ಹಾಥರಸ್ ಕಾಲ್ತುಳಿತ 122 ಭಕ್ತರ ದುರ್ಮರಣ; 60 ಜನರ ಸ್ಥಿತಿ ಗಂಭೀರ

Hathras Stampede
Published on

ನವದೆಹಲಿ: ಪ್ರಖ್ಯಾತ ಧಾರ್ವಿುಕ ಗುರು ಭೋಲೆ ಬಾಬಾ ಅಲಿಯಾಸ್ ನಾರಾಯಣ ಸಾಕರ್ ಹರಿ ಗೌರವಾರ್ಥ ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ದಿಢೀರ್ ನೂಕುನುಗ್ಗಲು ಏರ್ಪಟ್ಟು ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 122 ಜನರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ 50-60 ಜನರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಹಾಥರಸ್ ಜಿಲ್ಲೆಯ ಸಿಕಂದ್ರಾರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ರಾಯ್ ಗ್ರಾಮದಲ್ಲಿ ಧಾರ್ವಿುಕ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರಿಗಾಗಿಯೇ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಕಾರ್ಯಕ್ರಮ ಮುಗಿದ ಬಳಿಕ ಜನರು ಬಾಬಾರ ಕಾಲಿಗೆ ನಮಸ್ಕರಿಸಲು ಮುಗಿಬಿದ್ದರು. ಈ ವೇಳೆ ಜನದಟ್ಟಣೆ ಆಗಿ ಉಸಿರಾಟದ ಸಮಸ್ಯೆ ಎದುರಾಯಿತು. ಹೆದರಿದ ಜನರು ಓಡಲು ಪ್ರಾರಂಭಿಸಿದಾಗ ಹಲವರು ನೆಲಕ್ಕುರಳಿದರು. ಈ ವೇಳೆ ಕಾಲ್ತುಳಿತ ಸಂಭವಿಸಿ 80ಕ್ಕೂ ಹೆಚ್ಚು ಜನರು ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡ ಸ್ಥಳೀಯ ಆಡಳಿತ ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ.

ಅನೇಕ ಮೃತದೇಹಗಳನ್ನು ಬಸ್​ಗಳು ಮತ್ತು ಟೆಂಪೋಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಗ್ಯ ಕೇಂದ್ರದಿಂದ ಲಭ್ಯವಾದ ಮಾಹಿತಿ ಪ್ರಕಾರ 50ರಿಂದ 60 ಮಂದಿ ಮೃತಪಟ್ಟಿ ದ್ದಾರೆ ಎಂದು ಹಾಥರಸ್ ಜಿಲ್ಲಾಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ. ಇನ್ನೂ 27 ಮಂದಿ ಮೃತಪಟ್ಟಿರುವುದನ್ನು ನೆರೆಯ ಇಟಾ ಜಿಲ್ಲೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.

Hathras

ಸಂಘಟಕರಿಂದ ನಿಯಮ ಉಲ್ಲಂಘನೆ: ಸತ್ಸಂಗ ಖಾಸಗಿ ಕಾರ್ಯಕ್ರಮವಾಗಿದ್ದು, ಇದಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ್ದರು. ಆದರೆ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳನ್ನಷ್ಟೇ ಮಾಡಿದ್ದರು. ಬಾಕಿ ಎಲ್ಲ ವ್ಯವಸ್ಥೆಗಳನ್ನು ಸತ್ಸಂಗದ ಸಂಘಟಕರೇ ಕೈಗೊಳ್ಳಬೇಕಾಗಿತ್ತು. ತಮ್ಮ ಆಸ್ಪತ್ರೆಗೆ ಬಂದ 27 ಪಾರ್ಥಿವ ಶರೀರಗಳಲ್ಲಿ 25 ಮಹಿಳೆಯರು ಹಾಗೂ ಇಬ್ಬರು ಪುರುಷರ ಮೃತದೇಹಗಳಿವೆ ಎಂದು ಇಟಾದ ಮುಖ್ಯ ವೈದ್ಯಕೀಯ ಅಧಿಕಾರಿ ಉಮೇಶ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ. ಕೆಲವು ಗಾಯಾಳುಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ. ಮೃತರಲ್ಲಿ ಮೂವರು ಮಕ್ಕಳಿದ್ದಾರೆ ಎಂದು ಇಟಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಹೇಳಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ ಕಂಬನಿ: ಹಾಥರಸ್ ಕಾಲ್ತುಳಿತ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುಮು ಮತ್ತ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಹಲವು ಅಮೂಲ್ಯ ಪ್ರಾಣಗಳು ನಷ್ಟವಾಗಿರುವುದಕ್ಕೆ ಅವರು ಶೋಕ ವ್ಯಕ್ತಪಡಿಸಿದ್ದು ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಪರಿಹಾರ ಕಾರ್ಯದಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಕೇಂದ್ರ ಎಲ್ಲ ನೆರವನ್ನು ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ಇದೊಂದು ಹೃದಯ ವಿದ್ರಾವಕ ಘಟನೆ ಎಂದು ರಾಷ್ಟ್ರಪತಿ ಮುಮು ಕಂಬನಿ ಮಿಡಿದಿದ್ದಾರೆ. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡ ದುರಂತಕ್ಕೆ ತೀವ್ರ ದಿಗ್ಭŠ ವ್ಯಕ್ತಪಡಿಸಿದ್ದಾರೆ.

