

ಇಲ್ಲೊಬ್ಬಾತ ತಾನು ಸಂಗ್ರಹಿಸಿರುವ ಬೃಹತ್ ಸಂಖ್ಯೆಯ ಪುಸ್ತಕಗಳ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ನೆಟ್ಟಿಗರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ, ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ, ಟ್ವಿಟರ್ ಮೂಲಕವೇ ಆತನಿಗೆ ಮದುವೆ ಪ್ರಪೋಸಲ್ ಕೂಡ ಬಂದಿದೆ...!
ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬಿದ ಪುಸ್ತಕಗಳನ್ನೇ ತುಂಬಿರುವ ಫೋಟೋವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನಾನು ಲೈಬ್ರರಿಯಲ್ಲೇ ವಾಸಿಸುತ್ತಿದ್ದೇನೆ ಎಂದು ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಕೋಣೆಯ ಒಟ್ಟು ಮೂರು ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಆ ರೂಂನಲ್ಲಿ ಒಂದು ಕಡೆ ಅಧ್ಯಯನ ಹಾಗೂ ಕೆಲಸ ಎರಡೂ ಸಹಾಯವಾಗುವಂತಹ ಡೆಸ್ಕ್ ಇದ್ದರೆ, ಇನ್ನೊಂದು ಕಡೆ ಒಂದು ಕುರ್ಚಿ ಹಾಕಲಾಗಿದೆ. ಓದಲು ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು 1000 ಪುಸ್ತಕಗಳು ರೂಂನಲ್ಲಿ ಇರಬಹುದು ಎಂದು ಮೇಲ್ನೋಟಕ್ಕೇ ಹೇಳಬಹುದು.
ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಅದು ಪುಸ್ತಕ ಪ್ರೇಮಿಗಳ ಮನಸು ಕದ್ದಿದೆ. ಬಹುತೇಕರು ಕಾಮೆಂಟ್ ಮಾಡಿ, ನಾವು ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದು ಹೇಳಿದ್ದಾರೆ. ಒಂದು ಮೂಲೆ ನನಗಿರಲಿ ಎಂದು ಕೂಡ ಕಾಮೆಂಟ್ ಹಾಕಿದ್ದಾರೆ.
ಅದೆಲ್ಲಕ್ಕಿಂತಲೂ ಮುಖ್ಯವಾಗಿ ಗಮನಸೆಳೆದಿದ್ದು, ಕಾಮೆಂಟ್ ಸೆಕ್ಷನ್ನಲ್ಲಿ ಕಂಡು ಬಂದ ' ಕ್ಯಾನ್ ಐ ಮ್ಯಾರಿ ಯೂ' ಎಂಬ ಪ್ರಶ್ನೆ. ಓಶಾಜ್ ಎಂಬ ಟ್ವಿಟರ್ ಅಕೌಂಟ್ನಿಂದ ಈ ಕಾಮೆಂಟ್ ಮಾಡಲಾಗಿದೆ. ಪುಸ್ತಕ ನೋಡಿಯೇ ಮದುವೆ ಪ್ರಪೋಸ್ ಮಾಡಲಾಗಿದೆ. (ಏಜೆನ್ಸೀಸ್)