

ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೂರ್ವ ಲಡಾಖ್ನ ವಾಸ್ತವ ಗಡಿ ರೇಖೆ ಬಳಿ ಪರಿಸ್ಥಿತಿ ಏನಿದೆ ಎಂಬುದನ್ನು ಬಹಿರಂಗಪಡಿಸಿ ಎಂದು ಗೃಹ ಸಚಿವ ಅಮಿತ್ ಷಾ ಅವರನ್ನು ಒತ್ತಾಯಿಸಿದ್ದಾರೆ.
ಗಲ್ವಾನ್ ಕಣಿವೆ, ಡೆಪ್ಸಾಂಗ್, ಪ್ಯಾಂಗೊಂಗ್ ತ್ಸೋನಿಂದ ಚೀನಾ ಸೇನೆಯನ್ನು ಹೊರಹಾಕಲು ಯುದ್ಧ ಘೋಷಣೆ ಮಾಡಲಾಗಿದೆಯೇ? ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಗೃಹ ಸಚಿವ ಅಮಿತ್ ಷಾ ಅವರು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಭಾರತ ಕೊವಿಡ್-19 ಮತ್ತು ಪೂರ್ವ ಲಡಾಖ್ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷ ಎರಡರ ವಿಚಾರದಲ್ಲೂ ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ಹೇಳಿದ್ದರು.
ಅದಾದ ಕೆಲವೇ ಹೊತ್ತಲ್ಲಿ ಓವೈಸಿ ಟ್ವೀಟ್ ಮಾಡಿದ್ದಾರೆ. ಗಡಿಯಲ್ಲಿ ಇರುವ ವಾಸ್ತವ ಪರಿಸ್ಥಿತಿಯನ್ನು ದೇಶಕ್ಕೆ ತಿಳಿಸಿ ಎಂದಿದ್ದಾರೆ.
ಈಗಾಗಲೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದೆ. ಭಾರತ-ಚೀನಾ ಸಂಘರ್ಷವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಮುಖಂಡರು ಕೇಂದ್ರ ಸರ್ಕಾರಕ್ಕೆ ಅನೇಕ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ವಾಗ್ದಾಳಿ ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರೂ ಸಹ, ಗಡಿಯಲ್ಲಿ ಉಂಟಾದ ಯೋಧರ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)