

ರಾಮನಗರ: ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಎಂಥೆಂತವರನ್ನ ನಾವು ನೋಡಿಲ್ಲ, ಇಲ್ಯಾರೋ ಮಂತ್ರಿಯಾದ್ರೆ ಹೆದರಿಕೊಂಡು ಹೋಗ್ತೀವಾ? ಯಡಿಯೂರಪ್ಪ ನಮ್ಮ ಜಿಲ್ಲೆಯವರನ್ನೇ ನಾಲ್ಕು ಜನರನ್ನ ಮಂತ್ರಿ ಮಾಡಲಿ. ನನ್ನ ಕ್ಷೇತ್ರಕ್ಕೆ ನಾನೇ ಸರ್ಕಾರ, ನಾನೇ ಮಂತ್ರಿ. ನನ್ನ ಕ್ಷೇತ್ರದ ಅಭಿವೃದ್ಧಿಯಷ್ಟೇ ನನಗೆ ಮುಖ್ಯ. ಇನ್ಯಾರೋ ಮಂತ್ರಿ ಆಗುವುದನ್ನ ತಡೆಯೋದು ನನಗೆ ಬೇಡದ ವಿಷಯ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಎಚ್ಡಿಕೆ ಗರಂ ಆದರು.
ಕ್ಷೇತ್ರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಮಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆ. ಅದರ ಹೊರತು ರಾಜಕೀಯವಾಗಿ ಯಾವುದೇ ವಿಚಾರ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅವರು 20 ಕೆರೆ ತುಂಬಿಸಿರೋದಕ್ಕೆ ಭಗೀರಥ ಆಗಿಬಿಟ್ರು, ನಾನು 128 ಕೆರೆ ತುಂಬಿಸಿದ್ದೇನೆ. ನಾನು ಪ್ರಮಾಣಿಕವಾಗಿ ಕೆಲಸ ಮಾಡಿರುವ ವ್ಯಕ್ತಿ. ಜಿಲ್ಲೆಯಲ್ಲಿ ಬಡವರಿಗೆ ಅನ್ಯಾಯ ಹಾಗೂ ಅಕ್ರಮ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡಲ್ಲ ಎಂದ ಎಚ್ಡಿಕೆ, ಯೋಗೇಶ್ವರ್ ಹೆಸರನ್ನೇಳದೆ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)