

ಹೈದರಾಬಾದ್: ಆಕಸ್ಮಿಕ ಪರಿಚಯ, ಒಳ್ಳೆಯ ಸ್ನೇಹಿತೆಯಾಗಿ ಉಳಿದುಕೊಂಡಿದ್ದ ಯುವತಿಗೆ ನೀನು ನನ್ನ ಹೆಂಡತಿ ಆಗಬೇಕು ಎಂದ ಹಠ ಹಿಡಿದ ಪಾಗಲ್ ಪ್ರೇಮಿಯೊಬ್ಬ (Harassment Case), ಯುವತಿಗೆ ಆದ ಮದುವೆ ಸಂಬಂಧವನ್ನು ನಿಶ್ಚಿತಾರ್ಥಕ್ಕೆ ಮುರಿದು ಬೀಳುವಂತೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆಕೆಗೆ ತನ್ನನ್ನೇ ಮದುವೆ ಆಗುವಂತೆ ಒತ್ತಾಯಿಸಿದ್ದಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಈ ವಿಷಯ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬೇಸತ್ತ ಯುವತಿ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಪೊಲೀಸರ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ಬಾಲ್ಕೊಂಡ ಪ್ರದೇಶದ ಯುವತಿ (21) ಎರಡನೇ ವರ್ಷದ ಪದವಿ ಓದುತ್ತಿದ್ದು, ನಗರದ ಹಾಸ್ಟೆಲ್‌ನಲ್ಲಿ ಉಳಿದಿದ್ದಳು. ಕಾಮರೆಡ್ಡಿಯ ನಿವಾಸಿ ಶೇಷು ಕುಮಾರ್ (28) ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಆಗಿದ್ದು, ಕಳೆದ ಒಂಬತ್ತು ತಿಂಗಳ ಹಿಂದೆ ಬಸ್‌ನಲ್ಲಿ ಈ ಯುವತಿಯನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದ. ಇದಾದ ಬಳಿಕ ಆಕೆಯೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ಶೇಷು, ತನ್ನನ್ನು ಮದುವೆ ಆಗುವಂತೆ ಪೀಡಿಸಲು ಶುರು ಮಾಡಿದ್ದ. ಇದಕ್ಕೆ ಯುವತಿ ನಿರಾಕರಿಸಿದರೂ ಬೆಂಬಿಡದೆ ಹಿಂಸೆ ನೀಡುತ್ತಿದ್ದ.
ಶೇಷು ಮದುವೆ ಒತ್ತಾಯಕ್ಕೆ ಮಣಿಯದ ಯುವತಿ, ಇದನ್ನು ತಿರಸ್ಕರಿದ್ದಾಳೆ. ನಾವು ಸ್ನೇಹಿತರಾಗಿದ್ದೇವೆ, ಮುಂದೆಯೂ ಸ್ನೇಹಿತರಾಗಿಯೇ ಇರೋಣ ಎಂದು ತಿಳಿ ಹೇಳಿದ್ದಾಳೆ. ಇದಕ್ಕೆ ಕೆಂಡಾಮಂಡಲಗೊಂಡ ಪಾಗಲ್ ಪ್ರೇಮಿ, ಒಳ್ಳೆಯ ಸ್ನೇಹಿತರಾಗಿದ್ದ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಮುಂದಿಟ್ಟು ಬೆದರಿಕೆ ಹಾಕಿದ್ದ. ಇದೇ ಸಮಯದಲ್ಲಿ ಹೆತ್ತವರು ನೋಡಿದ್ದ ಹುಡುಗನೊಂದಿಗೆ ಯುವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈ ವಿಷಯವನ್ನು ಆಕೆಯ ಸ್ನೇಹಿತರಿಗೂ ತಿಳಿಸಿದ್ದಳು.
ಆಕೆಯ ಸ್ನೇಹಿತರಿಂದ ಮಾಹಿತಿ ಕಲೆಹಾಕಿದ ಕಿರಾತಕ, ಮೇ.6ರಂದು ಸಂಜೆ 5.30ರ ಸುಮಾರಿಗೆ, ಬೇಗಂಪೇಟೆ ಫ್ಲೈಓವರ್‌ನಲ್ಲಿ ಆಕೆಯೊಂದಿಗೆ ಜಗಳವಾಡಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಫೋನ್ ನಂಬರ್ ಪಡೆದು ತಮ್ಮಿಬ್ಬರ ಫೋಟೋಗಳನ್ನು ಕಳುಹಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾನೆ. ಇದರಿಂದ ಮದುವೆ ಹಂತ ತಲುಪಬೇಕಿದ್ದ ಸಂಬಂಧ ನಿಶ್ಚಿತಾರ್ಥದಲ್ಲೇ ಮುರಿದುಬಿದ್ದಿದೆ.
ತನ್ನನ್ನು ಮದುವೆ ಆಗುವಂತೆ ಒತ್ತಡ ಹೇರಿದ್ದಲ್ಲದೇ ಬೇರೆ ಯಾರನ್ನಾದರೂ ವಿವಾಹವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನು. ಈ ಬಗ್ಗೆ ಸ್ವತಃ ಮನನೊಂದ ಯುವತಿಯೇ ಬೇಗಂಪೇಟೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಖಾಕಿ ಪಡೆ, ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).