

| ವಿಲಾಸ ಮೇಲಗಿರಿ ಬೆಂಗಳೂರು
ರಾಜ್ಯದಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ/ದೌರ್ಜನ್ಯ/ನಿಂದನೆ ಪ್ರಕರಣ ದಿನೇದಿನೆ ಹೆಚ್ಚುತ್ತಿವೆ. ಕಟ್ಟುನಿಟ್ಟಿನ ಕಾಯ್ದೆ ಇಲ್ಲದೆ ಇರುವುದರಿಂದ ಇಂತಹ ಪ್ರಕರಣಗಳು ಎಗ್ಗಿಲ್ಲದೆ ನಿರಂತರವಾಗಿ ನಡೆಯುತ್ತಿವೆ. ಹಲ್ಲೆಕೋರರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ಓಡಾಡುವ
ಸ್ಥಿತಿ ಇದೆ. ವೈದ್ಯರ ಮೇಲಿನ ಹಲ್ಲೆಗಳಿಗಂತೂ ಮಿತಿಯೇ ಇರಲಿಲ್ಲ. ಇತ್ತೀಚೆಗೆ ಕಠಿಣ ಕಾಯ್ದೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ವೈದ್ಯರ ಮೇಲಿನ ಹಲ್ಲೆ, ಆಸ್ಪತ್ರೆಗಳ ಮೇಲಿನ ದಾಳಿ ಪ್ರಕರಣ ಕಡಿಮೆಯಾಗಿವೆ.
ಮಹಾರಾಷ್ಟ್ರದ ಕಾಯ್ದೆ ಏನು..?: ಸರ್ಕಾರಿ ಅಧಿಕಾರಿ/ನೌಕರರ ಮೇಲಿನ ಹಲ್ಲೆ/ದೌರ್ಜನ್ಯ ತಡೆಗೆ ಮಹಾರಾಷ್ಟ್ರ ಸರ್ಕಾರ ಮಾದರಿ ಕಾಯ್ದೆ ಜಾರಿಗೊಳಿಸಿದೆ. ಐಪಿಸಿ 332 ಮತ್ತು 353ಕ್ಕೆ ತಿದ್ದುಪಡಿ ತಂದು ಕಡಿವಾಣ ಹಾಕಿದೆ. ಐಪಿಸಿ ಕಲಂ 332ರ ಅಡಿ 2 ವರ್ಷವಿದ್ದ ಕಾರಾಗೃಹ ವಾಸವನ್ನು 5 ವರ್ಷಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕಲಂ 353ರಲ್ಲೂ 3 ವರ್ಷ ಇದ್ದ ಜೈಲು ಶಿಕ್ಷೆಯನ್ನು 5 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಸಿಆರ್ಪಿಸಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಅಧಿಕಾರಿ/ನೌಕರರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿ 6 ತಿಂಗಳ ಒಳಗೆ ಕೋರ್ಟ್ ವಿಚಾರಣೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಈ ಪ್ರಕರಣಗಳ ವಿಚಾರಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಬದಲು ಸೆಷನ್ ಕೋರ್ಟ್ನಲ್ಲಿ ವಿಚಾರಣೆಗೆ ಆಸ್ಪದ ಮಾಡಿಕೊಡಲಾಗಿದೆ. ಇದರಿಂದ ಅಧಿಕಾರಿ/ನೌಕರರ ಮೇಲೆ ಹಲ್ಲೆಗೆ ಭಯಪಡುವ ಸ್ಥಿತಿ ನಿರ್ವಣವಾಗಿದೆ.
