More

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಅವರ ಮುಂದಿರುವ ಸವಾಲುಗಳು ಯಾವುವು?

    ಬೆಂಗಳೂರು: ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ನೇಮಕ ಆಗುವುದರೊಂದಿಗೆ ಬಹಳ ದಿನಗಳಿಂದ ರಾಜಕೀಯ ವಲಯದಲ್ಲಿ ಪ್ರಶ್ನೆಯೇ ಆಗಿದ್ದ ಸಂಗತಿಯೊಂದಕ್ಕೆ ಉತ್ತರ ಸಿಕ್ಕಿದೆ.

    ಹಲವು ಲೆಕ್ಕಾಚಾರಗಳೊಂದಿಗೆ ಅಳೆದೂತೂಗಿ ನಿರ್ಧಾರ ಕೈಗೊಂಡಿರುವ ಬಿಜೆಪಿ ಹೈಕಮಾಂಡ್ ಇಂದು ತನ್ನ ನಿರ್ಣಯವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಮಾಡುವ ಮೂಲಕ ಪ್ರಕಟಿಸಿದೆ. ಈ ಮೂಲಕ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ಸಿಕ್ಕಿದೆ.

    ಇದನ್ನೂ ಓದಿ: ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ಪಟ್ಟ; ರಾಜ್ಯದಲ್ಲಿ ತಗ್ಗಿಲ್ಲ ರಾಜಾಹುಲಿ ಪ್ರಭಾವ!

    ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ, ವಿಜಯೇಂದ್ರ ಅವರ ವರ್ಚಸ್ಸು, ಪ್ರಭಾವ, ಸಾಮರ್ಥ್ಯ ಏನೇ ಇದ್ದರೂ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಅಷ್ಟು ಸುಲಭದ ಸಂಗತಿಯಲ್ಲ. ಪಕ್ಷವನ್ನು ನಡೆಸುವ ಜತೆಗೆ ಹತ್ತಿರದಲ್ಲೇ ಇರುವ ಲೋಕಸಭೆ ಚುನಾವಣೆ ಕೂಡ ವಿಜಯೇಂದ್ರ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿವೆ. ಇದಲ್ಲದೆ ಇನ್ನೂ ಹಲವು ಸವಾಲುಗಳು ಅವರ ಮುಂದಿವೆ.

    ಸಂಸತ್ ಸಂಕಟ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಈ ಲೋಕಸಭಾ ಚುನಾವಣೆಯ ಗೆಲುವು ಮಹತ್ವದ್ದು ಹಾಗೂ ಪ್ರತಿಷ್ಠೆಯ ಸಂಗತಿ ಆಗಿರುವುದರಿಂದ ವಿಜಯೇಂದ್ರ ಅವರಿಗೆ ಸಂಸತ್ ಚುನಾವಣೆ ಸಂಕಟ ಎನಿಸಿದರೂ ಅಚ್ಚರಿ ಏನಿಲ್ಲ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಏನೆಲ್ಲ ತಪ್ಪುಗಳಾದವು, ಹಿನ್ನಡೆಗೆ ಕಾರಣಗಳು ಏನು ಎಂಬುದನ್ನೆಲ್ಲ ತಿಳಿದು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲವು ಸಾಧಿಸುವಂತೆ ಮಾಡುವ ದೊಡ್ಡ ಸವಾಲು ವಿಜಯೇಂದ್ರ ಮುಂದಿದೆ.

    ಸಮುದಾಯ ಸಂಧಾನ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಬೃಹತ್ ಸಮುದಾಯಗಳ ಪೈಕಿ ಒಂದಾಗಿರುವ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್​ನತ್ತ ಒಲವು ತೋರಿದ್ದೇ ಅದು ಸ್ಪಷ್ಟ ಬಹುಮತದಲ್ಲಿ ಗೆದ್ದು ಅಧಿಕಾರ ಹಿಡಿಯಲು ಪ್ರಮುಖ ಕಾರಣ. ಈ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಸಮುದಾಯ ಮತ್ತೆ ಬಿಜೆಪಿಯತ್ತ ವಾಲುವಂತೆ, ಒಲವು ತೋರುವಂತೆ ಮಾಡುವ ಜವಾಬ್ದಾರಿ ವಿಜಯೇಂದ್ರ ಅವರ ಮುಂದಿದೆ. ಇದು ಸುಲಭದ ಸಂಗತಿ ಅಲ್ಲದ್ದರಿಂದ ಇದೂ ಒಂದು ದೊಡ್ಡ ಸವಾಲಾಗಿರಲಿದೆ.

    ಗುಂಪುಗಾರಿಕೆ ನಿಯಂತ್ರಣ

    ಬಿಜೆಪಿಯಲ್ಲಿ ಬಹಿರಂಗವಾಗಿ ಎಲ್ಲವೂ ಚೆನ್ನಾಗಿದ್ದಂತೆ ಕಾಣಿಸಿದರೂ ಎಲ್ಲ ಪಕ್ಷಗಳಲ್ಲಿ ಇರುವಂತೆ ಇಲ್ಲಿಯೂ ಆಂತರಿಕ ಸಂಘರ್ಷ, ಗುಂಪುಗಾರಿಕೆ ಸಾಕಷ್ಟಿದೆ. ಜಾತಿ, ಸಂಘ ಪರಿವಾರ, ವಲಸೆ ಬಂದವರು.. ಹೀಗೆ ನಾನಾ ಸಂಗತಿಗಳನ್ನು ಅವಲಂಬಿಸಿ ಇರುವ ಈ ಗುಂಪುಗಾರಿಕೆ ನಿಯಂತ್ರಣ ಕೂಡ ವೈಯಕ್ತಿಕ ಸಾಮರ್ಥ್ಯಕ್ಕೆ ಒಂದು ಅಳತೆಗೋಲಿನಂತೆ ಇರುವುದರಿಂದ ಇದು ಕೂಡ ಅವರಿಗೆ ಸವಾಲಾಗಿ ಪರಿಣಮಿಸಲಿದೆ.

