

ಮುಂಬೈ: ವಾರಕ್ಕೆ 70 ಮತ್ತು 90 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ನಡೆಯುತ್ತಿರುವ ಚರ್ಚೆಯ ಮಧ್ಯೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ(Akash Ambani) ಅವರ ಹೇಳಿದೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಚೇರಿಯಲ್ಲಿ ಕಳೆಯುವ ಕೆಲಸದ ಸಮಯಕ್ಕಿಂತ ಕೆಲಸದ ಗುಣಮಟ್ಟ ಮುಖ್ಯವಾಗಿದೆ ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.
ಮುಂಬೈ ಟೆಕ್ ವೀಕ್ ಕಾರ್ಯಕ್ರಮದಲ್ಲಿ ಮಾತನಾಡಿದ ದೇಶದ ಅತ್ಯಂತ ಶ್ರೀಮಂತ ಕೈಗಾರಿಕೋದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ, ಕೆಲಸ ಮತ್ತು ಕುಟುಂಬ ಎರಡೂ ತಮ್ಮ ಜೀವನದಲ್ಲಿ ದೊಡ್ಡ ಆದ್ಯತೆಗಳಾಗಿವೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ತನ್ನ ಆದ್ಯತೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ. ಅಲ್ಲದೆ ನಿಕಟ ಕುಟುಂಬದಲ್ಲಿ ಬೆಳೆಯುವುದು ಅವರ ಮೌಲ್ಯಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಹೇಗೆ ರೂಪಿಸಿದೆ ಎಂಬುದನ್ನು ವ್ಯಕ್ತಪಡಿಸಿದರು. ನಿಸ್ಸಂದೇಹವಾಗಿ ನಾವು ಬೆಳೆದ ಕುಟುಂಬ ನಮಗೆ ಸಿಕ್ಕ ದೊಡ್ಡ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ನಾಲ್ಕು ದಶಕಗಳ ಕಾಲ ಉದ್ಯಮದಲ್ಲಿ ಸೇವೆ ಸಲ್ಲಿಸಿದ್ದರೂ ಸಹ ಮುಖೇಶ್ ಅಂಬಾನಿ, ಪ್ರತಿ ಇಮೇಲ್ ಅನ್ನು ಬೆಳಗಿನ ಜಾವ 2 ಗಂಟೆಯವರೆಗೆ ಉತ್ತರಿಸುತ್ತಾರೆ ಎಂದು ಬಹಿರಂಗಪಡಿಸಿದರು. ತಮ್ಮ ವೃತ್ತೀಜೀವನದ ನಾಲ್ಕನೇ ದಶಕದಿಂದ ಕೆಲಸ ಮಾಡುತ್ತಿದ್ದರೂ ಸಹ ಇಂದಿಗೂ ನನ್ನ ತಂದೆ ಇಮೇಲ್ಗಳಿಗೆ ಬೆಳಗಿನ ಜಾವ 2 ಗಂಟೆವರೆಗೆ ರಿಪ್ಲೆ ನೀಡುತ್ತಾರೆ. ಇದು ನಮಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ. ನಾನು (ಕೆಲಸದಲ್ಲಿ ಕಳೆಯುವ ಸಮಯ) ಸಮಯ ಮತ್ತು ಗಂಟೆಗಳ ಪ್ರಮಾಣದಲ್ಲಿ ಯೋಚಿಸುವುದಿಲ್ಲ. ಇದು ನೀವು ಪ್ರತಿದಿನ ಮಾಡುವ ಕೆಲಸದ ಗುಣಮಟ್ಟದ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಕಾರ್ಪೊರೇಟ್ ಕಾರ್ಯನಿರ್ವಾಹಕರು ಕೆಲಸದ ಸಮಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವಾರಕ್ಕೆ 90 ಗಂಟೆಗಳವರೆಗೆ ಕೆಲಸ ಮಾಡುವುದು ಮತ್ತು ಕುಟುಂಬಕ್ಕಿಂತ ಕೆಲಸಕ್ಕೆ ಆದ್ಯತೆ ನೀಡುವುದನ್ನು ಪ್ರತಿಪಾದಿಸಿದರೆ, ಇನ್ನು ಕೆಲವರು ಆ ಗಂಟೆಗಳಿಂದ ಸಾಧಿಸಿದ ಫಲಿತಾಂಶಗಳ ಪರವಾಗಿ ಮಾತನಾಡಿದ್ದಾರೆ. ಅದೇ ಸಮಯದಲ್ಲಿ ಒಂದು ವಿಭಾಗವು ವಾರಕ್ಕೆ 50 ಗಂಟೆಗಳಿಗಿಂತ ಕಡಿಮೆ ಕೆಲಸ ಮಾಡುವುದರ ಪರವಾಗಿದೆ. ವಾಸ್ತವವಾಗಿ ಈ ವಿವಾದವು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ಭಾರತೀಯರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದಾಗ ಪ್ರಾರಂಭವಾಯಿತು. ದೇಶವನ್ನು ಈ ರೀತಿ ಮುನ್ನಡೆಸಲ ನಾವು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದರು.(ಏಜೆನ್ಸೀಸ್)