ಕಾರಣವೇನು...?: ಕಾರ್ಯಕ್ರಮ ಮುಗಿದ ಬಳಿಕ ಭೋಲೆ ಬಾಬಾ ಕಾರಿನತ್ತ ತೆರಳಿದರು. ಈ ವೇಳೆ ಸಾವಿರಾರು ಜನ ಬಾಬಾರ ಕಾಲಿಗೆ ನಮಸ್ಕರಿಸಲು ಓಡಿದಾಗ ನೂಕುನುಗ್ಗಲು ಏರ್ಪಟ್ಟಿತು. ಬಾಬಾ ಕಾರಿನ ಹಿಂದೆ ಓಡಿದಾಗ ಕಾಲ್ತುಳಿತ ಸಂಭವಿಸಿದ್ದಾಗಿ ಹೇಳಲಾಗುತ್ತಿದೆ.

ಮಸಣವಾದ ಫುಲ್ರಾಯ್: ಕಾಲ್ತುಳಿತ ದುರಂತದ ಬಳಿಕ ಫುಲ್ರಾಯ್ ಗ್ರಾಮ ಸ್ಮಶಾನದಂತೆ ಕಾಣುತ್ತಿತ್ತು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಸಮರೋಪಾದಿಯಲ್ಲಿ ಚಿಕಿತ್ಸೆ ಹಾಗೂ ರಕ್ಷಣೆ ಕಾರ್ಯ ನಡೆಯುತ್ತಿದೆ.

Hathras

ತನಿಖೆಗೆ ಸಮಿತಿ ರಚನೆ: ಹಾಥರಸ್ ಕಾಲ್ತುಳಿತ ಪ್ರಕರಣದ ತನಿಖೆಗಾಗಿ ಸಿಎಂ ಯೋಗಿ ಆದಿತ್ಯನಾಥ ಸಮಿತಿಯೊಂದನ್ನು ರಚಿಸಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾ ಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದ ಇಬ್ಬರು ಸಚಿವರಾದ ಲಕ್ಷ್ಮೀ ನಾರಾಯಣ ಚೌಧರಿ ಮತ್ತು ಸಂದೀಪ್ ಸಿಂಗ್ ಅಲ್ಲದೆ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರು ಕೂಡ ದುರಂತ ಸ್ಥಳಕ್ಕೆ ಧಾವಿಸಿದ್ದಾರೆ. ಆಗ್ರಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಾಗೂ ಆಲಿಗಢದ ಆಯುಕ್ತರು ತನಿಖಾ ಸಮಿತಿಯ ಮುಖ್ಯಸ್ಥರ ಹೊಣೆ ಹೊತ್ತಿದ್ದಾರೆ.

ಪರಿಹಾರ ಘೋಷಣೆ: ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರವನ್ನು ಘೋಷಿಸಲಾಗಿದೆ. ಕಾರ್ಯಕ್ರಮದ ಸಂಘಟಕರ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ದುರ್ಘಟನೆಯ ಆ ಕ್ಷಣ

  • ಸಾವಿರಾರು ಭಕ್ತರ ಸಮಾಗಮ
  • ಮನೆಗೆ ತೆರಳುವಾಗ ಜನದಟ್ಟಣೆ
  • ಅನಿರೀಕ್ಷಿತವಾಗಿ ನೂಕುನುಗ್ಗಲು
  • ಉಸಿರಾಟ ಸಮಸ್ಯೆ, ಕಾಲ್ತುಳಿತ
  • ಜೀವ ಉಳಿಸಿಕೊಳ್ಳಲು ಓಡಿದ ಜನ
  • ಪೆಂಡಾಲ್​ನಡಿ ಕುಸಿದ ಕೆಲ ಭಕ್ತರು
  • ಒಬ್ಬರ ಮೇಲೆ ಒಬ್ಬರಂತೆ ಬಿದ್ದ ಭಕ್ತರು
  • ತಪ್ಪಿಸಿಕೊಳ್ಳಲು ವಾಹನಗಳು ಅಡ್ಡಿ
  • ಕಾಲ್ತುಳಿತದಲ್ಲಿ ಸ್ಥಳದಲ್ಲೇ ಹಲವರ ಸಾವು
  • ಮೂರ್ಛೆ ಹೋದವರು ಆಸ್ಪತ್ರೆಗೆ ದಾಖಲು
  • ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹಲವರ ಸಾವು

