

ನವದೆಹಲಿ: ಆಗಸ್ಟ್ 10 ರಿಂದ 14 ರವರೆಗೂ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ವಿವಿಧ ಚಿತ್ರರಂಗದ ಸಿನಿಮಾಗಳು ಭಾರೀ ಸದ್ದು ಮಾಡುತ್ತಿದೆ. ರಜನಿಕಾಂತ್ ಅವರ 'ಜೈಲರ್', ಅಕ್ಷಯ್ ಕುಮಾರ್ 'ಓಮೈಗಾಡ್ 2', ಸನ್ನಿ ಡಿಯೋಲ್ ಅಭಿನಯದ 'ಗದರ್ 2' ಸೇರಿದಂತೆ ಇತರ ಚಿತ್ರಗಳು ಸಿನಿಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಕರೆತರುವಲ್ಲಿ ಯಶಸ್ವಿಯಾಗಿದೆ.
4 ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್ 400 ಕೋಟಿ ರೂ. ಆದಾಯವನ್ನು ಕಂಡಿದೆ. ಈ ಪೈಕಿ ತಲೈವಾ ನಟನೆಯ 'ಜೈಲರ್' ಮತ್ತು ಸನ್ನಿ ಡಿಯೋಲ್ ಅವರ 'ಗದರ್ 2' ಚಿತ್ರಗಳು ಭಾರೀ ಕಲೆಕ್ಷನ್ ಕಾಣುತ್ತಿದೆ. ಜೈಲರ್, ಗದರ್ 2, OMG 2, ಭೋಲಾ ಶಂಕರ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಮತ್ತು ಒಪೆನ್‌ಹೈಮರ್‌ನಂತಹ ಸಿನಿಮಾಗಳು 400 ಕೋಟಿ ರೂ.ಗಳ ಆದಾಯವನ್ನು ತಂದುಕೊಟ್ಟಿದೆ.
ನಾಲ್ಕು ದಿನದ ಅವಧಿಯಲ್ಲಿ 2 ಕೋಟಿಗೂ ಹೆಚ್ಚು ಭಾರತೀಯ ಸಿನಿಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಈ ಸಿನಿಮಾಗಳು ಯಶಸ್ವಿಯಾಗಿವೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ, ರಜನಿಕಾಂತ್ ಅವರ ಜೈಲರ್ ಚಿತ್ರವು 162 ಕೋಟಿ ರೂಪಾಯಿಗಳನ್ನು ಗಳಿಸುವುದರ ಜತೆಗೆ ಸರಿಸುಮಾರು 93 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ.
ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರವು 152 ಕೋಟಿ ರೂ.ಗಳನ್ನು ಗಳಿಸಿದ್ದು, ಬಿಡುಗಡೆಗೊಂಡ ಮೊದಲ ವಾರಾಂತ್ಯದಲ್ಲಿ 70 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಒಟ್ಟಾರೆ ಬಾಕ್ಸ್ ಆಫೀಸ್ ಪೈಪೋಟಿಯಲ್ಲಿ 'ಗದರ್ 2' ಮತ್ತು 'ಜೈಲರ್' ಚಿತ್ರಗಳು ಅಗ್ರಸ್ಥಾನದಲ್ಲಿದೆ. ಈ ವೀಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹಾಜರಾಗಲಿದ್ದಾರೆ ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).