

ಬದಿಯಡ್ಕ: ಗೃಹಿಣಿಯೊಬ್ಬರು 20 ವರ್ಷ ಹಿಂದೆ ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ಪಡೆದ ಅಚ್ಚರಿ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ನೆಲ್ಲಿಕುಂಜೆ ನಿವಾಸಿ ಬಸರಿಯಾ ವಿವಾಹ ಕಾರ್ಯಕ್ರಮವೊಂದರಲ್ಲಿ ಸೊಂಟದ ಪಟ್ಟಿಯ 12 ಗ್ರಾಂ ತೂಕವಿದ್ದ ಒಂದು ಭಾಗವನ್ನು ಕಳೆದುಕೊಂಡಿದ್ದರು.
ಅದು ಸಿಕ್ಕಿದ ವ್ಯಕ್ತಿ ಈಗ 20 ವರ್ಷಗಳ ಬಳಿಕ ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ಕಳಿಸಿಕೊಟ್ಟು ಕ್ಷಮೆ ಕೇಳಿದ್ದಾರೆ. ಮಂಗಳವಾರ ಬಸರಿಯಾ ಇಫ್ತಾರ್ಗೆ ಸಿದ್ಧತೆ ನಡೆಸುತ್ತಿದ್ದಾಗ ಮನೆ ಬಾಗಿಲಿಗೆ ಬಂದ ಹೆಲ್ಮೆಟ್ಧಾರಿ ಯುವಕ, ಆಹಾರ ಪದಾರ್ಥಗಳಿದ್ದ ದೊಡ್ಡ ಪ್ಯಾಕ್ ನೀಡಿ ‘ನಾನು ಓರ್ವ ಡೆಲಿವರಿ ವ್ಯಕ್ತಿಯಷ್ಟೇ. ಬೇರೆ ವ್ಯಕ್ತಿ ಇದನ್ನು ಕಳುಹಿಸಿಕೊಟ್ಟಿದ್ದಾರೆ’ ಎಂದಿದ್ದ. ಪ್ಯಾಕ್ ಬಿಚ್ಚಿದಾಗ ತುಪ್ಪದ ಅನ್ನ, ಬೀಫ್ ಕರಿ ಜತೆಗೆ ಪತ್ರ ಹಾಗೂ ಸಣ್ಣ ಬಾಕ್ಸ್ನಲ್ಲಿ ಚಿನ್ನದ ಎರಡು ನಾಣ್ಯಗಳಿದ್ದವು. ‘20 ವರ್ಷ ಹಿಂದೆ ನೀವು ಕಳೆದುಕೊಂಡಿದ್ದ ಚಿನ್ನ ನನಗೆ ಸಿಕ್ಕಿತ್ತು, ಆಗ ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಈಗ ಅದರ ಬದಲಿಗೆ ಚಿನ್ನದ ನಾಣ್ಯಗಳನ್ನು ನೀಡುತ್ತಿದ್ದೇನೆ. ಇದನ್ನು ಒಪ್ಪಿಕೊಂಡು ನನ್ನನ್ನು ಕ್ಷಮಿಸಿ’ ಎಂಬುದು ಮಲಯಾಳಂನಲ್ಲಿ ಬರೆದ ಪತ್ರದಲ್ಲಿತ್ತು.