ಬಿಜೆಪಿಯ ಕುಟುಂಬ ರಾಜಕಾರಣ, ಎಟಿಎಂ, ಹಗರಣಗಳ ಪಟ್ಟಿ ಮುಂದಿಟ್ಟು ಉತ್ತರಿಸುವಂತೆ ಅಮಿತ್​ ಶಾಗೆ ಸವಾಲು ಹಾಕಿದ ಎಚ್​ಡಿಕೆ!

hdk amit shah
Published on

ಬೆಂಗಳೂರು: ಜೆಡಿಎಸ್‌ನ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ, ಬಿಜೆಪಿಯ ಕುಟುಂಬ ರಾಜಕಾರಣದ ಬಗ್ಗೆ ಹೆಸರು ಸಮೇತ ಬಿಚ್ಚಿಟ್ಟಿದ್ದಾರೆ. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ... ಎಂದು ಕಿಡಿಕಾರಿರುವ ಎಚ್​ಡಿಕೆ, ಬೆಂಗಳೂರಿನಿಂದ ನೀವು ಹೊರಡುವ ಮುನ್ನ ಬಿಜೆಪಿಯ ಕುಟುಂಬ ರಾಜಕಾರಣ, ಹಗರಣಗಳು, ಎಟಿಎಂ ವಿಚಾರದ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ನಿನ್ನೆ(ಶುಕ್ರವಾರ) ನಡೆದ ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಅಮಿತ್​ ಶಾ ಅವರು ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸರಣಿ ಟ್ವೀಟ್​ ಮೂಲಕ ತಿರುಗೇಟು ನೀಡಿರುವ ಎಚ್​ಡಿಕೆ, ಬರೀ ಬೂಟಾಟಿಕೆ ಪಾರ್ಟಿ (ಬಿಜೆಪಿ) ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು; ಇದು ನಿಮ್ಮ ಪಕ್ಷದ ನಿಜ ಸ್ವರೂಪ. ನೀವು ಸರ್ವಾಧಿಕಾರಿ ಹಿಟ್ಲರನ ಸಂಪುಟದ ಗೊಬೆಲ್ಲನ ಹೊಸ ಅವತಾರ!! ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಅಮಿತ್​ ಶಾ ಅವರೇ ಅವರೇ? ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ಅಂಗವಿಕಲರ ಎಟಿಎಂ ಆಗುತ್ತದೆ. ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ‘ಎನಿ ಟೈಮ್ ಮನುಷ್ಯತ್ವ' ಎಂದು. ನಿಮ್ಮ ಪಾಲಿಗೆ ಅದು 'ಎನಿ ಟೈಮ್ ಮೋಸ' ಎಂದು ಕಟುವಾಗಿ ಟೀಕಿಸಿದ್ದಾರೆ.

ಜೆಡಿಎಸ್​ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಶಾ ಅವರೇ, ದೇಶದ ಮಾತು ಹಾಗಿರಲಿ; ಕರ್ನಾಟದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ..

ಕರ್ನಾಟಕದ ಬಿಜೆಪಿ ಎಟಿಎಂಗಳು:

1. 40% ಕಮೀಷನ್

2. ಪಿಎಸ್ ಐ ಹಗರಣ

3. ಪ್ರಶ್ನೆಪತ್ರಿಕೆ ಸೋರಿಕೆ

3. ಸಹ ಪ್ರಾಧ್ಯಾಪಕರ ನೇಮಕ ಹಗರಣ

4. ವೈದ್ಯ ಪ್ರಾಧ್ಯಾಪಕರ ನೇಮಕ ಹಗರಣ

5. ಕೋವಿಡ್​ನಲ್ಲಿ ಕೊಳ್ಳೆ

6. ಕಾಸಿಗಾಗಿ ಪೋಸ್ಟಿಂಗ್

7. ಗಂಗಾಕಲ್ಯಾಣ ಕರ್ಮಕಾಂಡ

8. ಚಿಲುಮೆ ಹಗರಣ

ಇದು ಅಪೂರ್ಣ ಪಟ್ಟಿ, ಅದು ಕೂಡ ದೊಡ್ಡದಿದೆ!! ಪೂರ್ಣ ಪಟ್ಟಿ ಬೇಕಾ ಅಮಿತ್ ಶಾ ಅವರೇ? ಎಂದು ಎಚ್​ಡಿಕೆ ಲೇವಡಿ ಮಾಡಿದ್ದಾರೆ.

