ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಐವರು ಮೃತ್ಯು, ಓರ್ವ ಗಂಭೀರ

Odisha Bike Accident
Published on

ಭುವನೇಶ್ವರ್: ಎರಡು ಬೈಕ್​ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ಸೊರಡ ಸಮೀಪದ ಕೇಶರಿಪಟ್ಟಣದಲ್ಲಿ ದುರ್ಘಟನೆ ಸಂಭವಿಸಿದ್ದು, ಎರಡು ದ್ವಿಷಕ್ರ ವಾಹನಗಳಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ದಟ್ಟವಾದ ಮಂಜು ತುಂಬಿದ್ದ ಪರಿಣಾಮ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಿದ್ದ ಕಾರಣ ಎರಡು ಬೈಕ್​ಗಳ ನಡುವೆ ಅಪಘಾತವಾಗಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೃತರನ್ನು ಆಶುರಬಂದ್‌ನ ಶ್ರೀಕಾಂತ್ ಗೌಡ, ದುಲಾದದ ಮನೋಜ್ ಡಾಕುವಾ, ಗೋಪಾಲಪುರ ಸಶನ್‌ನ ಮಹೇಂದ್ರ ನಾಯಕ್, ಸೊರಡದ ಜಯಂತ್ ಬಡತ್ಯ ಮತ್ತು ಸನಾ ಸೊರಡದ ರಜನಿ ಗೌಡ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 30-35 ವರ್ಷ ಆಸುಪಾಸಿನವರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net