ಹಾವುಗೊಲ್ಲ ಕುಟುಂಬಗಳಿಗೆ ಹಾವಾಡಿಗ ಜಾತಿ ಪ್ರಮಾಣ ಪತ್ರ

14 nrp 1
ಬಾಳೆಕೊಪ್ಪ ಗ್ರಾಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹಾವೊಗಲ್ಲ ಕುಟುಂಬದವರ ಅಹವಾಲು ಆಲಿಸಿದರು. ತನುಜಾ ಟಿ. ಸವದತ್ತಿ, ಎಚ್.ಡಿ.ನವೀನ್‌ಕುಮಾರ್, ಎಸ್.ಡಿ.ರಾಜೇಂದ್ರ, ರಜಿ, ಸುನೀಲ್‌ಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ತಾಲೂಕಿನ ಬಾಳೆಕೊಪ್ಪ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಹಾವುಗೊಲ್ಲ ಕುಟುಂಬಗಳಿಗೆ ಹಾವಾಡಿಗ ಎಂದು ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅವರಿಗೆ ಸೂಚಿಸಿದರು.

ಹಾವುಗೊಲ್ಲ ಕುಟುಂಬದವರು ಇರುವ ಬಾಳೆಕೊಪ್ಪ ಗ್ರಾಮದ ಶಾಲೆ ಆವರಣಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ಹಾವೊಗೊಲ್ಲರ ಕುಟುಂಬಗಳ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಹಾವೊಗೊಲ್ಲ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಜಾತಿ ಪ್ರಮಾಣ ಪತ್ರ ಇಲ್ಲದಿರುವ ಕಾರಣ ಅವರಿಗೆ ನಿವೇಶನ ಹಂಚಿಕೆಗೆ ತೊಡಕಾಗಿದೆ ಎಂದು ಜಿಪಂ ಸಿಇಒ ಪತ್ರ ಬರೆದಿದ್ದರು. ಈ ಸಂಬಂಧ ಭೇಟಿ ನೀಡಿದ್ದೇನೆ ಎಂದರು.
ಹಾವುಗೊಲ್ಲರು ಎಂಬ ಜಾತಿ ಇಲ್ಲ. ಮೊದಲು ಇವರು ಹಾವನ್ನು ಹಿಡಿದು ಜೀವನ ಸಾಗಿಸುತ್ತಿದ್ದವರು. ನಂತರದ ದಿನಗಳಲ್ಲಿ ಹಾವುಗಳನ್ನು ಹಿಡಿಯಲು ನಿರ್ಬಂಧ ಹೇರಿದ್ದರಿಂದ ಹಾವು ಹಿಡಿಯುವ ವೃತ್ತಿ ಬಿಟ್ಟು, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಇವರು ಮೂಲತಃ ಹಾವಾಡಿಗರು. ಹಾವಾಡಿಗ ಎಂಬ ಜಾತಿ ಪಟ್ಟಿಯಲ್ಲಿದೆ. ಆದ್ದರಿಂದ ಈ ಕುಟುಂಬಗಳಿಗೆ ಹಾವಾಡಿಗರು ಎಂಬ ಜಾತಿ ಪ್ರಮಾಣ ವಿತರಿಸಬಹುದು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ. ಈ ಕಟುಂಬಗಳಿಗೆ ಜಾತಿ ಪ್ರಮಾಣ ಪತ್ರ ದೊರಕಿದರೆ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. ಇವರಿಗೆ ಶಾಶ್ವತ ಪರಿಹಾರ ಕೊಡಿಸುವುದು ಆಯೋಗದ ಮತ್ತು ನನ್ನ ಕರ್ತವ್ಯ ಎಂದು ಹೇಳಿದರು.
ಹಾವೊಗೊಲ್ಲ ಕುಟುಂಬದ ನಾಗೇಶ್ ಮಾತನಾಡಿ, ನಮಗೆ ನಿವೇಶನ ನೀಡಲು ಗುರುತಿಸಿರುವ ಜಾಗ ಪಟ್ಟಣದಿಂದ ದೂರವಿದೆ. ಮಕ್ಕಳಿಗೆ ಶಾಲೆ, ಸೊಸೈಟಿಗೆ ಹೋಗಲು ದೂರವಾಗುತ್ತದೆ. ಹಾಗಾಗಿ ಸಮೀಪದಲ್ಲೇ ಲಭ್ಯವಿರುವ ಜಾಗ ಕೊಡಿಸಿಕೊಡುವಂತೆ ಮನವಿ ಮಾಡಿದರು.
