ಲಾಕ್​ಡೌನ್​ ಅವಧಿಯಲ್ಲಿ ಜನ ಮನೇಲಿ ಏನು ಮಾಡುತ್ತಿದ್ದಾರೆ...?

lock down-1
Published on

ಡೆಡ್ಲಿ ಕರೊನಾದ ಕೈಗೆ ಸಿಗದಂತೆ ಪಾರಾಗಲು ವಿಧಿಸಿರುವ ಲಕ್ಷ್ಮಣರೇಖೆ (ಲಾಕ್​ಡೌನ್) ಯನ್ನು ದಾಟದೇ ಮನೆಯಲ್ಲಿಯೇ ಕುಳಿತು ವಿವಿಧ ಕಾರ್ಯಚಟುವಟಿಕೆಗಳಲ್ಲಿ ಜನರು ತೊಡಗಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಆಟ, ಪಾಠ, ಪಾಕ, ಅಧ್ಯಯನ, ಮನರಂಜನೆ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ವಿಜಯವಾಣಿ ಓದುಗರು ತಮ್ಮ ದಿನಚರಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಾಲ ಕಳೆಯಲು ಹಲವು ಸಲಹೆಗಳನ್ನೂ ನೀಡಿದ್ದಾರೆ.

ಕವನ ರಚಿಸುತ್ತಿರುವೆ, ಚಿತ್ರ ಬಿಡಿಸುತ್ತಿರುವೆ

ಪ್ರತಿದಿನ ಬೆಂಗಳೂರಿನ ವಾಹನದಟ್ಟಣೆ, ಮಾಲಿನ್ಯ, ಕೆಲಸದ ಒತ್ತಡದಲ್ಲಿ ಕಂಗೆಟ್ಟು ಹೋಗಿದ್ದ ನನಗೆ, ಲಾಕ್​ಡೌನ್ ನಿರಾಳತೆ ಒದಗಿಸಿದೆ. ಬೆಳಗ್ಗೆ ಎದ್ದು ಯೋಗ, ವ್ಯಾಯಾಮ ಮಾಡಿ, ಮನೆಯ ಗ್ರಂಥಾಲಯದಲ್ಲಿ ಇರುವ ಪುಸ್ತಕವನ್ನು ಓದುತ್ತಿದ್ದೇನೆ. ಪುಟ್ಟ ಡೈರಿಯಲ್ಲಿ ಕವನ ಹಾಗೂ ಚಿತ್ರಗಳನ್ನು ಬಿಡಿಸುತ್ತಿರುವೆ. ಸಂಜೆ ಮನೆಯ ಸದಸ್ಯರೆಲ್ಲ ಮಹಡಿಯ ಮೇಲೆ ಹೋಗಿ ಗಾಳಿಯನ್ನು ಸೇವಿಸುತ್ತ, ಪ್ರಕೃತಿಯ ಸೌಂದರ್ಯದ ಸೊಬಗನ್ನು ಆನಂದಿಸುತ್ತೇವೆ. ಲಾಕ್​ಡೌನ್ ಸಮಯದಲ್ಲಿ ಯೋಜಿಸಿಗೊಂಡಿರುವ ಕೆಲಸಗಳನ್ನು ಇದು ಮುಗಿದ ನಂತರವೂ ಮುಂದುವರಿಸಬೇಕೆಂಬ ಪ್ರತಿಜ್ಞೆ ಮಾಡಿದ್ದೇನೆ.

