

ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ನಡೆದ ಬಳಿಕ ಹಿಂದು ಸಮುದಾಯಕ್ಕೆ ಶುಭಾಶಯ ಕೋರಿದ್ದ ಕ್ರಿಕೆಟರ್ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ. ಶಮಿಯಿಂದ ಸದ್ಯ ಬೇರ್ಪಟ್ಟಿರುವ ಹಸೀನ್, ಈ ಬಗ್ಗೆ ಕೋಲ್ಕತ್ತ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಡುಕ್ಕಿ ಭೂಕುಸಿತದ ಭೀಕರತೆ; ಇಂದು 16 ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆದ ರಕ್ಷಣಾ ಸಿಬ್ಬಂದಿ
ಆಗಸ್ಟ್ 5ರಂದು ಅಯೋಧ್ಯೆಯ ರಾಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಾನು ಹಿಂದು ಸೋದರ-ಸೋದರಿಯರಿಗೆ ಶುಭಾಶಯ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದೆ. ಆದರೆ ಕೆಲವು ಕೀಳು ಮನೋಭಾವವುಳ್ಳ ಜನರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮೇಲೆ ರೇಪ್ ಮಾಡುವುದಾಗಿ ಸಂದೇಶಗಳು ಬರುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ಗಳ ಮೂಲಕ ನಿರಂತರವಾಗಿ ಬೆದರಿಕೆ ಒಡ್ಡಲಾಗುತ್ತಿದೆ. ನನಗೆ ಅಭದ್ರತಾ ಭಾವ ಕಾಡುತ್ತಿದೆ. ಇದು ಹೀಗೆ ಮುಂದುವರಿದರೆ ನಾನು ಮಾನಸಿಕ ಖಿನ್ನತೆಗೆ ಒಳಗಾಗುತ್ತೇನೆ ಎಂದು ಹಸೀನ್ ಹೇಳಿದ್ದಾರೆ.
ನಾನು ನನ್ನ ಮಗಳೊಂದಿಗೆ ಒಬ್ಬಳೇ ವಾಸವಾಗಿದ್ದೇನೆ. ಹಾಗಾಗಿ ಮಾನವೀಯತೆ ದೃಷ್ಟಿಯಿಂದಲಾದರೂ ಆದಷ್ಟು ಶೀಘ್ರವೇ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)