

Yakumama : ಬ್ರೆಜಿಲ್ನಲ್ಲಿರುವ ಅಮೆಜಾನ್ ಮಳೆಕಾಡು ಭೂಮಿಯ ಶ್ವಾಸಕೋಶ ಎಂದು ಕರೆಯಲ್ಪಡುತ್ತದೆ. ಅಮೆಜಾನ್ ಮಳೆಕಾಡು ಸುಮಾರು ಮೂರು ಮಿಲಿಯನ್ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ಹಾಗೂ ಸುಮಾರು 1,00,000 ಸ್ಥಳೀಯ ಜನರಿಗೆ ನೆಲೆಯಾಗಿದೆ. ಇಲ್ಲಿನ ಮಳೆಕಾಡು ನಮ್ಮ ಭೂಮಿಯ ಜೀವಂತ ಗಾಳಿಯ ದೊಡ್ಡ ಭಾಗವನ್ನು ಒದಗಿಸುತ್ತದೆ. ಭೂಮಿಯ ಮೇಲಿನ ಒಟ್ಟು ಆಮ್ಲಜನಕದ ಸುಮಾರು 20 ಪ್ರತಿಶತದಷ್ಟು ಅಮೆಜಾನ್ ಕೊಡುಗೆ ನೀಡುತ್ತದೆ.
ಇಲ್ಲಿನ ಮಳೆಕಾಡು ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಅಚ್ಚರಿಯ ಸಂಗತಿ ಏನೆಂದರೆ, ಇದು ಇಂದಿಗೂ ಅನ್ವೇಷಿಸಲ್ಪಡುತ್ತಿರುವ ವಿಶ್ವದ ನಿಗೂಢತೆಗಳಿಂದ ತುಂಬಿರುವ ಸ್ಥಳವಾಗಿದೆ. ನೀವು ಅಮೆಜಾನ್ ಬಗ್ಗೆ ಯೋಚಿಸಿದಾಗ, ಮೊದಲು ನೆನಪಿಗೆ ಬರುವುದು ಅನಾಕೊಂಡಾಗಳು. ಅಮೆಜಾನ್ ಮಳೆಕಾಡಿನಲ್ಲಿ ಕಂಡುಬರುವ ಹಸಿರು ಅನಾಕೊಂಡಾವು ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವು. ಅನಾಕೊಂಡಾಗಳನ್ನು ಅನೇಕ ಹಾಲಿವುಡ್ ಸಿನಿಮಾಗಳಲ್ಲೂ ತೋರಿಸಲಾಗಿದೆ. ಈ ಹಾವುಗಳ ಬಗ್ಗೆ ಅನೇಕ ಕಥೆಗಳು ಮತ್ತು ದಂತಕಥೆಗಳು ಇಂದಿಗೂ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಒಂದು ಯಕುಮಾಮಾ.
ಯಾಕುಮಾಮ ಎಂದರೆ 'ನೀರಿನ ತಾಯಿ'. ಈ ಹೆಸರು ಸ್ಥಳೀಯ ಕ್ವೆಚುವಾ ಭಾಷೆಯಿಂದ ಬಂದಿದೆ. 'ಯಾಕು' ಎಂದರೆ ನೀರು. 'ಮಾಮಾ' ಎಂದರೆ ತಾಯಿ. ಯಾಕುಮಾಮ ಎಂಬುದು ಅಮೆಜಾನ್ನ ಆಳವಾದ ನದಿಗಳು ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ನಂಬಲಾದ ಶಕ್ತಿಶಾಲಿ ಹಾವು. ಇದು ಯಾವುದೇ ಜೀವಿಯನ್ನು ನುಂಗಬಲ್ಲದು ಎಂದು ನಂಬಲಾಗಿದೆ. ಯಾಕುಮಾಮದ ಬಗ್ಗೆ ಅನೇಕ ಕಥೆಗಳನ್ನು ಪೆರು, ಬ್ರೆಜಿಲ್, ಕೊಲಂಬಿಯಾ, ಈಕ್ವೆಡಾರ್ ಮತ್ತು ಬೊಲಿವಿಯಾದಂತಹ ದೇಶಗಳಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗಗಳಲ್ಲಿ ತಲೆಮಾರುಗಳಿಂದ ಮೌಖಿಕವಾಗಿ ರವಾನಿಸಲಾಗಿದೆ. ಈ ಕಥೆಗಳನ್ನು ಕೇಳುತ್ತಾ ಯಾಕುಮಾಮನನ್ನು ಕಲ್ಪಿಸಿಕೊಂಡರೆ ಏಕಕಾಲದಲ್ಲಿ ಭಯ ಮತ್ತು ಗೌರವ ಮೂಡುತ್ತದೆ.