ಕಾಲ್ತುಳಿತ ದುರಂತಗಳು

  • 2005 ಜ. 26 ಪಶ್ಚಿಮ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಾಂಧರ್ ದೇವಿ ದೇಗುಲದಲ್ಲಿ ಕಾಲ್ತುಳಿತ, 350 ಜನ ಸಾವು, 200 ಜನರಿಗೆ ಗಾಯ
  • 2006 ಆ. 3 ಹಿಮಾಚಲ ಪ್ರದೇಶ ನೈನಾ ದೇವಿ ದೇಗುಲದಲ್ಲಿ ಕಾಲ್ತುಳಿತಕ್ಕೆ 150 ಜನ ಬಲಿ, 400 ಜನರಿಗೆ ಗಾಯ
  • 2008 ಸೆ. 30 ರಾಜಸ್ಥಾನದ ಚಾಮುಂಡಿ ದೇವಿ ದೇಗುಲದಲ್ಲಿ ಕಾಲ್ತುಳಿತಕ್ಕೆ 120 ಬಲಿ
  • 2010 ಮಾ. 4 ಉ.ಪ್ರದೇಶದ ಪ್ರತಾಪ್​ಗಢದ ರಾಮ್ ಜಾನಕಿ ದೇಗುಲದಲ್ಲಿ ಕಾಲ್ತುಳಿತಕ್ಕೆ 63 ಭಕ್ತರು ಬಲಿ
  • 2011 ಜ. 14 ಕೇರಳದ ಶಬರಿಮಲೆದೇಗುಲದಲ್ಲಿ ಕಾಲ್ತುಳಿತ 106 ಭಕ್ತರು ಬಲಿ, 100 ಜನರಿಗೆ ಗಾಯ
  • 2012 ನ. 19 ಬಿಹಾರದ ಪಟನಾದಲ್ಲಿ ಛಾತ್ ಉತ್ಸವದ ವೇಳೆ ಕಾಲ್ತುಳಿತ, 20 ಸಾವು
  • 2013 ಫೆ. 10 ಕುಂಭಮೇಳದ ವೇಳೆ ಅಲಹಾಬಾದ್ ರೈಲುನಿಲ್ದಾಣದ ಬಳಿ ಕಾಲ್ತುಳಿತ, 36 ಜನ ಸಾವು
  • 2013 ಅ. 13 ಮಧ್ಯಪ್ರದೇಶದ ದಾಟಿಯಾದ ರತ್ನಗಢ ದೇಗುಲದಲ್ಲಿ ಕಾಲ್ತುಳಿತ, 89 ಭಕ್ತರು ಬಲಿ 100 ಜನರಿಗೆ ಗಾಯ
  • 2014 ಜ. 18 ಮುಂಬೈನ ಮಲಾಬಾರ್ ಬೆಟ್ಟದಲ್ಲಿ ಕಾಲ್ತುಳಿತ , 18 ಜನರ ಸಾವು
  • 2014 ಅ. 3 ಬಿಹಾರದ ಪಟನಾ ಗಾಂಧಿ ಮೈದಾನದಲ್ಲಿ ದಸರಾ ಉತ್ಸವದ ವೇಳೆ ಕಾಲ್ತುಳಿತ, 32 ಭಕ್ತರು ಬಲಿ
  • 2015 ಜು. 14 ಆಂಧ್ರದ ರಾಜಾಜಿನಗರದ ಪುಷ್ಕರಂನಲ್ಲಿ ಕಾಲ್ತುಳಿತ 27 ಯಾತ್ರಾರ್ಥಿಗಳ ಸಾವು, 20 ಮಂದಿಗೆ ಗಾಯ
  • 2022 ಜ. 1 ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ, 12 ಜನರ ಸಾವು, 12 ಜನರಿಗೆ ಗಾಯ
  • 2023 ಮಾ. 31 ಮಧ್ಯಪ್ರದೇಶದ ಇಂದೋರ್ ದೇಗುಲದಲ್ಲಿ ಬಾವಿಯ ಮೇಲೆ ಚಪ್ಪಡಿ ಕುಸಿದು 36 ಜನ ಸಾವು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net