Priyanka Gandhi | ಬಿಜೆಪಿ ಸರ್ಕಾರದಲ್ಲಿ ದಲಿತ ಸಮುದಾಯದ ಜನರಿಗೆ ಸುರಕ್ಷತೆ ಇಲ್ಲ : ಪ್ರಿಯಾಂಕಾ ಗಾಂಧಿ

Priyanka Gandhi 1
Published on

Chandigarh: ಹರಿಯಾಣ ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಆತ್ಮಹತ್ಯೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ( Priyanka Gandhi) ಮಂಗಳವಾರ(ಅ 14) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಸರ್ಕಾರದಲ್ಲಿ, ಉನ್ನತ ಹುದ್ದೆಗಳನ್ನು ತಲುಪಿದರೂ, ದಲಿತ ಸಮುದಾಯದ ಜನರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಿಯಾಂಕಾ, ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಜಿ ಇತ್ತೀಚೆಗೆ ಜಾತಿ ಆಧಾರಿತ ಕಿರುಕುಳದಿಂದ ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬ ನ್ಯಾಯಕ್ಕಾಗಿ ಅಲೆದಾಡುತ್ತಿದೆ, ಆದರೆ, ಈ ಕುರಿತಾಗಿ ಯಾರೂ ಗಮನ ಹರಿಸುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನು ತಲುಪಿದ ನಂತರವೂ ದಲಿತ ಸಮುದಾಯದ ಜನರಿಗೆ ಸುರಕ್ಷತೆ ಇಲ್ಲ ಎಂದರು.

ಈ ರೀತಿಯ ಘಟನೆಗಳು ದೇಶ ಮತ್ತು ಸಮಾಜದ ಮೇಲೆ ಕಲೆ ಇದ್ದಂತೆ ಎಂದಿರುವ ವಯನಾಡ್ ಸಂಸದೆ, ದಿವಂಗತ ವೈ. ಪೂರಣ್ ಕುಮಾರ್ ಕುಟುಂಬಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಬಗ್ಗೆಯೂ ಉಲ್ಲೇಖಿಸುತತ್ತಾ, ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ರಾಹುಲ್ ಗಾಂಧಿ ಪೂರಣ್​​ ಕುಟುಂಬವನ್ನು ಭೇಟಿ ಮಾಡಿ ಐಪಿಎಸ್ ಅಧಿಕಾರಿಯ ನಿಧನಕ್ಕೆ ದುಃಖ ವ್ಯಕ್ತಪಡಿಸಿದರು ಮತ್ತು ಅವರ ಸಾರ್ವಜನಿಕ ಜೀವನದಲ್ಲಿನ ಸೇವೆ ಮತ್ತು ಸಮಗ್ರತೆಯನ್ನು ಗುರುತಿಸಿದರು.

ರಾಹುಲ್​ ಭೇಟಿ..

ಐಪಿಎಸ್​ ಅಧಿಕಾರಿ ಪೂರಣ್​ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಬಳಿಕ, ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹರಿಯಾಣ ಐಪಿಎಸ್ ಅಧಿಕಾರಿಯ ಪ್ರಕರಣದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿಷಯ ಕೇವಲ ಒಂದು ಕುಟುಂಬದ ಸಮಸ್ಯೆ ಅಲ್ಲ, ದೇಶಾದ್ಯಂತ ಲಕ್ಷಾಂತರ ದಲಿತರ ಮೇಲೆ ಪರಿಣಾಮ ಬೀರುತ್ತಿದೆ ಎಂದರು.

ಅಧಿಕಾರಿ ಪೂರಣ್​ ಮನೋಸ್ಥೈರ್ಯ ಕುಗ್ಗಿಸಲು ಮತ್ತು ಅವರ ವೃತ್ತಿಜೀವನಕ್ಕೆ ಹಾನಿ ಮಾಡಲು ಇತರ ಅಧಿಕಾರಿಗಳು ಅನೇಕ ವರ್ಷಗಳಿಂದ ವ್ಯವಸ್ಥಿತ ತಾರತಮ್ಯ ನಡೆಸಿದ್ದಾರೆ. ಇದು ಕೇವಲ ಒಂದು ಕುಟುಂಬದ ವಿಷಯವಲ್ಲ. ದೇಶದಲ್ಲಿ ಕೋಟ್ಯಂತರ ದಲಿತ ಸಹೋದರ ಸಹೋದರಿಯರಿದ್ದಾರೆ ಮತ್ತು ಅವರಿಗೆ ತಪ್ಪು ಸಂದೇಶ ಸಿಗುತ್ತಿದೆ. ನೀವು ಜೀವನದಲ್ಲಿ ಎಷ್ಟೇ ಯಶಸ್ವಿಯಾಗಿದ್ದರೂ, ಬುದ್ಧಿವಂತ ಮತ್ತು ಸಮರ್ಥರಾಗಿದ್ದರೂ, ನೀವು ದಲಿತರಾಗಿದ್ದರೆ, ನಿಮ್ಮನ್ನು ನಿಗ್ರಹಿಸಬಹುದು ಮತ್ತು ಹೊರಹಾಕಬಹುದು ಎಂಬ ಸಂದೇಶ ಎಂದು ಹೇಳಿದರು.

ಲೋಕಸಭೆಯ ವಿಪಕ್ಷ ನಾಯಕನಾಗಿ ಪ್ರಧಾನಿ ಮೋದಿ ಮತ್ತು ಸಿಎಂ ನಯಾಬ್ ಸಿಂಗ್ ಸೈನಿಗೆ ಸಂದೇಶ ಕಳುಹಿಸುತ್ತಿದ್ದು, ನೀವು ಅಧಿಕಾರಿಯ ಅಂತ್ಯಕ್ರಿಯೆ ನಡೆಯಲು ಅವಕಾಶ ನೀಡಬೇಕು ಮತ್ತು ಈ ನಾಟಕವನ್ನು ನಿಲ್ಲಿಸಬೇಕು ಎಂದು ಹೇಳಿದರು. ಈ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಪೂರಣ್​ ಕುಟುಂಬಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಮತ್ತು ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ಖಚಿತಪಡಿಸಬೇಕು ಎಂದರು.

ಅಧಿಕಾರಿ ಪೂರಣ್​ ಮೇಲೆ ಯಾವ ಮಟ್ಟದ ಒತ್ತಡ ಹೇರಿರಬಹುದು ಎನ್ನುವುದು ಈ ಘಟನೆತಯಿಂದ ಇಡೀ ದೇಶಕ್ಕೆ ಅರ್ಥವಾಗಿದ್ದು, ಆ ಅಧಿಕಾರಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಘಟನೆ..

ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ತಮ್ಮ​ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ಅವರ ಕೋಣೆಯಲ್ಲಿ ಡೆತ್​ ನೋಟ್​ ಪತ್ತೆಯಾಗಿದ್ದು, ಅದರಲ್ಲಿ ಹಿರಿಯ ಅಧಿಕಾರಿ, ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಸೇರಿದಂತೆ ಎಂಟು ಉನ್ನತ ಪೊಲೀಸ್ ಅಧಿಕಾರಿಗಳ ಮೇಲೆ "ಜಾತಿ ಆಧಾರಿತ ತಾರತಮ್ಯ, ಉದ್ದೇಶಿತ ಮಾನಸಿಕ ಕಿರುಕುಳ, ಸಾರ್ವಜನಿಕ ಅವಮಾನ ಮತ್ತು ದೌರ್ಜನ್ಯದ ಕುರಿತು ಬರೆದಿದ್ದಾರೆ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net