ರೂಮ್​ನೊಳಗೆ ಲಾಕ್​, ಮೂತ್ರ ಮಾಡಿಕೊಂಡ ಬಟ್ಟೆಗಳು! ವೃದ್ಧಾಶ್ರಮದ ಕರ್ಮಕಾಂಡ ಕಡೆಗೂ ಬಯಲಿಗೆ | Old Age Home

ವಿಜಯವಾಣಿ - 2025-06-27T124922.703
Published on

Old Age Home: ಮನೆಯವರಿಗೆ ಬೇಡವಾದ ಹಿರಿ ಜೀವಗಳಿಗೆ ಸಿಗುವ ಕೊನೆ ಆಶ್ರಯ ತಾಣವೇ ಈ ವೃದ್ಧಾಶ್ರಮ. ಇಲ್ಲಿಯಾದರೂ ನೆಮ್ಮದಿ ನಿರಾಳವಾಗಿ ಬದುಕುವ ಹಂಬಲ ಹೊಂದಿದವರಿಗೆ ಇದೂ ನರಕವಾದರೆ ಹೇಗೆ? ಇಂಥದ್ದೊಂದು ನಂಬಲು ಅಸಾಧ್ಯವಾದ, ಕುರುಳು ಹಿಂಡುವ ಘಟನೆ ನೋಯ್ಡಾ ಸೆಕ್ಟರ್​ 55ರಲ್ಲಿ ಸಂಭವಿಸಿದೆ.

'ಎನ್​ಡಿಟಿವಿ' ವರದಿ ಪ್ರಕಾರ, ಬಟ್ಟೆ ಧರಿಸದ ವೃದ್ಧ ಜೀವಿಗಳು ಒಂದಡೆಯಾದರೆ, ಮೂತ್ರ ಮಾಡಿಕೊಂಡ ಉಡುಪುಗಳನ್ನೇ ಹಾಕಿಕೊಂಡು ಜೀವನ ಮಾಡುತ್ತಿರುವವರು ಮತ್ತೊಂದೆಡೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ ನೋಯ್ಡಾ ಪೊಲೀಸರು ಕಂಬನಿ ಮಿಡಿದಿದ್ದಾರೆ. ಬಟ್ಟೆಯಿಲ್ಲದೆ ಒಂಟಿಯಾಗಿ ಓಡಾಡುತ್ತಿದ್ದ ವೃದ್ಧರು, ನೋಯ್ಡಾ ಸೆಕ್ಟರ್ 55ರಲ್ಲಿರುವ ಆನಂದ್ ನಿಕೇತನ ಎಂಬ ವೃದ್ಧಾಶ್ರಮದಲ್ಲಿ ದಯನೀಯ ಸ್ಥಿತಿಯಲ್ಲಿ ಕಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದಷ್ಟು ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.

ಈ ವಿಡಿಯೋವನ್ನು ಲಖನೌನಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೂ ಕಳುಹಿಸಲಾಗಿದೆ. ವಿಡಿಯೋ ತುಣುಕಿನಲ್ಲಿ ವೃದ್ಧ ಮಹಿಳೆಯೊಬ್ಬರ ಕೈಗಳನ್ನು ಕಟ್ಟಿ ರೂಮ್​ನಲ್ಲಿ ಕೂಡಿ ಹಾಕಿರುವುದು ತಿಳಿದುಬಂದಿದೆ. ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು ಗುರುವಾರ (ಜೂನ್​.26) ವೃದ್ಧಾಶ್ರಮದ ಮೇಲೆ ದಾಳಿ ನಡೆಸಿ, 39ಕ್ಕೂ ಅಧಿಕ ಹಿರಿಯ ನಾಗರಿಕರನ್ನು ರಕ್ಷಣೆ ಮಾಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ಹಲವು ವೃದ್ಧರನ್ನು ಬಟ್ಟೆಯಿಂದ ಕಟ್ಟಿಹಾಕಿ ರೂಮ್​ಗಳಲ್ಲಿ ಕೂಡಿ ಹಾಕಿರುವುದು ಕಂಡುಬಂದಿದೆ.

ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭಾರಲಾ ಅವರ ಪ್ರಕಾರ, "ಕೆಲವರನ್ನು ನೆಲಮಾಳಿಗೆಯಂತಹ ರೂಮ್​ಗಳಲ್ಲಿ ಕೂಡಿ ಹಾಕಲಾಗಿತ್ತು. ವೃದ್ಧ ಪುರುಷರು ಬಟ್ಟೆ ಧರಿಸದೆ ಇದ್ದರೆ, ಮಹಿಳೆಯರಿಗೆ ಭಾಗಶಃ ಬಟ್ಟೆಗಳನ್ನು ನೀಡಲಾಗಿತ್ತು. ಅವರಲ್ಲಿ ಹಲವರು ಮೂತ್ರ ಮತ್ತು ಮಲ ಮಾಡಿಕೊಂಡ ಉಡುಪಗಳನ್ನೇ ಧರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಖ್ಯವಾಗಿ, ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಇಲ್ಲಿ ಸರಿಯಾದ ವ್ಯವಸ್ಥೆ ಹಾಗೂ ಸಿಬ್ಬಂದಿ ಇಲ್ಲ" ಎಂದು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಆಶ್ರಮವು ವೃದ್ಧರ ಕುಟುಂಬಗಳಿಂದ 2.5 ಲಕ್ಷ ರೂ. ದೇಣಿಗೆ ಪಡೆದಿದೆ ಎಂದು ತಿಳಿದುಬಂದಿದೆ. ಹೆಚ್ಚುವರಿಯಾಗಿ, ಆಹಾರ ಮತ್ತು ವಸತಿಗಾಗಿ ತಿಂಗಳಿಗೆ 6,000 ರೂ. ಹಣವನ್ನೂ ಪಡೆದಿರುವುದಾಗಿ ವರದಿ ಉಲ್ಲೇಖಿಸಿದೆ. ವೃದ್ಧಾಶ್ರಮದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ವೃದ್ಧರನ್ನು ಒಂದೆರಡು ದಿನಗಳಲ್ಲಿ ಸರ್ಕಾರಿ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net