ನಮಗೆ ಶಿಕ್ಷಣದ ಅರಿವಿಲ್ಲ. ಯಾವ ಜಾತಿ ಪ್ರಮಾಣ ನೀಡಿದ್ದಾರೆ ಎಂಬುದೂ ಗೊತ್ತಿರಲಿಲ್ಲ. ಬಾಳೆಕೊಪ್ಪದ ಪಕ್ಕದಲ್ಲೇ ಇರುವ ಜಾಗದಲ್ಲಿ ಟೆಂಟ್ ಹಾಕಿಕೊಂಡಿದ್ದೆವು. ಅರಣ್ಯ ಇಲಾಖೆಯವರು ಬಂದು ಇದು ಅರಣ್ಯ ಇಲಾಖೆ ಜಾಗವೆಂದು ಟೆಂಟ್ ಕಿತ್ತುಹಾಕಿದರು. ಅಲ್ಲದೆ ನಮ್ಮ ಮೇಲೆ ಕೇಸ್ ದಾಖಲಿಸಿದ್ದಾರೆ. ದಯಮಾಡಿ ಅರಣ್ಯ ಇಲಾಖೆಯವರು ಹಾಕಿರುವ ಕೇಸ್ ಹಿಂಪಡೆಯುವಂತೆ ಮಾಡಬೇಕೆಂದು ಅಳಲು ತೋಡಿಕೊಂಡರು.
ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅರಣ್ಯ ಇಲಾಖೆ ಜಾಗವನ್ನು ಯಾವ ಕಾರಣಕ್ಕೂ ನೀಡಲು ಅವಕಾಶಗಳಿಲ್ಲ. ಕಂದಾಯ ಜಾಗದಲ್ಲಿ ಮಾತ್ರ ಜಾಗ ನೀಡಬಹುದು. ಈಗ ಹಾಕಿರುವ ಕೇಸಿನ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ರಾಜಕೀಯ ಹೇಳಿಕೆ ನೀಡಲ್ಲ: ನಾನು ಹಾಲಿ ಸಾಂವಿಧಾನಿಕ ಹುದ್ದೆಯಲ್ಲಿದ್ದೇನೆ. ಇದರಲ್ಲಿ ಯಾವುದೇ ಪಕ್ಷ ಇಲ್ಲ. ಪಕ್ಷಾತೀತವಾಗಿ ಹಿಂದುಳಿದ ವರ್ಗಗಳ ಸಮಸ್ಯೆ ಬಗೆಹರಿಸಬೇಕು. ನಾನು ಯಾವುದೇ ಪಕ್ಷದಿಂದ ಗುರುತಿಸಿಕೊಂಡು ಕಾರ್ಯನಿರ್ವಹಿಸಿ ನಾನು ಸರ್ಕಾರಕ್ಕೆ ನೀಡುವ ವರದಿಗೆ ಬೆಲೆ ಇರುವುದಿಲ್ಲ. ಅದಕ್ಕೆ ಶೋಭೆಯೂ ತರುವುದಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಅಧ್ಯಕ್ಷ ಸ್ಥಾನದ ಅವಧಿ ನ.25ಕ್ಕೆ ಮುಗಿಯಲಿದೆ. ನಂತರ ರಾಜಕೀಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ಮಾತನಾಡುತ್ತೇನೆ. ಅಲ್ಲಿಯವರೆಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲ್ಲ. ಯಾವುದೇ ರಾಜಕೀಯ ವಿಷಯದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.
ಬಾಳೆ ಗ್ರಾ.ಪಂ. ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯ ಚಂದ್ರಶೇಖರ್, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ರಮೇಶ್, ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್, ಕಂದಾಯ ನಿರೀಕ್ಷಕ ಎಚ್.ಮಂಜುನಾಥ್, ಗ್ರಾಮ ಲೆಕ್ಕಿಗೆ ಸಾನಿಯಾ, ಮುಖಂಡರಾದ ಎಸ್.ಡಿ.ರಾಜೇಂದ್ರ, ಈಚಿಕೆರೆ ಸುಂದರೇಶ್, ರಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net