

ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯ(Mysuru-Bengaluru Express Way) ಟೋಲ್ ದರದಲ್ಲಿ ಕಂಡುಬಂದ ಹೆಚ್ಚಳದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumarswamy) ಸರಣಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ.
"ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯ ಟೋಲ್ ದರವನ್ನು ಯಾರಿಗೂ ಗೊತ್ತಿಲ್ಲದಂತೆ ಶೇ.22ರಷ್ಟು ಏರಿಸಿರುವುದು ಅನ್ಯಾಯದ ಪರಮಾವಧಿ. ಇದು ಖಂಡನೀಯ. ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ಸರಕಾರಗಳೆರಡೂ ಜನರ ಮೇಲೆ ಮತ್ತಷ್ಟು ಭಾರ ಹೊರೆಸಿವೆ. ಏಕಾಏಕಿ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 30 ರಿಂದ 200 ರೂ.ವರೆಗೆ ಟೋಲ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ, ಸಮರ್ಥನಿಯವೂ ಅಲ್ಲ" ಎಂದು ಹೇಳಿದ್ದಾರೆ.
"ಇಷ್ಟು ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು 'ಹೆದ್ದಾರಿಯಲ್ಲಿ ಹಗಲು ದರೋಡೆ'ಯಷ್ಟೇ. ಎಕ್ಸ್ಪ್ರೆಸ್ ಹೆದ್ದಾರಿಗೆ ಭೂಮಿ ಕೊಟ್ಟಿದ್ದು ಕರ್ನಾಟಕ ಸರಕಾರ. ಇದ್ದ ನೆಲೆ ಕಳೆದುಕೊಂಡವರು ನಮ್ಮ ರೈತರು. ಈಗ 20% ಸುಲಿಗೆಗೆ ಒಳಗಾಗುತ್ತಿರುವವರು ಕೂಡ ಕನ್ನಡಿಗರೇ. ಕನ್ನಡಿಗರನ್ನು ಕೊಳ್ಳೆ ಹೊಡೆಯುವ ಧೂರ್ತ ನಡೆಗೆ ನಮ್ಮ ಧಿಕ್ಕಾರ" ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.