲಂಬಸ್​ ಸ್ಮರಣಾರ್ಥ ದೇಶಾದ್ಯಂತ ನಿರ್ಮಿಸುವ ಪ್ರತಿಮೆಗಳನ್ನು ತೆರವುಗೊಳಿಸಿ ಎಂದು ಹೋರಾಟ ಮಾಡಿದ್ದರು. ಇದರ ಬೆನ್ನಲ್ಲೇ ಈ ಕೃತ್ಯ ಎಸಗಲಾಗಿದೆ.

ವಾರದ ಹಿಂದೆ ವರ್ಜೀನಿಯಾದಲ್ಲಿದ್ದ ಪ್ರತಿಮೆಯೊಂದನ್ನು ಕೆರೆಗೆ ಹಾಕಲಾಗಿತ್ತು. ಈ ಪ್ರತಿಮೆಗಳು ವರ್ಣಭೇದ ನೀತಿಯ ಸಂಕೇತವಾಗಿದೆ ಎನ್ನುವುದು ಪ್ರತಿಭಟನಾಕಾರರ ಹೇಳಿಕೆ. ಕಪ್ಪುವರ್ಣೀಯರು ಮಾತ್ರವಲ್ಲದೇ ಕೆಲವು ಅಮೆರಿಕನ್ನರೂ ಕೊಲಂಬಸ್​ ಪ್ರತಿಮೆ ವಿಘ್ನಕ್ಕೆ ಕೈಜೋಡಿಸಿದ್ದಾರೆ. ಈತ ಸಮುದ್ರಮಾರ್ಗದ ಅನ್ವೇಷಕ ಎನ್ನುವುದು ಕೆಲವು ಅಮೆರಿಕರನ್ನರೂ ಒಪ್ಪುತ್ತಿಲ್ಲ. ಆದ್ದರಿಂದ ಅವರು ಪ್ರತಿಮೆ ಧ್ವಂಸಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.

ಕೊಲಂಬಸ್​ ಅಮೆರಿಕ ಯಾನ ಕೈಗೊಂಡ ಬಳಿಕ ಅಲ್ಲಿ ಐರೋಪ್ಯ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ವಸಾಹತು ಆರಂಭಿಸಿದ್ದರು. ಈ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪನೆ ಮಾಡಲಾಗುವುದು, ಕೃತ್ಯದ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಬೋಸ್ಟನ್​ ಮೇಯರ್​ ಮಾರ್ಟಿ ವಾಲ್​ಶ್​ ಹೇಳಿದ್ದಾರೆ.

ಕಳೆದ ಮಂಗಳವಾರ ಕೂಡ ರಿಚ್ಮಂಡ್​ನ ಬರ್ಡ್​ಪಾರ್ಕ್​ನಲ್ಲಿರುವ ಕೊಲಂಬಸ್​ ಪ್ರತಿಮೆಯನ್ನು ಕೆಡವಿ ಸರೋವರಕ್ಕೆ ಎಸೆಯಲಾಗಿತ್ತು. ಇದು ಅಮೆರಿದಲ್ಲಿ ಸ್ಥಾಪಿಸಲಾಗಿರುವ ಮೊದಲ ಕೊಲಂಬಸ್​ ಪ್ರತಿಮೆ 1927ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net