ವಿದ್ಯಾರ್ಥಿನಿಗೆ ಶಿಕ್ಷಕನಿಂದಲೇ ಲೈಂಗಿಕ ಕಿರುಕುಳ; 'ನಿನಗೆ ನಾನು ಬೇಕಾ? ನಿನ್ನ ತಂದೆ-ತಾಯಿ ಬೇಕಾ?' ಎಂದು ಪ್ರಶ್ನೆ

Teacher
Published on

ಕುಂದಾಪುರ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಪ್ರೌಢಶಾಲಾ ಶಿಕ್ಷಕರೊಬ್ಬರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಬಿಜೂರು ಪ್ರೌಢ ಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ವಿರುದ್ದ ಪ್ರಕರಣ ದಾಖಲಾಗಿದೆ. ಸೆ. 26ರಂದು ವಿದ್ಯಾರ್ಥಿನಿ ಶಾಲೆಗೆ ಹೋಗಿ ಮನೆಗೆ ಬಂದವಳು ಇನ್ನು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ಕೊಠಡಿಗೆ ಕರೆಸಿಕೊಂಡು ಟ್ಯೂಷನ್‌ಗೆ ಯಾಕೆ ಹೋಗುತ್ತೀಯಾ? ನಾನು ಹೇಳಿ ಕೊಟ್ಟಷ್ಟು ಹೇಳಿ ಕೊಡ್ತಾರಾ? ಅವರ ಮನೆಯ ಪಾತ್ರೆ ತೊಳೆಯಲಿಕ್ಕೆ ಹೋಗುವುದಾ ಎಂದು ಕೇಳಿದ್ದಲ್ಲದೇ ಅವಾಚ್ಯ ಪದ ಬಳಸಿ ಅವಮಾನಿಸಿದ್ದಾರೆ ಎಂದಿದ್ದಾಳೆ.

ರಾತ್ರಿ ಮತ್ತೆ ವಿಚಾರಿಸಿದಾಗ, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ತನ್ನ ಮೈಕೈ ಗಲ್ಲ ಮುಟ್ಟಿ ಯಾರಿಗೂ ಹೇಳಬೇಡ. ನಿನಗೆ ನಾನು ಬೇಕಾ? ನಿನ್ನ ತಂದೆ ತಾಯಿ ಬೇಕಾ? ಎಂದು ಲೈಂಗಿಕ ಕಿರುಕುಳ ನೀಡಿರುವುದಾಗಿ ಮನೆಯವರಲ್ಲಿ ತಿಳಿಸಿದ್ದಾಳೆ. ಬಳಿಕ ಊರವರು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net