ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ಕೊಟ್ಟ ಪ್ರಭಾಸ್! ಇದು ಎಷ್ಟು ಸತ್ಯ?

Ayodhya Prabhas
Published on

ಹೈದರಾಬಾದ್: ಸಲಾರ್​ ಯಶಸ್ಸಿನ ಗುಂಗಿನಲ್ಲಿರುವ ಯಂಗ್​ ರೆಬೆಲ್​ಸ್ಟಾರ್​ ಪ್ರಭಾಸ್​ ಕಳೆದ ಕೆಲ ದಿನಗಳಿಂದ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರಭಾಸ್​ ಬಳಿಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು.

ಕೆಲ ದಿನಗಳ ಹಿಂದೆ ಶಾಸಕ ಚಿರ್ಲಾ ಜಗ್ಗಿರೆಡ್ಡಿ ನಟ ಪ್ರಭಾಸ್​ ರಾಮಮಂದಿರ ನಿರ್ಮಾಣ ಕಾರ್ಯಕ್ಕಾಗಿ 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು ಮತ್ತು ನಟನ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಈ ಕುರಿತಾಗಿ ನಟ ಪ್ರಭಾಸ್​ ಸ್ಪಷ್ಟನೆ ನೀಡಿದ್ದು, ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ನಟ ಪ್ರಭಾಸ್​ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತರಿಉವ ರಾಮಮಂದಿರಕ್ಕೆ 50 ಕೋಟಿ ರೂಪಾಯಿ ದೇಣಿಗೆ ಹಾಗೂ ಉದ್ಘಾಟನೆಯ ದಿನದಂದು ಊಟದ ವ್ಯವಸ್ಥೆಯನ್ನು ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ನಟ ಪ್ರಭಾಸ್​ ಆಪ್ತರೊಬ್ಬರು ಈ ಎಲ್ಲಾ ಸುದ್ದಿಗಳನ್ನು ಅಲ್ಲಗೆಳೆದಿದ್ದು, ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸುದ್ದಿಗಳು ಹರದಾಡುತ್ತಿದ್ದು, ಅದೆಲ್ಲಾ ಸುಳ್ಳು ಸುದ್ದಿಯಾಗಿದೆ. ನಟ ಪ್ರಭಾಸ್​ ಅವರು ಯಾವುದೇ ದೇಣಿಗೆ ಅಥವಾ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುವುದಾಗಿ ಎಲ್ಲಿಯೂ ಹೇಳಿಲ್ಲ ಮತ್ತು ಒಪ್ಪಿಕೊಂಡಿಲ್ಲ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುದ್ದಿಗಳನ್ನು ಹರಿಬಿಟ್ಟಿದ್ದಾರೆ. ಜನರು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಎಂದು ನಟ ಪ್ರಭಾಸ್​ ಆಪ್ತರೊಬ್ಬರು ತಿಳಿಸಿದ್ದಾರೆ.

ಜನವರಿ 22ರಂದು ನಡೆಯಲಿರುವ ರಾಮಲಲ್ಲಾಣ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಟರಾದ ರಜನಿಕಾಂತ್, ಚಿರಂಜೀವಿ, ರಾಮ್ ಚರಣ್, ಧನುಷ್​ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ನಟ ಪ್ರಭಾಸ್​ ಅವರಿಗೆ ಆಹ್ವಾನ ನೀಡಲಾಗಿದೆಯೇ ಎಂಬುದರ ಬಗ್ಗೆ ಎಲ್ಲಿಯೂ ರಿವೀಲ್​ ಆಗಿಲ್ಲ. ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net