    ಹಿರಿ-ಕಿರಿಯರ ಜತೆ ಸಾಮರಸ್ಯ

    ಪಕ್ಷದಲ್ಲಿ ಅನೇಕ ಹಿರಿತಲೆಗಳಿದ್ದು, ಪ್ರಭಾವಿಗಳಾಗಿರುವ ಅವರ ಮಾತನ್ನು ಅಷ್ಟು ಸುಲಭದಲ್ಲಿ ತೆಗೆದುಹಾಕಲು ಸಾಧ್ಯವಿಲ್ಲ. ಅಲ್ಲದೆ, ಈಗಾಗಲೇ ಕೆಲವರು ಮಾಜಿ ಸಿಎಂ ಬಿಎಸ್​ವೈ ಅಧಿಕಾರದಲ್ಲಿದ್ದಾಗಲೇ ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದು, ಅಂಥವರನ್ನು ಬಿಎಸ್​ವೈ ಪುತ್ರ ನಿಭಾಯಿಸುವುದು ಸುಲಭವಲ್ಲ. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಹೊಸ ಮುಖಗಳಿಗೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಯುವ ನಾಯಕರನ್ನೂ ಕಡೆಗಣಿಸುವಂತಿಲ್ಲ. ಹೀಗೆ ಹಿರಿ-ಕಿರಿಯರಿಬ್ಬರನ್ನೂ ಒಟ್ಟಿಗೇ ಸಾಮರಸ್ಯದಲ್ಲಿ ಇರಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕೂಡ ದೊಡ್ಡ ಸವಾಲೇ.

    ಕೈಮೀರಿದ ಪ್ರಯತ್ನ

    ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರ ಪಡೆದು, ಗ್ಯಾರಂಟಿಗಳ ಜಾರಿಯಿಂದ ಹಿಗ್ಗಿರುವ ಕಾಂಗ್ರೆಸ್ ಪಕ್ಷ ಈ ಸಲ ಬಿಜೆಪಿಗೆ ಭಾರಿ ಪ್ರತಿಸ್ಪರ್ಧಿ ಆಗಿರಲಿದೆ. ಅಧಿಕಾರದಲ್ಲಿ ಇರುವುದರಿಂದ ಈಗಾಗಲೇ ಒಂದಷ್ಟು ಆಯಕಟ್ಟಿನ ಜಾಗ-ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿರುವ ಕಾಂಗ್ರೆಸ್ ವಿರುದ್ಧ ಕಾರ್ಯತಂತ್ರ ಹೆಣೆಯುವುದು ಕೂಡ ಭಾರಿ ಸಂಗತಿಯೇ. ಅದರಲ್ಲೂ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಅವರಂಥ ಎರಡು ಪ್ರಬಲ ಸಮುದಾಯದ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್​​ ಪಕ್ಷವನ್ನು ಮಣಿಸಲು ವಿಜಯೇಂದ್ರ ಕೈಮೀರಿದ ಪ್ರಯತ್ನ ಮಾಡಬೇಕಾಗಿರುವುದು ಮತ್ತೊಂದು ಸವಾಲು.

    ಮೋದಿ-ಷಾ ವಿಶ್ವಾಸ

    ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಂತಾದವರು ವಿಜಯೇಂದ್ರ ಅವರಿಗೆ ನೀಡಿದ್ದಾರೆ. ಪಕ್ಷದ ವರಿಷ್ಠರು, ಕೇಂದ್ರ ನಾಯಕರು ಇಂಥ ದೊಡ್ಡ ಜವಾಬ್ದಾರಿ ಕೊಟ್ಟಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಅವರು ತಮ್ಮ ಮೇಲೆ ಇರಿಸಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕಾದ ಅತ್ಯಂತ ಮಹತ್ವದ ಸವಾಲು ವಿಜಯೇಂದ್ರ ಮುಂದಿದೆ.

    ಕಾರ್ಯಕರ್ತರ ಒಲವು

    ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ ಎಂದೇ ಹೆಸರುವಾಸಿ. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ, ಪಕ್ಷಕ್ಕಾಗಿ ಏನೇ ಮಾಡಬೇಕಾಗಿ ಬಂದರೂ ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ಪಾತ್ರ, ಅವರ ಸಂಘಟಿತ ಪ್ರಯತ್ನ ಮಹತ್ವದ್ದು. ಅಪಾರ ಸಂಖ್ಯೆಯಲ್ಲಿರುವ ಈ ಕಾರ್ಯಕರ್ತರನ್ನು ಒಗ್ಗೂಡಿಸಿ, ಉತ್ಸಾಹ ತುಂಬಿ, ಪಕ್ಷಕ್ಕಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಮಾಡುವ ಸವಾಲನ್ನೂ ವಿಜಯೇಂದ್ರ ನಿಭಾಯಿಸಬೇಕಾಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಹಿಂದೆ ಏನೇನಿದೆ ಲೆಕ್ಕಾಚಾರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts