ಕಾಂಗ್ರೆಸ್ ಸರ್ಕಾರದ​ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ: ಎಚ್​ಡಿಕೆ

hdk
Published on

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಕಾಂಗ್ರೆಸ್​ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿತ್ತು.

ಗ್ಯಾರಂಟಿಗಳ ಅನುಷ್ಠಾನದ ವಿಚಾರವಾಗಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್​ ಮಾಡಿದ್ದು ಕಾಂಗ್ರೆಸ್​ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುಗ ಎಚ್​ಡಿಕೆ ಕಾಂಗ್ರೆಸ್ ಗೆ 135 ಸೀಟು ಕೊಟ್ಟ ಜನತೆಯ 'ಗ್ಯಾರಂಟಿ ಬೇಡಿಕೆ'ಯಲ್ಲಿ ನ್ಯಾಯವಿದೆ. 5 ಗ್ಯಾರಂಟಿ ಜಾರಿ ಕಾಂಗ್ರೆಸ್​ ಸರ್ಕಾರದ ಜವಾಬ್ದಾರಿ . ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ ಅವರೇ ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

HDK Tweet

ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತದೆ, ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ.ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಾಮೇಷ ಎಂದರೆ ಜನ ಒಪ್ಪುವರೇ.

HDK Tweet

ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಅವರ ಅಕ್ಕಪಕ್ಕದವರ ಹೇಳಿಕೆಗಳನ್ನು ಜನರು ನಂಬುತ್ತಿಲ್ಲ. ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ ಎಂದು ಆಗ್ರಹಿಸಿದ್ದಾರೆ.

HDK Tweet

ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೊಟ್ಟ 'ಗ್ಯಾರಂಟಿ ಜಾಹೀರಾತು'ಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ. ಅದೇ ರೀತಿ; ಸ್ವತಃ ಮುಖ್ಯಮಂತ್ರಿಗಳೇ ಜೂನ್ 1ಕ್ಕೆ ಜಾರಿ ಮಾಡುವ ಬಗ್ಗೆ ಜಾಹೀರಾತು ನೀಡಿ ಜನರಿಗೆ ಖಾತರಿ ಕೊಡಲಿ. ವಿಳಂಬದಿಂದ ಸರಕಾರದ ವಿಶ್ವಾಸಾರ್ಹತೆಗೆ ಪೆಟ್ಟು ಬೀಳುವುದೇ ಹೆಚ್ಚು. ಜನರಿಗೆ ಅಭದ್ರತೆಯ ಗ್ಯಾರಂಟಿ ಬೇಡವೇ ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

HDK Tweet

ಅದು ಬಿಟ್ಟು 'ಕೆಲ ಸಚಿವರು, ಶಾಸಕ'ರನ್ನು ನನ್ನ ಮೇಲೆ ಛೂ ಬಿಟ್ಟರೆ ಪ್ರಯೋಜನವಿಲ್ಲ. ಅಂಥ ರಾಜಕಾರಣ ಉಪಯೋಗವೂ ಇಲ್ಲ. ಗ್ಯಾರಂಟಿಗಳ ಬಗ್ಗೆ ಜನಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜಾರಿ ಮಾಡಿ, ಅದರ ಹೊರತಾಗಿ ಈ ಭರವಸೆಗಳೇ ಅಗಮ್ಯಗೋಚರವಾಗಿ ಗಮ್ಯವೇ ಇಲ್ಲದ ಆಡಳಿತ ಕೊಡುವುದು ಬೇಡ. ಇಷ್ಟೇ ನನ್ನ ಕಾಳಜಿ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಟ್ವೀಟ್​ ಮಾಡಿ ಕಾಂಗ್ರೆಸ್​ ಸರ್ಕಾರವನ್ನು ಆಗ್ರಹಿಸಿದ್ದಾರೆ.

HDK Tweet
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net