70 ಲಾರಿ ಮಾಲೀಕನಾಗಿದ್ದವ ಈಗ ಸರಗಳ್ಳ

arrested
Published on

ಬೆಂಗಳೂರು: ಕದ್ದ ಬೈಕ್‌ನಲ್ಲಿ ಒಂಟಿಯಾಗಿ ಬಂದು ಮಹಿಳೆಯರ ಸರಗಳವು ಮಾಡುತ್ತಿದ್ದವನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಕೋಳಿವಾಡ ಮೂಲದ ವಿಶ್ವನಾಥ್ (34) ಬಂಧಿತ. 157ಕ್ಕೂ ಅಧಿಕ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಆರೋಪಿಯನ್ನು ಬಂಧಿಸಿ 8 ಪ್ರಕರಣ ಪತ್ತೆಹಚ್ಚಿ 24 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಬಳ್ಳಾರಿ ಗಣಿಗಾರಿಕೆಗೆ 70 ಲಾರಿಗಳನ್ನು ಬಾಡಿಗೆಗೆ ಬಿಟ್ಟಿದ್ದ ವಿಶ್ವನಾಥ್, ಕೊನೆಗೆ ಗಣಿಗಾರಿಕೆ ನಿಂತ ಮೇಲೆ ನಷ್ಟಕ್ಕೆ ಒಳಗಾಗಿದ್ದ. ಆರ್ಥಿಕ ಸಂಕಷ್ಟದಿಂದ ಹೊರಬರಲು ಸರಗಳ್ಳತನ ಕೃತ್ಯಕ್ಕೆ ಇಳಿದಿದ್ದ.

ಬೆಂಗಳೂರು ನಗರ ಮತ್ತು ಧಾರವಾಡದಲ್ಲಿ ಕೃತ್ಯ ಎಸಗುತ್ತಿದ್ದ. ಆನ್‌ಲೈನ್‌ನಲ್ಲಿ ಬೈಕ್ ಖರೀದಿ ಅಥವಾ ಕದ್ದ ಬೈಕ್‌ಗಳನ್ನು ಏರಿ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಪರಿಚಯಸ್ಥರಂತೆ ಮಹಿಳೆಯ ಬಳಿಗೆ ಹೋಗಿ ಚಿನ್ನದ ಸರ ದೋಚುತ್ತಿದ್ದ. ಕದ್ದ ಚಿನ್ನವನ್ನು ಮಾರಾಟ ಮಾಡಿ ಮೋಜುಮಸ್ತಿ ಮಾಡಿ ಕಾಲ ಕಳೆಯುತ್ತಿದ್ದ. ಜೇಬು ಖಾಲಿಯಾದ ಮೇಲೆ ಮತ್ತೆ ಏಕಾಂಗಿಯಾಗಿ ಬೈಕ್ ಏರಿ ಸರಗಳ್ಳತನ ಮಾಡುತ್ತಿದ್ದ. ಬೆಂಗಳೂರು ನಗರ ಅಲ್ಲದೆ, ವಿವಿಧ ಜಿಲ್ಲೆಗಳಲ್ಲಿ 155ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

2018ರಲ್ಲಿ ಜ್ಞಾನಭಾರತಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಆಗಸ್ಟ್‌ನಲ್ಲಿ ಗಿರಿನಗರ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ತೆರಳಿ ಮಹಿಳೆ ಬಳಿ 40 ಗ್ರಾಂ ಸರ ಎಗರಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಸತೀಶ್‌ಕುಮಾರ್ ನೇತೃತ್ವದ ಕೃತ್ಯ ನಡೆದ ಸುತ್ತಮುತ್ತ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಯ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಆರೋಪಿಯ ಬಂಧನಕ್ಕೆ ಬೆನ್ನತ್ತಿದ್ದಾಗ ಹೈದರಾಬಾದ್‌ನ ಚೈತನ್ಯಪುರ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಯತ್ನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಈ ವಿಷಯ ತಿಳಿದು ಬಾಡಿ ವಾರಂಟ್ ಪಡೆದು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಂಟು ಪ್ರಕರಣಗಳು ಬೆಳಕಿಗೆ ಬಂದಿವೆ ಬಿ. ದಯಾನಂದ್‌ತಿಳಿಸಿದ್ದಾರೆ.

ನೇಮ್ ಬೋಡ್ ಹೆಸರು ಬಳಸಿ ಗಾಳ

ಆರೋಪಿ ವಿಶ್ವನಾಥ್, ಏಕಾಂಗಿಯಾಗಿ ಬೈಕ್‌ನಲ್ಲಿ ಸುತ್ತಾಡುತ್ತಿದ್ದ. ಮನೆಯ ಮುಂದೆ ಹಾಕಿರುವ ನೇಮ್ ಬೋರ್ಡ್‌ನಲ್ಲಿ ಇರುವ ಹೆಸರನ್ನು ತಿಳಿದು ಮನೆಯಲ್ಲಿ ಇರುವ ಮಹಿಳೆಯರಿಗೆ ಆ ಹೆಸರಿನವರು ಇದ್ದಾರಾ ಎಂದು ಪ್ರಶ್ನಿಸುತ್ತಿದ್ದ. ಇಲ್ಲ ಎಂದಾಗ ಅಥವಾ ಅವರ ಬಗ್ಗೆ ಮಾಹಿತಿ ಕೇಳುವ ಸಲುವಾಗಿ ಮಹಿಳೆಯರ ಹತ್ತಿರ ಹೋಗಿ ಏಕಾಏಕಿ ಸರಗಳವು ಮಾಡುತ್ತಿದ್ದ. ಇದೇ ರೀತಿ ಗಿರಿನಗರ ಠಾಣೆ ವ್ಯಾಪ್ತಿಯಲ್ಲೂ ಕೃತ್ಯ ಎಸಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net