10 ಅಡಿ ಗುಂಡಿ, ಸುಳ್ಳಿನ ಕಂತೆ; ಹತ್ಯೆಗೂ ಮುನ್ನ ಅತ್ಯಾಚಾರ! ಕಡೆಗೂ ನೀಚ ಮಾವನಿಂದ ಸತ್ಯ ಕಕ್ಕಿಸಿದ ಖಾಕಿ | Murder Case

ವಿಜಯವಾಣಿ - 2025-06-27T153220.959
Published on

Murder Case: ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದ ಯುವತಿಯ ಹುಡುಕಾಟದಲ್ಲಿದ್ದ ಹರಿಯಾಣದ ಪೊಲೀಸರಿಗೆ ಕಡೆಗೂ ಆಕೆಯ ಮೃತದೇಹ ಪತ್ತೆಯಾಗಿದ್ದೇ ಆದರೂ ಕೊಲೆಗಾರರು ಯಾರು? ಉದ್ದೇಶವೇನಿತ್ತು? ಎಂಬುದು ಸ್ಪಷ್ಟವಾಗಿರಲಿಲ್ಲ. ಗಂಡನ ಮನೆಯ ಎದುರಿಗಿದ್ದ ರಸ್ತೆಯ 10 ಅಡಿ ಗುಂಡಿಯಲ್ಲಿ ಯುವತಿಯ ದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಚುರುಕು ತನಿಖೆ ಕೈಗೊಂಡ ಖಾಕಿಗೆ ಕಡೆಗೂ ಆರೋಪಿ ಮಾವನಿಂದ ಸತ್ಯ ಇಂಚಿಂಚಾಗಿ ಹೊರಬಿದ್ದಿದೆ.

ಕೊಲೆಯಾದ ಯುವತಿ ತನು ಅವರ ಸಹೋದರಿ ಪ್ರೀತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ, ಯುವತಿಯ ಗಂಡನ ಮನೆಯವರ ಮೇಲೆಯೇ ಸಂಶಯ ಮೂಡಿತ್ತು. ಇದಕ್ಕೆ ಮೃತರ ಸಹೋದರಿ ದೂರಿನಲ್ಲಿ ಆರೋಪಿಸಿದ್ದ ವಿಚಾರ. ಮದುವೆಯಾದ ಕೆಲವೇ ತಿಂಗಳಲ್ಲಿ ತನುಗೆ ವರದಕ್ಷಿಣೆ ಮತ್ತು ಹಣ ತರುವಂತೆ ಅತ್ತೆ ಮನೆಯವರು ಕೊಟ್ಟಿದ್ದ ಹಿಂಸಾಚಾರವೇ ಸಾಕ್ಷಿ. ಆದರೆ, ಕೊಲೆಗೈಯುವ ಮನಸ್ಥಿತಿ, ಉದ್ದೇಶ ಮೂಡಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.

ಇದೇ ಕಾರಣದಿಂದ ತನು ಗಂಡನ ಮನೆಯವರನ್ನು ಬಂಧಿಸಿದ ಪೊಲೀಸರು, ಆರೋಪಿಗಳಿಂದ ಸತ್ಯಾಸತ್ಯತೆ ಬಾಯ್ಬಿಡಿಸುವ ನಿಟ್ಟಿನಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಈ ವೇಳೆ ಯುವತಿಯ ಮಾವ (ಗಂಡನ ತಂದೆ) ತಾನೇ ಸೊಸೆಯನ್ನು ಕೊಲೆಗೈದಿದ್ದು ಎಂದು ಸತ್ಯ ಕಕ್ಕಿದ್ದಾನೆ.

ಸತ್ಯ ಕಕ್ಕಿದ ಮಾವ

ಮೃತ ತನು ಮಾವನನ್ನು ತನಿಖೆಗೆ ಒಳಪಡಿಸಿದ ಖಾಕಿ ಪಡೆ ಕಡೆಗೂ ಆತನ ಬಾಯಿಂದ ಸತ್ಯ ಕಕ್ಕಿಸುವಲ್ಲಿ ಯಶಸ್ವಿಯಾಗಿದೆ. ತನು ಮಾವ ಭೂಪ್ ಸಿಂಗ್ ತಾನೇ ಕೊಲೆ ಮಾಡಿದ್ದು ಎಂದು ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಏಪ್ರಿಲ್ 21-22ರ ತಡರಾತ್ರಿ, ಭೂಪ್ ಸಿಂಗ್, ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸೊಸೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಆದ್ರೆ, ಇದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ತನ್ನ ಕಾಮತೃಷೆಯನ್ನು ತೀರಿಸಿಕೊಂಡ ಬಳಿಕ ಸೊಸೆಯ ಉಸಿರುಗಟ್ಟಿಸಿ ಕೊಂದಿದ್ದಾನೆ. ಈ ಸಮಯದಲ್ಲಿ ಸಿಂಗ್​ ಹೆಂಡತಿ ಸೋನಿಯಾ ಮತ್ತು ಮಗ ಅರುಣ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ನಿದ್ರೆ ಮಾತ್ರೆ

ಊಟದಲ್ಲಿ ನಿದ್ರೆ ಬರುವ ಮಾತ್ರೆಯನ್ನು ಬೆರೆಸಿ ಕೊಟ್ಟಿದ್ದಾಗಿ ಹೇಳಿರುವ ಭೂಪ್ ಸಿಂಗ್, ಕೊಲೆಗೈಯುವ ಉದ್ದೇಶದಿಂದಲೇ ಆಕೆಯ ರೂಮ್​ಗೆ ತೆರಳಿದ್ದೆ. ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆಗೈದಿದ್ದಾಗಿ ಪೊಲೀಸರ ಬಳಿ ಹೇಳಿದ್ದಾನೆ. ಹತ್ಯೆಗೈದ ಬಳಿಕ ಶವವನ್ನು ಮನೆ ಮುಂದೆ ಪಾಲಿಕೆಯವರು ಅಗೆದಿದ್ದ ಗುಂಡಿಯಲ್ಲಿ ಹೂತಿದ್ದಾಗಿಯೂ ಹೇಳಿದ್ದಾನೆ. ಇಡೀ ಕೃತ್ಯವನ್ನು ತನ್ನ ಪತ್ನಿ ಮತ್ತು ಮಗನ ಬಳಿ ವಿವರಿಸಿದ ಆರೋಪಿ ಮಾವ, ಸೊಸೆಯನ್ನು ರೇಪ್ ಮಾಡಿದ ವಿಷಯವನ್ನು ಮಾತ್ರ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದು ಹೆಂಡತಿ ಮತ್ತು ಮಗನಿಗೆ ಇಲ್ಲಿಯವರೆಗೂ ಗೊತ್ತಿರದ ಸಂಗತಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net