ಯಾಕುಮಾಮ ಎಂಬುದು ಅಮೆಜಾನ್ ಮಳೆಕಾಡಿನ ರಕ್ಷಕ ಎಂದು ಪರಿಗಣಿಸಲಾದ ಹಾವು. ಮಳೆಕಾಡಿಗೆ ಹಾನಿ ಮಾಡುವ ರೀತಿಯಲ್ಲಿ ವರ್ತಿಸುವ ಯಾರನ್ನಾದರೂ ನಿರ್ನಾಮ ಮಾಡಲು ಯಾಕುಮಾಮ ಹಿಂಜರಿಯುವುದಿಲ್ಲ ಎಂದು ಸ್ಥಳೀಯರು ನಂಬುತ್ತಾರೆ. ಯಾಕುಮಾಮವನ್ನು ಬಹಳ ದೊಡ್ಡ ಅನಾಕೊಂಡಾ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಯಾಕುಮಾಮವನ್ನು ಪ್ರತಿಯೊಂದು ಬುಡಕಟ್ಟು ಜನಾಂಗದಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಈ ನಂಬಲಾಗದಷ್ಟು ದೊಡ್ಡ ಹಾವುಗಳು ದೋಣಿಗಳನ್ನು ಮತ್ತು ಹಲವಾರು ಜನರನ್ನು ಏಕಕಾಲದಲ್ಲಿ ನುಂಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಂಬಲಾಗಿದೆ. ಕೆಲವು ಸ್ಥಳೀಯರು ಅವು 160 ರಿಂದ 200 ಅಡಿ ಉದ್ದವಿರುತ್ತವೆ ಎಂದು ನಂಬುತ್ತಾರೆ.
ಯಾಕುಮಾಮ ಕಥೆಗಳಲ್ಲಿ ಈ ಹಾವು ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ವಿಭಿನ್ನ ಆಕಾರಗಳಿಗೆ ಬದಲಾಗುವ ಮತ್ತು ಹವಾಮಾನವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಲಾಗಿದೆ. ಯಾಕುಮಾಮವು ವಿವಿಧ ಬಣ್ಣಗಳಲ್ಲಿ ಹೊಳೆಯುವ ದೇಹವನ್ನು ಮತ್ತು ನಕ್ಷತ್ರಗಳಂತೆ ಕಣ್ಣುಗಳನ್ನು ಹೊಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಅನೇಕ ಜನರು ಯಾಕುಮಾಮವನ್ನು ನೋಡಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಅವು ಎಷ್ಟು ನಿಜವೆಂದು ಇಂದಿಗೂ ಸಾಬೀತಾಗಿಲ್ಲ. ಇತ್ತೀಚೆಗೆ, ಅಮೆಜಾನ್ನಲ್ಲಿ ಸಾಮಾನ್ಯಕ್ಕಿಂತ ದೊಡ್ಡದಾದ ಅನಾಕೊಂಡಾಗಳು ಕಂಡುಬಂದಿವೆ. ಇದು ಯಾಕುಮಾಮ ನಿಜ ಎಂಬ ಪ್ರಚಾರಕ್ಕೂ ಕಾರಣವಾಗಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾಕುಮಾಮಾ ಎಂಬ ವಿಷಯದೊಂದಿಗೆ ಹಲವಾರು AI ವಿಡಿಯೋಗಳು ಹರಿದಾಡುತ್ತಿರುವುದು ಗಮನಾರ್ಹ. ಯಾಕುಮಾಮಾ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಕ್ರಿಪ್ಟೋಜುವಾಲಜಿಸ್ಟ್ಗಳು ಅಮೆಜಾನ್ನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಉತ್ತರ ಐರ್ಲೆಂಡ್ನ ತಂದೆ ಮೈಕ್ ಮತ್ತು ಮಗ ಗ್ರೆಗ್ ವಾರ್ನರ್ ಇಬ್ಬರೂ ಅಮೆಜಾನ್ ಮಳೆಕಾಡಿನ ಮೇಲೆ ವೈಮಾನಿಕ ಸಮೀಕ್ಷೆ ನಡೆಸುವಾಗ ದೈತ್ಯ ಹಾವನ್ನು ನೋಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಇತ್ತೀಚೆಗೆ ಡಾ. ಶೀತಲ್ ಯಾದವ್ ಹೆಸರಿನ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿತ್ತು. ಮತ್ತೊಮ್ಮೆ ಅಮೆಜಾನ್ ಕಾಡುಗಳಲ್ಲಿ ದೈತ್ಯ ಅನಾಕೊಂಡಾ ಹಾವು ಕಂಡುಬಂದಿದೆ ಎಂಬ ಶೀರ್ಷಿಕೆ ಬರೆಯಲಾಗಿತ್ತು. ಆ ವಿಡಿಯೋ ಜಾಲತಾಣದಲ್ಲಿ ಧೂಳೆಬ್ಬಿಸಿತು. ಆದರೆ, ಕೆಲವರು ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಲ್ಲದೆ, ವಿಡಿಯೋ ಸತ್ಯಾಸತ್ಯತೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಕೆಲವರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಕುಶಲತೆಯಿಂದ ರಚಿಸಲಾಗಿದೆ ಅಥವಾ ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ವಾದಿಸಿದರು. ವಿಡಿಯೋದಲ್ಲಿನ ರೆಸಲ್ಯೂಶನ್ ಮಟ್ಟವು ಹೈ-ಡೆಫಿನಿಷನ್ನಿಂದ ಕೂಡಿದೆ. ಕ್ಯಾಮೆರಾದಲ್ಲಿ ತೆಗೆದು ಶಾಟ್ಗಳಿಗಿಂತ ಹೆಚ್ಚು ನೈಜವಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಇನ್ನು ಡೀಪ್ಫೇಕ್ ಮತ್ತು ಜನರೇಟಿವ್ AI ಟೆಕ್ನಾಲಜಿ ಆಗಮನದ ಬಳಿಕ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆ ಹೆಚ್ಚು ಹೆಚ್ಚು ಮಸುಕಾಗುತ್ತಿದೆ. ಯಾವುದು ಸತ್ಯ? ಯಾವುದು ಸುಳ್ಳು ಎಂದು ನಂಬಲಾಗದಷ್ಟರ ಮಟ್ಟಿಗೆ ಎಐ ಜಾದೂ ಮಾಡುತ್ತಿದೆ. ಅಂದಹಾಗೆ, ಸದ್ಯ ವೈರಲ್ ಆಗಿರುವ ವಿಡಿಯೋವನ್ನು ಯಾವುದೇ ಸರ್ಕಾರಿ ಸಂಸ್ಥೆಯು ದೃಢೀಕರಿಸಿಲ್ಲ ಮತ್ತು ಮೆಟಾಡೇಟಾ ಅಥವಾ ಸ್ಥಳ ಟ್ಯಾಗ್ ಮಾಡದೆ, ವಿಡಿಯೋ ಹಂಚಿಕೊಂಡಿರುವುದರಿಂದ ವಿಡಿಯೋದ ಮೂಲ ಮತ್ತು ದೃಢೀಕರಣವು ಸದ್ಯಕ್ಕೆ ಅನಿಶ್ಚಿತವಾಗಿದೆ. ಬಹುತೇಕ ಅದು ಎಐನಿಂದ ರಚಿಸಲಾದ ವಿಡಿಯೋ ಎಂದು ಹೇಳಬಹುದಾಗಿದೆ.
ಇದೇ ಸಂದರ್ಭದಲ್ಲಿ ಕೆಲವು ವಿಜ್ಞಾನಿಗಳು 2009 ರಲ್ಲಿ ಟೈಟಾನೊಬೊವಾದಂತಹ ಹಾವಿನ ದೊಡ್ಡ ಪಳೆಯುಳಿಕೆಯ ಆವಿಷ್ಕಾರದಿಂದಾಗಿ ಇಂತಹ ಕಥೆಗಳು ಹುಟ್ಟಿಕೊಂಡಿವೆ ಎಂದು ಹೇಳಿಕೊಳ್ಳುತ್ತಾರೆ. ಯಾಕುಮಾಮಾ ಇಂದಿಗೂ ಯಾರಿಗೂ ಸಿಗದ ಕಥೆಯಾಗಿಯೇ ಉಳಿದಿದೆ. (ಏಜೆನ್ಸೀಸ್)