ಕರ್ನಾಟಕದ ನಿಮ್ಮ ಬಿಜೆಪಿ ಸರ್ಕಾರ ಕೇವಲ 40% ಸರ್ಕಾರ ಅಲ್ಲವೇ ಅಲ್ಲ. ಅದು 55-60% ಸರ್ಕಾರ! ನಿಮಗೂ ಮಾಹಿತಿ ಇರುತ್ತದೆ, ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ, ಅರಿತುಕೊಳ್ಳಿ. ಇನ್ನು ಕುಟುಂಬದ ವಿಷಯ, ನಿಮ್ಮ ಪಕ್ಷದ ಕುಟುಂಬ ರಾಜಕಾರಣದ ಲೆಕ್ಕ ಗೊತ್ತಿಲ್ಲವೇ? ನಿಮ್ಮ ಸುಪುತ್ರ ಜಯ ಶಾ ಯಾವ ಸೀಮೆ ಕ್ರಿಕೆಟ್ ಪಂಡಿತರು ಎಂದು ಬಿಸಿಸಿಐನಲ್ಲಿ ಕೂತಿದ್ದಾರೆ? ಬಿಸಿಸಿಐನಲ್ಲಿ ಯಾರು ಇರಬೇಕು, ಇರಬಾರದೆಂದು ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವಿದೆ. ಆ ಆದೇಶಕ್ಕೆ ನಿಮ್ಮ ಮಗ ಅತೀತರೇ? ಈಗ ಹೇಳಿ, ಬಿಸಿಸಿಐ ಯಾರ ಪಾಲಿನ ಎಟಿಎಂ?

ಕರ್ನಾಟಕ ಬಿಜೆಪಿ ಫ್ಯಾಮಿಲಿ ಪಾಲಿಟಿಕ್ಸ್ ಪಟ್ಟಿ ಇಲ್ಲಿದೆ ನೋಡಿ.

1. ಯಡಿಯೂರಪ್ಪ & ಸನ್ಸ್

2. ರವಿಸುಬ್ರಮಣ್ಯ- ತೇಜಸ್ವಿ ಸೂರ್ಯ

3. ಅಶೋಕ್ -ರವಿ

4. ವಿ.ಸೋಮಣ್ಣ & ಸನ್

5. ಅರವಿಂದ ಲಿಂಬಾವಳಿ- ರಘು

6. ಎಸ್.ಆರ್.ವಿಶ್ವನಾಥ್ -ವಾಣಿ ವಿಶ್ವನಾಥ್

7. ಜಗದೀಶ್ ಶೆಟ್ಟರ್- ಪ್ರದೀಪ್ ಶೆಟ್ಟರ್

8. ಮುರುಗೇಶ್ ನಿರಾಣಿ- ಹನುಮಂತ ನಿರಾಣಿ

9. ಜಿ.ಎಸ್. ಬಸವರಾಜು - ಜ್ಯೋತಿ ಗಣೇಶ್

10. ಜಾರಕಿಹೊಳಿ & ಬ್ರದರ್

11. ಜೊಲ್ಲೆ & ಜೊಲ್ಲೆ

12. ಅಂಗಡಿ ಕುಟುಂಬ

13. ಉದಾಸಿ ಕುಟುಂಬ

14. ಶ್ರೀರಾಮುಲು ಕುಟುಂಬ

15. ರೆಡ್ಡಿ & ರೆಡ್ಡಿ

ಇದು ಕೂಡ ಅಪೂರ್ಣ ಪಟ್ಟಿಯೇ. ರಾಷ್ಟ್ರೀಯ ಪಟ್ಟಿ ಬೇಕಿದ್ದರೆ ಹೇಳಿ, ಇದರ ಹತ್ತರಷ್ಟಿದೆ. ಇವತ್ತು ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ ಅಮಿತ್ ಶಾ ಅವರೇ. ಎಷ್ಟಾದರೂ ನೀವು ಸ್ವಯಂ ಘೋಷಿತ ಸಾಚಾ ಅಲ್ಲವೇ? ಉತ್ತರ ಹೇಳಿ ಹೋದರೆ ನಾವೂ ಧನ್ಯರಾಗುತ್ತೇವೆ. ಸತ್ಯ ಅಜರಾಮರ, ಅಸತ್ಯ ನಿಮ್ಮ ಹಣೆಬರ. ಸತ್ಯದ ಮುಂದೆ ದಮ್ಮು ತಾಕತ್ತು ದುರ್ಬಲ ಎಂದು ಮಾತಿನಲ್ಲೇ ಎಚ್​ಡಿಕೆ ಕೆಣಕಿದ್ದಾರೆ.

ಪಂಚರತ್ನ ರಥಯಾತ್ರೆ ನಿಮ್ಮ ಕಣ್ಣು ಕುಕ್ಕಿದೆ. ಸಾಲಮನ್ನಾ ನಿಮ್ಮ ನಿದ್ದೆಗೆಡಿಸಿದೆ. ಎಷ್ಟೇ ಆದರೂ ಕೇಂದ್ರದ ಸಹಕಾರ ಸಚಿವರಾದ ನಿಮಗೆ ಸಾಲಮನ್ನಾ ದುಃಸ್ವಪ್ನದಂತೆ ಕಾಡುತ್ತಿದೆ ಎನ್ನುವುದು ಗೊತ್ತು. ಎಚ್.ಡಿ.ದೇವೇಗೌಡರು ಮತ್ತು ನನ್ನ ಸಾಧನೆಗಳು ನಿಮ್ಮ ಚಿಂತೆ ಹೆಚ್ಚಿಸಿವೆ. ಇನ್ನಾದರೂ ಸುಳ್ಳಿನ ಜಾಗಟೆ ಬಾರಿಸುವುದು ನಿಲ್ಲಿಸಿ ಎಂದು ಎಚ್​ಡಿಕೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net