ಹಲ್ಲೆಕೋರರು ಯಾರು?: ಆರ್ಟಿಐ ಕಾರ್ಯಕರ್ತರು, ವಿಜಿಟಿಂಗ್ ಕಾರ್ಡ್ ಸಂಘಟನೆಗಳ ಪ್ರತಿನಿಧಿಗಳು, ರಾಜಕೀಯ ಪ್ರಚೋದನೆ ಕಾರಣ ಸರ್ಕಾರಿ ಅಧಿಕಾರಿ/ನೌಕರರ ಮೇಲೆ ದೌರ್ಜನ್ಯ/ಹಲ್ಲೆ ನಡೆಯುತ್ತಿವೆ. ಇನ್ನು ಕೆಲವರು ಕರ್ತವ್ಯ ನಿರತ ಸಿಬ್ಬಂದಿ ಚಲನ-ವಲನಗಳನ್ನು ವಿಡಿಯೋ ರೆಕಾರ್ಡ್ ಮಾಡುವುದು, ಮಾತುಕತೆಗಳನ್ನು ಆಡಿಯೋ ರೆಕಾರ್ಡ್ ಮಾಡುವ ಮೂಲಕ ಮಾನಸಿಕ ಕಿರಿಕಿರಿ ಕೊಡುತ್ತಿರುವ ಪ್ರಕರಣಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ.
ನ್ಯಾಯ ಸಿಗುವುದು ಕಷ್ಟ: ಯಾವುದೇ ಸರ್ಕಾರಿ ಅಧಿಕಾರಿ/ನೌಕರರು ತಮ್ಮ ಮೇಲೆ ನಡೆಯುವ ಹಲ್ಲೆ/ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮೇಲಧಿಕಾರಿ ಒಪ್ಪಿಗೆ ಪಡೆಯಬೇಕು. ಈ ಒಪ್ಪಿಗೆ ಪಡೆಯುವ ವೇಳೆಗೆ ಪ್ರಕರಣ ನಾನಾ ತಿರುವ ಪಡೆಯುವ ಸಾಧ್ಯತೆಗಳಿವೆ. ಆದರೆ, ಹಲ್ಲೆಕೋರರು ನೇರವಾಗಿ ಎಫ್ಐಆರ್ ದಾಖಲಿಸುತ್ತಾರೆ. ಇದರಿಂದ ನೌಕರರಿಗೆ ನ್ಯಾಯ ಸಿಗುವುದು ಕೂಡ ಕಷ್ಟ ಎಂದು ಹೇಳಲಾಗುತ್ತಿದೆ.
ರಾಜೀ ಸಂಧಾನ...: ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಮೇಲೆ ಅದರಲ್ಲೂ ಕೆಳ ಹಂತದ ನೌಕರರ ಮೇಲೆ ನಡೆಯುವ ಹಲ್ಲೆ/ದೌರ್ಜನ್ಯ ಪ್ರಕರಣಗಳು/ಕಿರುಕುಳಗಳು ರಾಜೀ ಸಂಧಾನದ ಮೂಲಕವೇ ಹೆಚ್ಚು ಪರಿಹಾರ ಕಾಣುತ್ತಿವೆ. ನೌಕರಿಯ ಅನಿವಾರ್ಯತೆ, ಉಳ್ಳವರು ಹಾಗೂ ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳದ ಮೃದು ಸ್ವಭಾವದಿಂದ ಅನೇಕ ಪ್ರಕರಣಗಳು ರಾಜೀ ಪಂಚಾ ಯಿತಿಯಲ್ಲಿ ಪರಿಹಾರ ಕಾಣುತ್ತವೆ.
ಯಾವ ಇಲಾಖೆಯಲ್ಲಿ ಹೆಚ್ಚು?: ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸ್ಥಳೀಯ ಸಂಸ್ಥೆಗಳ ಅಧಿಕಾರಿ/ನೌಕರರ ವೃಂದದ ಮೇಲೆ ಹಲ್ಲೆ/ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ.
