ಅದನ್ನು ಹೇಳುವ ಧೈರ್ಯ ಅವರಿಗೆ ಮಾತ್ರ! 'ಪುಷ್ಪ' ಫಹಾದ್‌ ಬಗ್ಗೆ ನಟಿ ಊರ್ವಶಿ ಬಿಚ್ಚುಮಾತು | Urvashi

ವಿಜಯವಾಣಿ - 2024-12-05T132556.123
Published on

ತಮಿಳುನಾಡು: ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿ ಸಿನಿಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಿರುವ ಬಹುಭಾಷಾ ತಾರೆ ಊರ್ವಶಿ (Urvashi), ತಮ್ಮ ಮುಂಬರುವ ಸಿನಿಮಾ ಮತ್ತು ಮುಂದಿನ ಪೀಳಿಗೆಯ ಚಿತ್ರೋದ್ಯಮದ ಬಗ್ಗೆ ಮನಬಿಚ್ಚಿ ಕೆಲವು ವಿಷಯಗಳನ್ನು ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಇಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿರುವ ನಟ ಫಹದ್ ಫಾಸಿಲ್​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ತೆರೆಯ ಮೇಲೆ ಅಲ್ಲು ಅರ್ಜುನ್​ ಮತ್ತು ಫಹದ್​ ಕಾಂಬಿನೇಷನ್ ನೋಡುಗರಿಗೆ ಸಖತ್​ ಥ್ರಿಲ್ ಕೊಟ್ಟಿದ್ದು, ಮೊದಲ ದಿನವೇ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸಿವೆ. ಆದರೆ, ಮುಂಬರುವ ದಿನಗಳಲ್ಲಿ ಚಿತ್ರ ಹೇಗೆ ಕಮಾಲ್ ಮಾಡಲಿದೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಸ್ಟಾರ್‌ಡಮ್, ಜನಪ್ರಿಯತೆ

ಕ್ರಿಸ್ಟೋ ಟಾಮಿ ನಿರ್ದೇಶನದ 'ಉಲ್ಲೋಜುಕ್ಕು' ಚಿತ್ರದಲ್ಲಿ ಲೀಲಮ್ಮ ಪಾತ್ರದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದ ಊರ್ವಶಿ ಅವರಿಗೆ ಆರನೇ ಬಾರಿಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಒಲಿದು ಬಂದಿತು. ಈ ಸಂತಸದಲ್ಲಿ ಮುಂದಿನ ತಲೆಮಾರಿನ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ನಟಿ, "ಪ್ರಸ್ತುತ ಭಾರತೀಯ ಚಿತ್ರೋದ್ಯಮದಲ್ಲಿ ಅತ್ಯುತ್ತಮ ನಟರ ಪೈಕಿ ಫಹದ್​ ಕೂಡ ಒಬ್ಬರು. ಇಂದು ಅನೇಕ ನಟರು ತಮ್ಮ ಸ್ಟಾರ್‌ಡಮ್ ಹೆಚ್ಚಿಸಿಕೊಳ್ಳುವ ಹಾಗೂ ಜನಪ್ರಿಯತೆಯನ್ನು ಗಳಿಸುವತ್ತ ಗಮನಹರಿಸುತ್ತಿದ್ದಾರೆ. ಆದರೆ, ಫಾಸಿಲ್​ ಒಳ್ಳೊಳ್ಳೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದಾರೆ" ಎಂದರು.

ನಿಜವಾದ ಪ್ಯಾನ್-ಇಂಡಿಯನ್ ಸ್ಟಾರ್

"ಫಹಾದ್‌ ಇರುವ ರೀತಿ ನನ್ನ ಅನೇಕ ಗೆಳೆಯರಿಗಿಂತ ವಿಭಿನ್ನ. ಅವರೆಲ್ಲಾ ತಮ್ಮನ್ನು ತಾವು ಹೀರೋ ಮತ್ತು ಸ್ಟಾರ್‌ಗಳಾಗಿ ನೋಡಲು ಇಚ್ಛಿಸುತ್ತಾರೆ. ಆದರೆ, ಫಾಸಿಲ್​ ಮಾತ್ರ ತಮ್ಮನ್ನು ತಾವು ಒಬ್ಬ ನಟನಾಗಿ ತೊಡಿಸಿಕೊಳ್ಳಲು ಹೆಚ್ಚು ಆದ್ಯತೆ ನೀಡುತ್ತಾರೆ. ತಾನೊಬ್ಬ ನಟ ಎಂದು ಹೇಳಿಕೊಳ್ಳುವ ಧೈರ್ಯ ಅವರಿಗೆ ಮಾತ್ರ ಇರೋದು" ಎಂದು ಊರ್ವಶಿ ಒತ್ತಿ ಹೇಳಿದ್ದಾರೆ.

"ಯಾವುದೇ ಗಿಮಿಕ್‌ಗಳನ್ನು ಮಾಡದೆ ಯಶಸ್ಸು ಮತ್ತು ಜನಪ್ರಿಯತೆಯನ್ನು ಫಹಾದ್​ ಸಂಪಾದಿಸಿದ್ದಾರೆ. ಪ್ರಸ್ತುತ ಪೀಳಿಗೆಯ ನಟರಲ್ಲಿ ಅವರು ವಿಶಿಷ್ಟ ಗುರುತನ್ನು ಸಾಬೀತುಪಡಿಸಿಕೊಂಡಿದ್ದಾರೆ. 'ನಾನು ಸ್ಟಾರ್ ಅಲ್ಲ. ನಾನು ನಟನಾಗಿ ಕಾಣಿಸಿಕೊಳ್ಳಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ಇದು ಫಹಾದ್ ಅವರನ್ನು ಒಬ್ಬ ನಿಜವಾದ ಪ್ಯಾನ್-ಇಂಡಿಯನ್ ನಟ ಎನ್ನುವಂತೆ ಮಾಡಿದೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net