'ಬಡತನವೇ ಬೇರೆ, ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ': ಸಚಿವ ಎಚ್​.ಸಿ. ಮಹದೇವಪ್ಪ

Untitled design - 2023-08-14T152555.971
Published on

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಉಪೇಂದ್ರ ಅವರ ಹೇಳಿಕೆಯೊಂದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್​.ಸಿ. ಮಹದೇವಪ್ಪ, ಸರಣಿ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಟ್ವೀಟ್​ ಮಾಡಿರುವ ಸಚಿವರು, "ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಆದ್ರೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ, ಇದು ಸಮುದಾಯಕ್ಕೆ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರವಾಗಿದೆ" ಎಂದು ಹೇಳಿದ್ದಾರೆ.

"ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಹೊಲಗೇರಿ ಎಂಬ ಪದವನ್ನು ಬಳಸಿರುವುದೇ ಅಪ್ರಸ್ತುತ. ಜತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದ್ರೆ, ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯನ್ನು ಅವರು ಅರಿಯಬೇಕು" ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

"ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿಲ್ಲ ಎಂದು ಸಹಜವಾಗಿ ಅನಿಸುತ್ತಿದೆ" ಎಂದು ಹೇಳಿದ್ದಾರೆ.

"ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಶೋಷಿತ ಸಮುದಾಯಗಳನ್ನು ಟೇಕನ್​ ಫಾರ್​ ಗ್ರಾಂಟೆಡ್​ ಆಗಿ ಉಲ್ಲೇಖಿಸುವ ಈ ಉಪೇಂದ್ರರ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು" ಎಂದು ಸರಣಿ ಟ್ವೀಟ್​ ಮೂಲಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net