ಬ್ಯಾಂಕ್​ಗಳಿಗೆ ಸಂಕಷ್ಟ; ರಾಷ್ಟ್ರೀಕೃತ ಬ್ಯಾಂಕುಗಳ ಎನ್​ಪಿಎ ಹೊರೆ 54,756 ಕೋಟಿ ರೂಪಾಯಿ

Bank
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ಕಾಣಿಸಿಕೊಂಡ ಬರ, ನೆರೆ ಹಾವಳಿ, ಕರೊನಾ ಲಾಕ್​ಡೌನ್ ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಅನುತ್ಪಾದಕ ಆಸ್ತಿ (ಎನ್​ಪಿಎ) ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೀಗ ಬ್ಯಾಂಕುಗಳು ಸಾಲ ವಸೂಲಿಗೆ ರಾಜ್ಯ ಸರ್ಕಾರದ ಬಳಿ ನೆರವು ಕೋರಿವೆ. ಬ್ಯಾಂಕುಗಳು ಸೂಕ್ತ ಮಾಹಿತಿ ಹಂಚಿಕೊಂಡರೆ ಮಾತ್ರ ನೆರವು ನೀಡಲು ಸಾಧ್ಯ ಎಂದು ಅಭಿವೃದ್ಧಿ ಆಯುಕ್ತರು ರಾಜ್ಯ ಬ್ಯಾಂಕರುಗಳ ಸಮಿತಿಗೆ ಸಂದೇಶ ರವಾನಿಸಿದ್ದಾರೆ. ಕೃಷಿ, ಕೈಗಾರಿಕೆ, ವಸತಿ, ಶಿಕ್ಷಣ ಮತ್ತು ಇತರೆ ಆದ್ಯತಾ ವಲಯ, ಆದ್ಯತಾ ರಹಿತ ವಲಯ ಸೇರಿ 29.48 ಲಕ್ಷ ಸಂಖ್ಯೆಯ ಸಾಲಗಳಿಂದ 54,756 ಕೋಟಿ ರೂ. ಸಾಲ ಮರುಪಾವತಿಯಾಗದೆ ಅನುತ್ಪಾದಕ ಆಸ್ತಿಯಾಗಿದೆ ಎಂದು ಬ್ಯಾಂಕುಗಳು ಸರ್ಕಾರಕ್ಕೆ ದಾಖಲೆ ನೀಡಿವೆ.

ನಿರಂತರ ಮಳೆ, ಅದಕ್ಕೂ ಮುನ್ನ ಬರದಿಂದಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಸಾಲ ಮರುಪಾವತಿಯಾಗದೇ ಉಳಿದಿದೆ. ಸಾಲಮನ್ನಾ ಆಗಬಹುದೆಂಬ ರೈತರ ನಿರೀಕ್ಷೆ ಅಥವಾ ಊಹಾಪೋಹದ ಕಾರಣಕ್ಕೆ ಸಾಲ ಮರುಪಾವತಿ ಮಾಡುವವರೂ ಹಿಂದೇಟು ಹಾಕಿದ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಸಾಲ ಬಾಕಿ ಉಳಿದಿದೆ. ಸದ್ಯಕ್ಕೆ ಕೃಷಿ ಕ್ಷೇತ್ರವೊಂದರಿಂದಲೆ 21,773 ಕೋಟಿ ರೂ. ಸಾಲ ಬಾಕಿ ಇದೆ. ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳು ಪಡೆದ ಸಾಲ ಸಹ ಸರಿಯಾಗಿ ವಸೂಲಾಗಿಲ್ಲ. ಸುಮಾರು 4,58,237 ಸಾಲಗಳ ಬಾಬ್ತು 11,652 ಕೋಟಿ ರೂ. ಅನ್ನು ಬ್ಯಾಂಕುಗಳು ಅನುತ್ಪಾದಕ ಎಂದು ಗುರುತಿಸಿವೆ. ವಸತಿ ಸಾಲ ಪಡೆದವರ ಪೈಕಿ 55,611 ಮಂದಿ ಸಾಲ ಮರುಪಾವತಿ ಮಾಡಿಲ್ಲ. ಇದರ ಬಾಬ್ತು 1,682 ಕೋಟಿ ರೂ. ಆಗಿದೆ ಎಂದು ಬ್ಯಾಂಕುಗಳು ಹೇಳಿವೆ. ಶಿಕ್ಷಣ ಸಾಲ ಪಡೆದವರ ಪೈಕಿ 24,282 ಮಂದಿ ಸಾಲ ಮರುಪಾವತಿಸಿಲ್ಲ.

