ತೆನೆ ಹೊತ್ತ ಕಮಲ; ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ: ಎಚ್​ಡಿಕೆ

Untitled design - 2023-10-01T190125.834
Published on

ರಾಮನಗರ: ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜಾತ್ಯಾತೀತ ಜನತಾದಳ ನಾಯಕ ಎಚ್​.ಡಿ. ಕುಮಾರಸ್ವಾಮಿ, ಮೈತ್ರಿ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ ಒಂದು ತಿಂಗಳೊಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡುತ್ತೇವೆ ಎಂದು ಹೇಳಿದರು.

"ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗಲಿದೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಸಮಸ್ಯೆಗಳು ಉಂಟಾಗುವುದಿಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಅದರ ಬಗ್ಗೆ ಕುಳಿತು ಮುಕ್ತವಾಗಿ ಚರ್ಚಿಸುತ್ತೇವೆ. ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ. ಜಿಟಿಡಿ ನೇತೃತ್ವದ ಕೋರ್ ಕಮಿಟಿ ಮೂಲಕ ಸಂಘಟನೆ ಮಾಡಲಿದ್ದೇವೆ" ಎಂದು ಹೇಳಿದರು.

"ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನು ಬೇಕಾದರೂ ಅವಹೇಳನ ಮಾಡಲಿ. ಇದಕ್ಕೆ ನನ್ನ ಕಾರ್ಯಕರ್ತರು, ನಾಡಿನ ಜನತೆ ತಕ್ಕ ಉತ್ತರ ಕೊಡುತ್ತಾರೆ. ಇನ್ಮುಂದೆ ಅವರ ಯಾವ ಟೀಕೆಗೂ ಉತ್ತರಿಸುವುದಿಲ್ಲ. 17 ಜನ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಎಚ್​.ಡಿ. ದೇವೇಗೌಡ ಅವರ ತೀರ್ಮಾನಕ್ಕೆ ಎಲ್ಲರ ಸಹಮತ ವ್ಯಕ್ತಪಡಿಸಿದ್ದಾರೆ. ಮುಸಲ್ಮಾನ ಬಂದುಗಳು ಎಚ್ಚರಿಕೆಯಿಂದ ಇರಬೇಕು. ಕೆಲ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಹೇಳಿದರು.

"ಮತಕ್ಕಾಗಿ ಒಂದು ಸಮಾಜವನ್ನು ಓಲೈಕೆ ಮಾಡುವ ಅವಶ್ಯಕತೆಯಿಲ್ಲ. ಮುಸಲ್ಮಾನ ಬಂದುಗಳ ಬಗ್ಗೆ ನನ್ನ ಕಮಿಟ್​ಮೆಂಟ್ ಏನು ಎಂಬುದು ತಿಳಿದಿದೆ. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ" ಎಂದು ಸಭೆಯಲ್ಲಿ ಎಚ್​.ಡಿ. ಕುಮಾರಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net