ಅಕ್ರಮ ಸಂಬಂಧದ ಸುಳಿಯಲ್ಲಿ ಸಿಲುಕಿ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ ದುರಂತ ಸಾವು

Tamil Nadu Police
Published on

ಚೆನ್ನೈ: ಅಕ್ರಮ ಸಂಬಂಧದ ಸುಳಿಯಲ್ಲಿ ಸಿಲುಕಿದ ರೈಲ್ವೆ ಪೊಲೀಸರಿಬ್ಬರು ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಮದುರೈನಲ್ಲಿ ನಡೆದಿದೆ. ಇಬ್ಬರು ಕೂಡ ವೇಗದ ರೈಲಿನ ಮುಂದೆ ಜಿಗಿದು ಪ್ರಾಣ ಬಿಟ್ಟಿದ್ದಾರೆ. ಮನಕಲಕುವ ಸಂಗತಿ ಏನೆಂದರೆ, ಏನೂ ತಪ್ಪು ಮಾಡದ ಮಕ್ಕಳಿಬ್ಬರು ಸಹ ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ಮೃತರನ್ನು ಜಯಲಕ್ಷ್ಮೀ (30) ಮತ್ತು ಸೊಕ್ಕಲಿಂಗ ಪಾಂಡಿಯನ್​ ಎಂದು ಗುರುತಿಸಲಾಗಿದೆ. ಗುರುವಾರ ಮೊದಲು ಜಯಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಮೃತಪಟ್ಟಲು. ಈ ಸುದ್ದಿಯನ್ನು ಕೇಳಿದ ಕೂಡಲೇ ಸೊಕ್ಕಲಿಂಗ ಪಾಂಡಿಯನ್​ ಕೂಡ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುರೈನಲ್ಲಿ ಜಯಲಕ್ಷ್ಮಿ ಮತ್ತು ಸೆಂಗೊಟ್ಟೈನಲ್ಲಿ ಪಾಂಡಿಯನ್​ ಮೃತಪಟ್ಟಿದ್ದಾರೆ.

ಪತಿಯಿಂದ ಡಿವೋರ್ಸ್​ ಪಡೆದಿದ್ದ ಜಯಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ಉಳಿದುಕೊಂಡಿದ್ದರು. ಕಳೆದ 6 ವರ್ಷಗಳಿಂದ ರೈಲ್ವೆ ಪೊಲೀಸ್​ ಇಲಾಖೆಯ ಹೆಡ್​ ಕಾನ್ಸ್​ಟೆಬಲ್ ಪಾಂಡಿಯನ್​ ಜತೆ ವಿವಾಹೇತರ ಸಂಬಂಧ ಹೊಂದಿದ್ದರು. ಪಾಂಡಿಯನ್​ ಡಿವೋರ್ಸ್​ ಕೇಸ್​ ಕೋರ್ಟ್​ನಲ್ಲಿತ್ತು. ಎಲ್ಲ ಇತ್ಯರ್ಥವಾದ ಬಳಿಕ ಮದುವೆ ಮಾಡಿಕೊಳ್ಳಲು ಇಬ್ಬರು ನಿರ್ಧಾರ ಮಾಡಿದ್ದರು. ಪಾಂಡಿಯನ್​, ಜಯಲಕ್ಷ್ಮಿ ಬಳಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದನು. ​

ಪಾಂಡಿಯನ್​ ಬೇರೊಂದು ಮಹಿಳೆ ಶಿವಗಾಮಿ ಎಂಬಾಕೆಯ ಜತೆ ಸಂಬಂಧ ಇಟ್ಟುಕೊಂಡಿರುವುದು ಜಯಲಕ್ಷ್ಮಿಗೆ ತಿಳಿಯಿತು. ಬಳಿಕ ಶಿವಗಾಮಿಗೆ ಕರೆ ಮಾಡಿ ಜಯಲಕ್ಷ್ಮಿ ಬೆದರಿಕೆ ಹಾಕಿದ್ದರು. ಆದರೆ, ಬೆದರಿಕೆ ಹಾಕಿದ್ದ ಆಡಿಯೋ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಕೂಡಲೇ ಜಯಲಕ್ಷ್ಮಿ ತನ್ನ ಮಕ್ಕಳೊಂದಿಗೆ ತಿರುಚಿರಪಳ್ಳಿಗೆ ಸ್ಥಳಾಂತರವಾಗಿ ವೈದ್ಯಕೀಯ ರಜೆ ತೆಗೆದುಕೊಂಡಿದ್ದರು.

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮಧುರೈ ಜಿಲ್ಲೆಯ ಸಮಯನಲ್ಲೂರು ಬಳಿಯ ಮಧುರೈ-ದಿಂಡಿಗಲ್ ರೈಲ್ವೆ ಹಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಇಬ್ಬರು ಮಕ್ಕಳು ಸಮೇತ ಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳನ್ನು ಮಗ ಕಾಳಿಮುತ್ತು ರಾಜ (9) ಮತ್ತು ಮಗಳು ಪವಿತ್ರಾ (11) ಎಂದು ಗುರುತಿಸಲಾಗಿದೆ.

ಜಯಲಕ್ಷ್ಮಿ ಸಾವಿನ ಸುದ್ದಿ ತಿಳಿದ ಸೊಕ್ಕಲಿಗ ಪಾಂಡಿಯನ್ ತನ್ನ ಸಹೋದರನಿಗೆ ವಾಟ್ಸಾಪ್ ಮೂಲಕ ‘ತಪ್ಪು ಮಾಡಿದ್ದೇನೆ’ ಎಂದು ಸಂದೇಶ ರವಾನಿಸಿ ಶುಕ್ರವಾರ ಬೆಳಗ್ಗೆ ಕೋವಿಲಪಟ್ಟಿ ಬಳಿ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net