ಸರ್ಕಾರಿ ಅಧಿಕಾರಿ ಹಾಗೂ ನೌಕರರ ಮೇಲಿನ ಹಲ್ಲೆ/ದೌರ್ಜನ್ಯ/ನಿಂದನೆ ಪ್ರಕರಣ ತಡೆಗೆ ಕಠಿಣ ಕಾಯ್ದೆ ಅವಶ್ಯವಿದೆ. ಮಹಾರಾಷ್ಟ್ರ ಮಾದರಿ ಕಾಯ್ದೆ ಇಲ್ಲೂ ಜಾರಿಗೊಳಿಸಬೇಕು. ನೌಕರರು ಆತ್ಮಸ್ಥೈರ್ಯದಿಂದ ಕೆಲಸ ನಿರ್ವಹಿಸುವ ವಾತಾವರಣ ಸೃಷ್ಟಿ ಮಾಡಬೇಕು. ಈ ಬಗ್ಗೆ ಸಂಘ ಸರ್ಕಾರವನ್ನು ಒತ್ತಾಯಿಸಲಿದೆ. | ಸಿ.ಎಸ್.ಷಡಾಕ್ಷರಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ರಾಜ್ಯದಲ್ಲಿ 7,68,975 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 5,16,073 ಹುದ್ದೆ ಭರ್ತಿ ಇವೆ. 2,52,902 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಹೆಚ್ಚುವರಿ ಕೆಲಸದ ಹೊರೆಯನ್ನು ಹಾಲಿ ಇರುವ ನೌಕರರೇ ಹೊರಬೇಕಾಗಿದೆ. ಕೃಷಿ ಇಲಾಖೆಯಲ್ಲಿ 5,893, ರೇಷ್ಮೆ ಇಲಾಖೆ 2,578, ಪಶು ಸಂಗೋಪನೆ 9,434, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 5,585, ಸಾರಿಗೆ 1,559, ಸಹಕಾರ 4610, ಪರಿಶಿಷ್ಟ ಜಾತಿಗಳ ಕಲ್ಯಾಣ 9,378, ಪರಿಶಿಷ್ಟ ಜಾತಿಗಳ ಕಲ್ಯಾಣ 2,303, ಹಿಂದುಳಿದ ವರ್ಗಗಳ ಕಲ್ಯಾಣ 7,935, ಪ್ರವಾಸೋದ್ಯಮ 372, ಉನ್ನತ ಶಿಕ್ಷಣ 12,319, ಸಣ್ಣ ಕೈಗಾರಿಕೆ 581, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಲ್ಲಿ 4,140... ಹೀಗೆ ಪ್ರಮುಖ ಇಲಾಖೆಗಳಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಮೇಲೆ ಕಾರ್ಯಒತ್ತಡ ಹೆಚ್ಚಿದೆ. ತಾಂತ್ರಿಕ ಕಾರಣಗಳೂ ಅನೇಕ ಕಡೆ ಸಾರ್ವಜನಿಕರು ಮತ್ತು ನೌಕರರ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿವೆ. ಡೇಟಾ, ಸರ್ವರ್ ಮತ್ತಿತರ ಸಮಸ್ಯೆಗಳೂ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿವೆ ಎನ್ನಲಾಗಿದೆ.
ದೂರು ಕೊಡಬಹುದು: ಕಾನೂನು ಕೈಗೆತ್ತಿಕೊಳ್ಳದೆ ಅಧಿಕಾರಿ/ನೌಕರರ ವಿರುದ್ಧ ದೂರು ಕೊಡಲು ಸಾಕಷ್ಟು ಅವಕಾಶಗಳಿವೆ. ತಹಸೀಲ್ದಾರ್- ಉಪ ವಿಭಾಗಾಧಿಕಾರಿ- ಜಿಲ್ಲಾಧಿಕಾರಿ-ಸರ್ಕಾರ... ಹೀಗೆ ನಾನಾ ಹಂತಗಳಲ್ಲಿ ದೂರು ಕೊಟ್ಟು ಸಮಸ್ಯೆ ಪರಿಹರಿಸಿಕೊಳ್ಳಬಹುದು. ಆದರೆ, ಇವಾವುವನ್ನೂ ಪರಿಗಣಿಸದೇ ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸುತ್ತಿರುವುದು ದುರದೃಷ್ಟಕರ ಎಂದು ನೌಕರರು ಹೇಳುತ್ತಾರೆ.