| ವೈ. ಅರ್ಚನಾ

ಭಕ್ತಿಗೀತೆ ಗಾಯನದಿಂದ ಹೊಸ ಚೈತನ್ಯ

ಪರೀಕ್ಷೆಗಳನ್ನು ಮುಂದೂಡಿರುವುದರಿಂದ ನನಗೆ ಓದಲು ಹೆಚ್ಚು ಸಮಯ ಸಿಕ್ಕಂತಾಗಿದೆ. ಜೈವಿಕ ತಂತ್ರಜ್ಞಾನ ವಿದ್ಯಾರ್ಥಿಯಾಗಿರುವುದರಿಂದ ಕರೊನಾ ವೈರಸ್ ಕುರಿತಾಗಿ ಎಲ್ಲ ಮಾಹಿತಿಗಳನ್ನೂ ಕೌತುಕದಿಂದ ತಿಳಿದುಕೊಳ್ಳುತ್ತಿದ್ದೇನೆ. ಸಾಧ್ಯವಾದಷ್ಟು ಬೇರೆಯವರಿಗೂ ಜಾಗೃತಿ ಮೂಡಿಸುತ್ತಿದ್ದೇನೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ‘ವೈದ್ಯೋ ನಾರಾಯಣೋ ಹರಿ’ ಎನ್ನುತ್ತಾರೆ; ಇಂಥ ಸೂಕ್ಷ್ಮ, ಆತಂಕದ ಪರಿಸ್ಥಿತಿಯಲ್ಲಿ ಅವರ ಸೇವೆಯ ಮಹತ್ವವನ್ನು ಬಣ್ಣಿಸಲು ಪದಗಳೇ ಇಲ್ಲ! ನಾವು ಮನೆಯಲ್ಲೇ ನಮ್ಮ ಸುರಕ್ಷತೆಯೂ ಆದಂತಾಯ್ತು, ವೈದ್ಯರ ಪರಿಶ್ರಮವೂ ಕಡಿಮೆ ಆದಂತಾಯ್ತು. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಿಡಿಯೋ ಕರೆಗಳನ್ನು ಮಾಡುವುದರಿಂದ ನಡುವೆ ಅಂತರವೂ ಕಷ್ಟ ಅನಿಸುತ್ತಿಲ್ಲ. ಅಮ್ಮನ ಜತೆ ಹೊಸ ಅಡುಗೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಕಾಲೇಜು ದಿನಗಳ ಹವ್ಯಾಸಗಳನ್ನು ಪುನರಾರಂಭಿದ್ದೇನೆ. ಭಕ್ತಿಗೀತೆ ಹಾಡಿದಾಗ ಮನಸ್ಸಿಗೆ ಹೊಸ ಚೈತನ್ಯ ಲಭಿಸುತ್ತದೆ.

| ಮಧು ಸಂಜಯ್ ಕುಲಕರ್ಣಿ ಬೆಂಗಳೂರು

ಕನ್ನಡ ಸಾಹಿತ್ಯ ಕೃತಿಗಳ ಓದು

ನಾನು ನಿವೃತ್ತ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಕ. ಕರೊನಾ ಲಕ್ಷ್ಮಣರೇಖೆಯಿಂದ ಬಹಳ ಅನುಕೂಲವೂ ಆಗಿದೆ. ಬೆಳಗಿನ ಐದೂವರೆಯಿಂದ ರಾತ್ರಿ 11 ಗಂಟೆವರೆಗೆ ಕಾರ್ಯನಿರತವಾಗಿರುತ್ತೇನೆ. ಬೆಳಗ್ಗೆ ಯೋಗ, ಪ್ರಾಣಾಯಾಮದಿಂದ ಪ್ರಾರಂಭವಾಗಿ, ಮನೆಯನ್ನು ಶುಚಿಗೊಳಿಸುವಿಕೆ, ದೇವರ ಪೂಜೆ, ಪಾರಾಯಣ, ಧರ್ಮಪತ್ನಿ ಮಾಡುವ ಕೆಲಸಕ್ಕೆ ನೆರವಾಗುತ್ತೇನೆ. ಕನ್ನಡ ಸಾಹಿತ್ಯ ಕೃತಿಗಳನ್ನು ಓದುತ್ತೇನೆ. ‘ರಾಮಾಯಣ’ ‘ಮಹಾಭಾರತ’ ಧಾರಾವಾಹಿಗಳನ್ನು ವೀಕ್ಷಿಸುತ್ತೇನೆ. ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತೇನೆ. ಬಿಡುವಿದ್ದಾಗ ಮನೆಯ ಫ್ಯಾನ್, ಮಿಕ್ಸರ್ ಗ್ರೖೆಂಡರ್, ಗ್ಯಾಸ್, ಒಲೆ, ನಲ್ಲಿ ಇತ್ಯಾದಿ ಸುಸ್ಥಿತಿಯಲ್ಲಿವೆಯೇ ಎಂದು ಪರೀಕ್ಷಿಸುತ್ತೇನೆ. ರಾತ್ರಿ 10 ಗಂಟೆ ಬಳಿಕ ಶಾಸ್ತ್ರೀಯ ಸಂಗೀತ ಆಲಿಸುತ್ತೇನೆ.

| ವೆಂಕಟೇಶ್ ಘಟಿಕಾರ ಕೆಂಗೇರಿ

ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸೋಣ

ಪ್ರಧಾನ ಮಂತ್ರಿಗಳ ಕರೆಗೆ ಓಗೊಟ್ಟು ಲಾಕ್​ಡೌನ್ ಪಾಲಿಸುತ್ತಿರುವ ಎಲ್ಲ ಭಾರತೀಯರ ಸೇವೆ ಶ್ಲಾಘನೀಯ. ಜೀವ ಪಣಕ್ಕಿಟ್ಟು ಕರ್ತವ್ಯ ನಿರತರಾಗಿರುವ ಎಲ್ಲ ಅಪ್ರತಿಮ ದೇಶಭಕ್ತರಿಗೊಂದು ಸಲಾಂ. ನನ್ನಿಷ್ಟದ ವಿಜಯವಾಣಿ ಪತ್ರಿಕೆಯನ್ನು ಮೊದಲಿಗಿಂತೂ ಹೆಚ್ಚು ಬಿಡುವಾಗಿ ಓದಲು ಸಾಧ್ಯವಾಗುತ್ತಿದೆ. ಭರದಿಂದ ಸಾಗುತ್ತಿದ್ದ ಮಾನವನ ಯಾಂತ್ರಿಕ ಜೀವನಕ್ಕೆ ಲಾಕ್​ಡೌನ್​ನಿಂದ ದಿಢೀರ್ ವಿಶ್ರಾಂತಿ ಸಿಕ್ಕಂತಾಗಿದೆ. ಆದರೆ, ಇಡೀ ದಿನ ಮನೆಯಲ್ಲಿರುವ ಮಕ್ಕಳನ್ನು ಶಿಸ್ತಿನಿಂದಿಡುವುದು ಪಾಲಕರಿಗೂ ದೊಡ್ಡ ಸವಾಲು. ಆದಕ್ಕಾಗಿ ನಾವು ಮಕ್ಕಳಗೆ ಉಪಯೋಗವಾಗುವಂಥ ಸಂಸ್ಕೃತ ಶ್ಲೋಕಗಳು, ಭಾಷಣಗಳು, ಪ್ರಬಂಧಗಳು, ಗ್ರಾಮೀಣ ಆಟಗಳು, ದೇಶಭಕ್ತಿ ಗೀತೆಗಳು ಹಾಗೂ ಇನ್ನೂ ಹಲವಾರು ಉಪಯುಕ್ತ ಮಾಹಿತಿಯುಳ್ಳ ಹೆಚ್ಚೆಚ್ಚು ವಿಡಿಯೋಗಳನ್ನು ಯುಟ್ಯೂಬ್​ನಲ್ಲಿ ‘ವಿನ್ನಿಂಗ್ ಬೋಟ್’ ಚಾನಲ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದೇವೆ. ‘ಕಟ್ಟಿಟ್ಟ ಜ್ಞಾನ ಕಳೆಯುತ್ತದೆ, ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ’ ಎಂಬ ನಾಣ್ನುಡಿಯಂತೆ ಒಳ್ಳೆಯದನ್ನು ಕಲಿಯೋಣ ಕಲಿಸೋಣ. ಮಕ್ಕಳನ್ನು ಭಾರತದ ಸತ್ಪ್ರತೆಗಳನ್ನಾಗಿ ಮಾಡೋಣ.

| ಅಶ್ವಿನಿ ಹರೀಶ್ ಓಂಕಾರ್

ವೇಳೆಯ ಸದುಪಯೋಗ

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಏಳು ಅವಧಿಗಳಲ್ಲಿ ಯೋಗ ತರಬೇತಿ ಕೊಡುತ್ತಿದ್ದೆ. ಈಗ ನಮ್ಮ ಮನೆಯ ಮೇಲಿರುವ ಯೋಗ ಮಂದಿರದಲ್ಲಿ ಮನೆಯವರನ್ನೆಲ್ಲ ಸೇರಿಸಿಕೊಂಡು ಪ್ರಾಣಾಯಾಮ, ಸೂರ್ಯ ನಮಸ್ಕಾರ ಮಾಡುತ್ತಿದ್ದೇವೆ. ಮನಸ್ಸು ಒತ್ತಡರಹಿತವಾಗಿದೆ. ನಾವೇ ಮನೆ ಸ್ವಚ್ಛ ಮಾಡುತ್ತೇವೆ. ಬದಲಾದ ವಾತಾವರಣಕ್ಕೆ ಮನಸ್ಸು ಹೊಂದಿಕೊಳ್ಳುತ್ತಿದೆ. 2007ರಲ್ಲಿ ಗೃಹಪ್ರವೇಶಕ್ಕೆ ಬಂದ ಉಡುಗೊರೆ ವಸ್ತುಗಳನ್ನು ಮತ್ತೆ ಜೋಡಿಸುವ ಅವಕಾಶ ದೊರಕಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕೊಂಡ ಪುಸ್ತಕಗಳನ್ನು ಜೋಡಿಸಿ, ಕಪಾಟುಗಳಲ್ಲಿ ಹೊಂದಿಸುವ ಕಾರ್ಯದಲ್ಲಿ ಹಲವು ದಿನಗಳು ಕಳೆದವು. ಯೋಗ ತರಬೇತಿಗೆ ಅನುಕೂಲವಾಗುತ್ತದೆ ಎಂದು ಪುಪ್ಪುಸ, ಹೃದಯ, ಜೀರ್ಣಾಂಗ, ಮಾಂಸಖಂಡ, ನರವ್ಯೂಹ ಮುಂತಾದ ಚಿತ್ರಗಳನ್ನು ಬಿಡಿಸಲು ಮನಸ್ಸು ಮಾಡಿದ್ದೇನೆ. ಮಾಸಪತ್ರಿಕೆಗಳಲ್ಲಿನ ಲೇಖನಗಳ ಸಂಗ್ರಹ ಮತ್ತು ಬರವಣಿಗೆ ಸಾಧ್ಯವಾಗುತ್ತಿದೆ.

| ವರ್ಧಮಾನ್ ಕಳಸೂರು ಕಾಚರಕನಹಳ್ಳಿ

ಕರೊನಾದಿಂದ ಬೇಗ ಮುಕ್ತಿ ಲಭಿಸಲಿ

ಮುಂಜಾನೆ ಹೊರಗಡೆ ಹೋದ ಮಕ್ಕಳು, ಸಂಜೆ ಮನೆಗೆ ಬರುವವರೆಗೂ ಮನಸ್ಸಿನಲ್ಲಿ ಕಸಿವಿಸಿ ಇರುತ್ತಿತ್ತು. ಈಗ ಹಾಗಿಲ್ಲ. ಹೊತ್ತಿಗೆ ಸರಿಯಾಗಿ ಬಿಸಿ ಬಿಸಿಯಾಗಿ ಊಟ, ತಿಂಡಿ ಚುರುಮುರಿ ಮಾಡಿಕೊಡುವುದು ಖುಷಿ ತಂದಿದೆ. ಸಮಯ ಸಿಕ್ಕಾಗ ಪಗಡೆ, ಕವಡೆ, ಕೇರಂ, ಚೆಸ್​ನಂಥ ಆಟಗಳನ್ನು ಆಡುತ್ತ, ‘ರಾಮಾಯಣ’, ‘ಮಹಾಭಾರತ’ ಧಾರಾವಾಹಿಗಳನ್ನು ವೀಕ್ಷಿಸುತ್ತ ನೆಮ್ಮದಿಯಾಗಿದೇವೆ. ಕರೊನಾ ವೃರಸ್ ಆದಷ್ಟು ಬೇಗ ತೊಲಗಲಿ.. ಎಲ್ಲರಿಗೂ ಎಂದಿನಂತೆ ಹೊರಗಡೆ ಓಡಾಡುವ ಸ್ವಾತಂತ್ರ್ಯ ಲಭಿಸಲಿ.

| ರಾಧಾ ಕೆ. ಭಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net