ಸರ್ಕಾರ ನೆರವು ನೀಡಿದರೂ ಬೇಡವೆಂದು ಅನುದಾನ ವಾಪಸ್ ಕಳುಹಿಸಿದ ರೇವಣ್ಣ!

HD Revanna
Published on

ಬೆಂಗಳೂರು: ಸರ್ಕಾರ 25 ಕೋಟಿ ರೂ. ನೆರವು ನೀಡಿದರೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಬೇಡವೆಂದು ಅನುದಾನ ವಾಪಸ್ ಕಳುಹಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅವಧಿಯ ಕೊನೇ ಕ್ಷಣದಲ್ಲಿ ಹಾಸನ ಸಹಕಾರಿ ಹಾಲು ಒಕ್ಕೂಟದ ಮೂಲ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನವನ್ನು ತರಾತುರಿಯಲ್ಲಿ ಮಂಜೂರು ಮಾಡಿಸಿಕೊಳ್ಳಲಾಗಿತ್ತು.

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಹಣ ಬಿಡುಗಡೆಗೆ ತಡೆ ನೀಡಲಾಗಿತ್ತು. ಬಳಿಕ ಯಡಿಯೂರಪ್ಪ ಸೂಚನೆ ಮೇರೆಗೆ ಸರ್ಕಾರ 25 ಕೋಟಿ ರೂ. ಅನ್ನು ಬಿಡುಗಡೆ ಮಾಡಿ ಉದಾರತನ ತೋರಿಸಿತು. ಹಾಸನ ಹಾಲು ಒಕ್ಕೂಟ ಅಧ್ಯಕ್ಷರಾಗಿರುವ ಎಚ್.ಡಿ. ರೇವಣ್ಣರಿಗೆ ಅನುದಾನ ಪಡೆದುಕೊಳ್ಳಲು ಯಾಕೋ ಮನಸ್ಸು ಬರಲಿಲ್ಲ. ಒಕ್ಕೂಟದಲ್ಲಿ ನಿರ್ಣಯ ಕೈಗೊಂಡು, ಈ ಅನುದಾನ ಸರ್ಕಾರಕ್ಕೆ ವಾಪಸ್ ಮರಳಿಸಿದರು.

ಅಷ್ಟೊತ್ತಿಗೆ ಕರೊನಾ ಸಂಕ್ರಮಣ ಕಾಲ ಶುರುವಾಗಿದ್ದರಿಂದ ಇದು ಸುಸಮಯವೆಂದು ಭಾವಿಸಿದ ಸರ್ಕಾರ, ಈ ಹಣವನ್ನು ಬಡವರಿಗಾಗಿ ಪ್ರತಿದಿನ ಉಚಿತವಾಗಿ ಕೊಡಲಾಗುತ್ತಿರುವ 7.75 ಲಕ್ಷ ಲೀಟರ್ ಹಾಲಿಗಾಗಿ ಬಳಸಿಕೊಳ್ಳಲು ಆದೇಶ ಹೊರಡಿಸಿದೆ. ಅಲ್ಲದೆ, ಇನ್ನು ಹೆಚ್ಚುವರಿ ಅನುದಾನವನ್ನು ನಂತರ ನೀಡುವುದಾಗಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net