ಅನುತ್ಪಾದಕ ಸಾಲಗಳನ್ನು ವಸೂಲಿ ಮಾಡಲು ಬ್ಯಾಂಕುಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಬ್ಯಾಂಕುಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ. ಕಾನೂನಿನ ಅವಕಾಶ ಬಳಸಿಕೊಂಡು ಮುನ್ನಡೆಯಲು ಅಧಿಕಾರಿಗಳು ತಮ್ಮ ಬೆಂಬಲಕ್ಕೆ ನಿಲ್ಲಬೇಕೆಂದು ಬ್ಯಾಂಕುಗಳು ಬಯಸಿವೆ. ಕೆಲವು ಜಿಲ್ಲೆಗಳಲ್ಲಿ ಸಾಲ ವಸೂಲಿಗೆ ತೆರಳಿದಾಗ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸರ್ಕಾರದ ನೆರವು ಬೇಕಾಗುತ್ತದೆ. ಇದೇ ವಿಚಾರದಲ್ಲಿ ಸರ್ಕಾರದೊಂದಿಗೆ ಚರ್ಚೆ ನಡೆದಿದೆ. ಆದರೆ, ಬ್ಯಾಂಕುಗಳು ಸರಿಯಾದ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂಬ ಆಕ್ಷೇಪವನ್ನು ಸರ್ಕಾರದ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಎನ್​ಪಿಎ ಹೆಚ್ಚಾಗಿದೆ. ಕಾನೂನಿನ ಪ್ರಕಾರ ಸಾಲ ವಸೂಲಿಗೆ ನೆರವಾಗುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ನೆರವು ಅತಿ ಮುಖ್ಯವಾಗುತ್ತದೆ.

| ಬಿ.ಚಂದ್ರಶೇಖರ ರಾವ್ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಎಸ್​ಎಲ್​ಬಿಸಿ ಕನ್ವೀನರ್

ನೆರವಿಗೆ ಕೇಂದ್ರ ಸರ್ಕಾರ: ಕರೊನಾದಿಂದ ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾದ ಕಾರಣ ಕೃಷಿ ಮತ್ತು ಕೈಗಾರಿಕೆ ಸಾಲ ಬಾಕಿಯಾಗಿದೆ. ಹೀಗಾಗಿ ಸಾಲಗಳನ್ನು ಮರು ನಿಗದಿ ಮಾಡಿಕೊಡಿ ಎಂದು ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ಸೂಚಿಸಿದೆ. ಜತೆಗೆ ಆರ್ಥಿಕ ಪ್ಯಾಕೇಜ್​ಗಳನ್ನು ಪ್ರಕಟಿಸಿದೆ. ಈ ಮೂಲಕ ಅನುತ್ಪಾದಕವಾದ ಸಾಲಗಳನ್ನು ರಿಸ್ಟ್ರಕ್ಚರ್ (ಪುನರ್ ವಿನ್ಯಾಸ) ಮಾಡುವ ಅವಕಾಶವಿದೆ. ಇದನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಲೀಡ್ ಬ್ಯಾಂಕ್ ಹಿರಿಯ ಅಧಿಕಾರಿ ವಿಜಯವಾಣಿಗೆ ತಿಳಿಸಿದರು.

ವಸೂಲಿಗೆ ಕಳ್ಳಾಟ: ಕೆಲವೊಬ್ಬರು ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದ್ದರೂ ಕರೊನಾ, ರೈತರ ಹೋರಾಟದ ನೆಪದಲ್ಲಿ ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಹಿರಿಯ ಬ್ಯಾಂಕ್ ಅಧಿಕಾರಿ ವಿವರಿಸುತ್ತಾರೆ. ಪ್ರತಿ ಬ್ಯಾಂಕಿಗೆ ತನ್ನ ಗ್ರಾಹಕರ ಸಾಮರ್ಥ್ಯದ ಅರಿವಿರುತ್ತದೆ. ಅವರ ಆರ್ಥಿಕ ವಹಿವಾಟೂ ಸಹ ಗೊತ್ತಾಗುತ್ತಿರುತ್ತದೆ. ಸಾಲ ಮರುಪಾವತಿಗೆ ಅವಕಾಶಗಳಿದ್ದರೂ ಕೆಲವೊಬ್ಬರು ಸಾಲ ಕಟ್ಟುವುದಿಲ್ಲ ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ಸವಾಲು ಹಾಕುತ್ತಾರೆ. ಕಾನೂನಿನ ಅಡಿಯಲ್ಲಿ ಬಲವಂತದ ವಸೂಲಿಗೆ ಪ್ರಯತ್ನಿಸಿದರೆ ಅನೇಕ ಅಡ್ಡಿ ಉಂಟುಮಾಡುತ್ತಾರೆ. ಇದೂ ಕೂಡ ಎನ್​ಪಿಎ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net